ಸಾಮಾಜಿಕ ಅಭಿವೃದ್ಧಿಯ ಹರಿಕಾರ ಜಯ ಸುವರ್ಣ

    

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾಗಿ ಮುಂಬಯಿ ಮಹಾನಗರದ ಹೃದಯ ಭಾಗದಲ್ಲಿ ಬಿಲ್ಲವ ಭವನವನ್ನು ಸ್ಥಾಪಿಸಿ ಸಮಾಜದ ಹಿರಿಮೆಯನ್ನು ಎತ್ತಿ ತೋರಿಸಿದ ಬಿಲ್ಲವ ಕುಲ ಶಿರೋಮಣಿ ,5 ಶಾಖೆಗಳನ್ನು ಹೊಂದಿದ ಭಾರತ್ ಬ್ಯಾಂಕಿನ ಅಧ್ಯಕ್ಷರಾಗಿ ನೂರಕ್ಕೂ ಮಿಕ್ಕಿ ಶಾಖೆಗಳನ್ನು ದೇಶದ ವಿವಿಧ ಭಾಗದಲ್ಲಿ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತ, ದೇಶ ವಿದೇಶಗಳಲ್ಲಿ ಸುಮಾರು 275ಕ್ಕೂ ಮಿಕ್ಕ ಸಂಘಸಂಸ್ಥೆಗಳು ಸದಸ್ಯತ್ವ ಹೊಂದಿರುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಮತ್ತು ಹಾಲಿ ಗೌರವಾಧ್ಯಕ್ಷರು ಆಗಿರುವ ಇವರು ಮುಲ್ಕಿ ಕೇಂದ್ರ ಭಾಗದಲ್ಲಿ ಬಿಲ್ಲವ ಮಹಾಮಂಡಲ ಭವನವನ್ನು ಸ್ಥಾಪಿಸಿದ ಬಿಲ್ಲವ ರತ್ನ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ,ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯ ರೂವಾರಿ , ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಮೂಲಕ ನಾರಾಯಣ ಗುರು ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ಸ್ಥಾಪಿಸಿದರು.

ಮಾತ್ರವಲ್ಲದೆ ಎರಡೂ ಬ್ಯಾಂಕ್‍ಗಳ ಮೂಲಕ ಆರ್ಥಿಕ ಕ್ಷೇತ್ರದಲ್ಲಿಯೂ ಸೈ ಎನಿಸಿ ಕೊಂಡವರು . ಬಿಲ್ಲವ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ನಾರಾಯಣ ಗುರು ಶಿಕ್ಷಣ ಸಂಸ್ಥೆ ಪಡುಬೆಳ್ಳೆ ಹಾಗೂ ನಾರಾಯಣ ಗುರು ಶಿಕ್ಷಣ ಸಂಸ್ಥೆ ಮೂಲ್ಕಿ ಇದರ ಸರ್ವತೋಮುಖ ಅಭಿವೃದ್ದಿಯಲ್ಲಿ ಇವರದ್ದು ಸಿಂಹ ಪಾಲು . ಕೋಟಿ ಚೆನ್ನಯರ ಜನ್ಮ ಸ್ಥಳ ಗೆಜ್ಜೆಗಿರಿ ನಂದನ ಬಿತ್ತಿಲು ಇದರ ಗೌರವಾಧ್ಯಕ್ಷರಾಗಿ ಅಭಿವೃದ್ಧಿ ಕೆಲಸದಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡ ಇವರು ಸಮಾಜದ ಸಂಘಸಂಸ್ಥೆಗಳ ಅಭಿವೃದ್ಧಿಯಲ್ಲಿ ಸಾಕಷ್ಟು ಆರ್ಥಿಕ ಸಹಾಯವನ್ನು ಮಾಡುವ ಮೂಲಕ ದಾನ ಶೂರ ಕರ್ಣ ಎನಿಸಿಕೊಂಡಿದ್ದರು.

ಹೀಗೆ ಸಾಮಾಜಿಕ , ಆರ್ಥಿಕ , ಶೈಕ್ಷಣಿಕ , ಧಾರ್ಮಿಕ , ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ  ಬಿಲ್ಲವ ಭೀಷ್ಮ,  ಮಹಾಚೇತನ ,ಸಮಾಜ ರತ್ನ  ಹೀಗೆ ಹಲವಾರು ಬಿರುದು ಪ್ರಶಸ್ತಿಗಳೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಮುಡಿಗೇರಿಸಿ ಕೊಂಡ ಜಯ ಸಿ. ಸುವರ್ಣರು ಇಂದು ನಮ್ಮನ್ನಗಲಿರುವುದು ಇಡೀ ಸಮಾಜಕ್ಕೆ ತುಂಬಲಾರದ ನಷ್ಟ . ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ . ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸಮಾಜ ಮತ್ತವರ ಸಂಸಾರ ಕುಟುಂಬಕ್ಕೆ ಕುದ್ರೋಳಿ ಗೋಕರ್ಣನಾಥ, ಕಟಪಾಡಿ ವಿಶ್ವನಾಥ ಹಾಗೂ ನಾರಾಯಣ ಗುರುಗಳು ಕರುಣಿಸಲಿ ಎಂದು ಪ್ರಾರ್ಥನೆ .    

ಹರಿಶ್ಚಂದ್ರ ಅಮೀನ್
ಅಧ್ಯಕ್ಷರು, ನಾರಾಯಣ ಗುರು ಅರ್ಬನ್ ಕೊ ಅಪರೇಟಿವ್ ಬ್ಯಾಂಕ್ (ಲಿ.) ಉಡುಪಿ









































































































error: Content is protected !!
Scroll to Top