ಕಾರ್ಕಳ, ನ.4 : ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಎಸೆಸೆಲ್ಸಿ ವಿದ್ಯಾರ್ಥಿಗಳಾದ ಸುಪ್ರೀತಾ ನಾಯಕ್ ( 616), ಆಶ್ವಿತಾ (615) ಮತ್ತು ಸೌಮ್ಯಾ ಪ್ರಭು( 614) ಇವರಿಗೆ ತಾಲೂಕಿನ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾಧನೆಗಾಗಿ ಎಸೆಸೆಲ್ಸಿ ಬೋರ್ಡಿನ ವತಿಯಿಂದ ಲ್ಯಾಪ್ ಟಾಪ್ ಕೊಡುಗೆಯಾಗಿ ದೊರೆತಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಹಂಚಿಕೊಂಡ ಕಲ್ಯಾ ಸರಕಾರಿ ಪ್ರೌಢಶಾಲೆಯ ಸಾಯಿ ಗಣೇಶ್ ಮತ್ತು ಪೆರ್ವಾಜೆ ಸರಕಾರಿ ಪ್ರೌಢಶಾಲೆಯ ಅದ್ವೈತ್ ಶರ್ಮಾ ( ಇಬ್ಬರೂ 620 ಅಂಕ) ಇವರಿಗೂ ಲ್ಯಾಪ್ ಟಾಪ್ ದೊರೆತಿದೆ. ಈ ಲ್ಯಾಪ್ ಟಾಪ್‌ಗಳನ್ನು ಕಾರ್ಕಳದಲ್ಲಿ ನಡೆದ ಸರಳ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕರಾದ ವಿ. ಸುನೀಲ್ ಕುಮಾರ್ ಅವರು ಹಸ್ತಾಂತರ ಮಾಡಿ ಅಭಿನಂದಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಪುರಸಭೆಯ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ. ಎಸ್ ಅವರು ಹಾಜರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಬೈಲೂರು ಸರಕಾರಿ ಪ್ರೌಢಶಾಲೆಯ ಮೂರು ಮಕ್ಕಳು ಈ ಲ್ಯಾಪ್ ಟಾಪ್ ಗಳನ್ನು ಪಡೆದದ್ದು ಮತ್ತು ಕಾರ್ಕಳದ ಒಟ್ಟು ಐದು ವಿದ್ಯಾರ್ಥಿಗಳು ಈ ಸಾಧನೆಗೆ ಕಾರಣವಾದದ್ದು ಬಹು ದೊಡ್ಡ ಸಾಧನೆ. ಕಾರ್ಕಳ ತಾಲೂಕು ಕಳೆದ ವರ್ಷ ನಡೆಸಿದ ಮಿಷನ್ ಹಂಡ್ರೆಡ್ ಕಾರ್ಯಕ್ರಮದ ಫಲಶ್ರುತಿ ಇದು. ತಾಲೂಕು ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 89.65 ಫಲಿತಾಂಶ ಪಡೆದಿದ್ದು ಇದು ಉಡುಪಿ ಜಿಲ್ಲೆಯಲ್ಲಿಯೇ ಅಧಿಕವಾಗಿತ್ತು ಎಂದು ಬಿಇಒ ಶಶಿಧರ ಜಿ.ಎಸ್ ಅವರು ಹೇಳಿದರು.
