ದಿಲ್ಲಿ, ಅ. 6 : ಈ ಕೊರೊನಾ ವೈರಸ್ ಮಹಾ ಖಿಲಾಡಿ. ಅದು ಆಗಾಗ ತನ್ನ ಸ್ವಭಾವ, ರೂಪ, ಗುಣಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಾ ಮನುಷ್ಯರನ್ನು ಯಾಮಾರಿಸುತ್ತಿರುತ್ತದೆ. ಇದೀಗ ಬಂದ ಹೊಸದೊಂದು ಅಧ್ಯಯನದ ವರದಿಯ ಪ್ರಕಾರ ಹೊಸ ರೂಪ ತಾಳಿರುವ ಕೊರೊನಾ ವೈರಸ್ ಮನುಷ್ಯರ ತ್ವಚೆಯ ಮೇಲೆ 9 ತಾಸು ಜೀವಂತವಾಗಿರುತ್ತದೆಯಂತೆ.
ಇಷ್ಟರ ತನಕ ಸೋಂಕಿತ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಸಿಡಿಯುವ ಉಗುಳಿನ ಹನಿಗಳ ಮೂಲಕ ಕೋವಿಡ್ 19 ವೈರಸ್ ಹರಡುತ್ತದೆ ಎಂದು ನಂಬಲಾಗಿತ್ತು.
ಆದರೆ ಕ್ಲಿನಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ತ್ವಚೆಯ ಮೇಲಿರುವ ವೈರಸ್ ಕೂಡ ಇನ್ನೊಬ್ಬರಿಗೆ ಹರಡಬಹುದು. ಈ ಅಧ್ಯಯನ ಪದೇಪದೆ ಕೈಗಳನ್ನು ತೊಳೆದುಕೊಳ್ಳುವ ಮತ್ತು ಸ್ಯಾನಿಟೈಸರ್‌ನಂಥ ವೈರಸ್ ನಿವಾರಕಗಳನ್ನು ಬಳಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.

ಹಾಗೆಂದು ಈ ಹೊಸ ಸಂಶೋಧನೆಯಿಂದ ಕಳವಳಗೊಳ್ಳುವ ಅಗತ್ಯವಿಲ್ಲ. ಶೇ.80 ಅಲ್ಕೊಹಾಲ್ ಅಂಶ ಇರುವ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡರೆ 15 ಸೆಕೆಂಡಿನಲ್ಲಿ ಈ ವೈರಸ್ ಸತ್ತು ಹೋಗುತ್ತದೆಯಂತೆ. ಕನಿಷ್ಠ 20 ಸೆಕುಂಡು ಹೊತ್ತು ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿದ್ದಾರೆ ಕೊರೊನಾ ವೈರಸ್‌ನಿಂದ ಸುಲಭವಾಗಿ ಪಾರಾಗಬಹುದು ಎಂದು ಹೇಳುತ್ತದೆ ಈ ಅಧ್ಯಯನ.


































































