ಕಾರ್ಕಳ, ಅ.13: ಕಾರ್ಕಳ ತಾಲೂಕು ಸೇರಿ ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದೀಚೆಗೆ ಧಾರಾಕಾರ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹ ಭೀತಿ ತಲೆದೋರಿದೆ.
ಕಳೆದ ಸೆಪ್ಟಂಬರ್ ಅಂತ್ಯದಲ್ಲಿ ಎರಡು ದಿನ ಎಡಬಿಡದೆ ಸುರಿದ ಮಳೆ ಉಡುಪಿ ಜಿಲ್ಲೆಯಾದ್ಯಂತ ಹಲವು ಅನಾಹುತಗಳನ್ನು ಮಾಡಿ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿತ್ತು. ಇಂದು ಸುರಿಯುತ್ತಿರುವ ಮಳೆ ಅದೇ ಪರಿಸ್ಥಿತಿಯನ್ನು ನೆನಪಿಸಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡ ವರದಿಗಳು ಬಂದಿವೆ.
ಕೊಯ್ಲಿಗೆ ತಯಾರಾಗಿರುವ ಬತ್ತದ ಪೈರು ಮುಳುಗಿಹೋಗುವ ಭೀತಿ ಕೃಷಿಕರಲ್ಲಿ ಉಂಟಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯಭಾರ ಕುಸಿತ ಭಾರಿ ಮಳೆಯುಂಟು ಮಾಡುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕ, ಕೇರಳ,ಗೋವಾ, ಅಂಧ್ರ ಪ್ರದೇಶ , ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.






























































