ಮಾಹಿತಿ ಹಕ್ಕು ಕಾಯ್ದೆಯು ಪ್ರತಿಯೊಬ್ಬ ನಾಗರಿಕನ ನ್ಯಾಯಬದ್ಧ ಹಕ್ಕು ಚಲಾವಣೆಗೆ ಮತ್ತು ಆತನ ಹಿತಾಸಕ್ತಿ ಅಥವಾ ಹಿತರಕ್ಷಣೆಗೆ ವಿರುದ್ಧವಾಗಿ ವರ್ತಿಸುವ ಅಥವಾ ನಿರ್ಲಕ್ಷಿಸುವ ಯಾವುದೇ ಸಾರ್ವಜನಿಕ ಕಚೇರಿ ಅಥವಾ ಅಧಿಕಾರಿ ವಿರುದ್ಧ ಹೋರಾಡಿ ನ್ಯಾಯ ಗಳಿಸುವ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. 2005ರಲ್ಲಿ ಬಂದ ಈ ಕಾಯ್ದೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾನೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕ, ಸಾರ್ವಜನಿಕ ಕ್ಷೇತ್ರ, ಕಚೇರಿ ಅಥವಾ ಅಧಿಕಾರಿಗಳಿಗೆ ಸರಿಯಾದ ಆಡಳಿತಕ್ಕೆ ಪಾರದರ್ಶಕ ಮಾಹಿತಿ ನೀಡಲು, ಲಂಚಗುಳಿತನ, ಪಕ್ಷಪಾತತನ ತಡೆಯಲು, ಸಾರ್ವಜನಿಕ ಅಧಿಕಾರಿಗಳು ಕಾನೂನಿನ ನಿಯಮಾನುಸಾರವಾಗಿ ಜವಾಬ್ದಾರಿಯಿಂದ ಕೆಲಸ ಮಾಡಲು, ಅಧಿಕಾರಿಗಳ ಜವಾಬ್ದಾರಿ ತಿಳಿಯಲು, ಆಡಳಿತದ ಪ್ರತಿ ಹಂತದಲ್ಲಿ ಸುಧಾರಣೆ ತರಲು ಮಾನವೀಯ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಮತ್ತು ಪರಿಪೂರ್ಣವಾಗಿ ಜಾರಿಗೊಳಿಸಲು, ನಾಗರಿಕರು ಸರ್ಕಾರದ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಮತ್ತು ಸಾರ್ವಜನಿಕ ಯೋಜನೆಗಳ ಜಾರಿಯಲ್ಲಿ ಭಾಗವಹಿಸಲು, ಇತ್ಯಾದಿಗಳಿಗೆ ಈ ಕಾಯ್ದೆ ಬಹಳ ಉಪಯುಕ್ತವಾಗಿದೆ. ಪ್ರತಿಯೊಬ್ಬ ನಾಗರಿಕ ಕೇಂದ್ರ ಅಥವಾ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ, ಕೇಂದ್ರ, ರಾಜ್ಯ ಸರಕಾರದ ಮಂತ್ರಿಗಳ ಕಚೇರಿಯಿಂದ, ರಾಜ್ಯಪಾಲರ ಕಚೇರಿಯಿಂದ, ಕ್ಯಾಬಿನೆಟ್‍ನಿಂದ, ವಿಧಾನಸಭೆ-ವಿಧಾನ ಪರಿಷತ್‍ಗಳಿಂದ, ಮಹಾನಗರ ಪಾಲಿಕೆ, ಪುರಸಭೆ, ನಗರ ಪಂಚಾಯತ್, ಗ್ರಾಮ ಅಥವಾ ಜಿಲ್ಲಾ ಪಂಚಾಯತ್‍ಗಳಿಂದ, ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ, ಜೀವ ವಿಮಾ ನಿಗಮ, ಸಾಮಾನ್ಯ ವಿಮಾ ನಿಗಮ, ಸಾರ್ವಜನಿಕ ಸಂಸ್ಥೆಗಳಿಂದ, ಸರಕಾರದಿಂದ ಅನುದಾನ ಪಡೆಯುವ/ಸಹಾಯ ಪಡೆಯುವ ಸಂಸ್ಥೆಗಳಿಂದ, ಸರಕಾರದ ಶೇರು ಬಂಡವಾಳ ಹೊಂದಿರುವ ಸಂಸ್ಥೆಯಿಂದ, ಚುನಾಯಿತ ಸದಸ್ಯರುಗಳಿಂದ ಮಾಹಿತಿ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ.
ಸಹಕಾರಿ ಇಲಾಖೆಯ ಅಧಿಕಾರಿಗಳು ಅವರ ಇಲಾಖೆಯ ಅಧೀನದಲ್ಲಿರುವ, ನಿಯಂತ್ರಣಕ್ಕೆ ಒಳಪಟ್ಟ ಸಹಕಾರಿ ಸಂಘಗಳಿಗೆ/ಸಹಕಾರಿ ಬ್ಯಾಂಕುಗಳಿಗೆ ಸಂಬಂಧಪಟ್ಟ ವಿವರಗಳನ್ನು ನೀಡಬೇಕಾಗುವುದು, ಸಾರ್ವಜನಿಕರು ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಮಾಹಿತಿಗಳನ್ನು/ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣೀಕೃತ ಪ್ರತಿಯನ್ನು
ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಈ ಬಗ್ಗೆ ಸಾರ್ವಜನಿಕರು/ನಾಗರೀಕರು ನಿಗದಿತ ನಮೂನೆಯ ಅರ್ಜಿಯನ್ನು ಕೇವಲ ರೂ.10/- ಶುಲ್ಕದೊಂದಿಗೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಲ್ಲಿಸಿದ 30 ದಿನಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿಯಲ್ಲಿ ಕೇಳಿರುವ ಮಾಹಿತಿ/ದಾಖಲೆಗಳನ್ನು ಅರ್ಜಿದಾರನಿಗೆ ನೀಡಬೇಕು. ತಪ್ಪಿದಲ್ಲಿ ಸದರಿ ಅಧಿಕಾರಿ ದಂಡ ಅಥವಾ ಶಿಕ್ಷೆಗೆ ವೈಯುಕ್ತಿಕವಾಗಿ ಬಾಧ್ಯಸ್ತರಾಗಿರುತ್ತಾರೆ.ಅಂದರೆ ಸಂಬಂಧಪಟ್ಟ ಅಧಿಕಾರಿಯೇ ದಂಡ ಅಥವಾ ಶಿಕ್ಷೆ ಅನುಭವಿಸಬೇಕು. ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನಾಗರಿಕ ಹೊಂದಿರುತ್ತಾನೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ನ್ಯಾಯವಾದಿ ಕಾರ್ಕಳ (ಮೊ: 9845232490)
