ತನ್ನಂತೆ ಪರರಿಗೂ ಹಿತವನ್ನು ಬಯಸುವುದು ನಿಜವಾದ ಸಮಾಜ ಸೇವೆ. ಜನಸೇವೆ ನಮ್ಮ ಋಣದ ಹೊರೆ ಹಗುರವಾಗಿಸುವ ಯತ್ನ ಎಂಬ ಬ್ರಹ್ಮರ್ಷಿ ನಾರಾಯಣ ಗುರುಗಳ ಸಂದೇಶದಂತೆ ಸಮಾಜದ ಹಿತವ ಬಯಸಿ ಸಮಾಜ ಸೇವೆಯೊಂದಿಗೆ ಬದುಕಿದವರು ಜಯ ಸಿ. ಸುವರ್ಣ. ಹೆಸರಲ್ಲೇ ಜಯ ಇರುವ ಹಾಗೆ ಮಾಡಿದ ಕಾರ್ಯಗಳಲ್ಲೂ ಜಯವ ಕಂಡವರು. ಬದುಕು, ಸಮಾಜದ ಚಿಂತನೆಯೊಂದಿಗೆ ಸಾಮಾಜಿಕ ಉತ್ಥಾನ ಬಯಸಿದವರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಾಖೆಗಳನ್ನು ವಿಸ್ತರಿಸಿ, ಹಲವಾರು ಮಂದಿಗೆ ಉದ್ಯೋಗದಾತರಾದರು. ಜನ್ಮಭೂಮಿ ಮತ್ತು ಕರ್ಮಭೂಮಿಯ ಬಗೆಗೆ ಅಪಾರ ಒಲವನ್ನು ಹೊಂದಿದ್ದರು. ಸದಾ ಹೊಸ ಅರ್ಥಪೂರ್ಣ ಚಿಂತನೆಯ ಉದ್ದೇಶದ ಸಾಕಾರಕ್ಕಾಗಿ ದುಡಿಯುವ ಮನಸ್ಥಿತಿ ಉಳ್ಳವರಾಗಿದ್ದರು. ತನ್ನ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಉತ್ಕಟ ಮನೋಭಾವನೆಯೊಂದಿಗೆ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಶಿಕ್ಷಣದ ಬಗೆಗೂ ಒತ್ತು ನೀಡುವ ಇವರು ಬಿಲ್ಲವರ ಅಸೋಸಿಯೇಷನ್ ಅಧೀನದ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಮತ್ತು ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಯ ಬಗೆಗೂ ಉತ್ಸುಕರಾಗಿದ್ದರು.ಇವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ತನ್ನಿಂದಾದ ಸಹಕಾರವನ್ನು ನೀಡುತ್ತಿದ್ದರು. ಉದ್ಯಮಿಯಾಗಿ, ಸಮಾಜ ಸೇವಕನಾಗಿ, ಬಿಲ್ಲವ ಮುಖಂಡರಾಗಿ ಗುರುತಿಸಿಕೊಂಡವರು. ಇಂತಹ ಮಹಾನ್ ವ್ಯಕ್ತಿತ್ವದ ಜಯ ಸಿ. ಸುವರ್ಣರು ಇಹಲೋಕ ತ್ಯಜಿಸಿ ಕುಟುಂಬ ವರ್ಗ, ಬಂಧು ವರ್ಗ ಮತ್ತು ಸಮಾಜ ಬಾಂಧವರನ್ನು ದುಃಖತಪ್ತರನ್ನಾಗಿಸಿದ್ದಾರೆ.


ದೀಪಕ್ ಕೆ. ಬೀರ, ಪಡುಬಿದ್ರಿ


































































