ಬೆಂಗಳೂರು, ಅ.1: ಒಂದು ಕಾಲದಲ್ಲಿ ಇಡೀ ದೇಶವನ್ನೇ ನಡುಗಿಸಿದ್ದ ನರಹಂತಕ ವೀರಪ್ಪನ್ ಕುರಿತು ತಯಾರಾಗುತ್ತಿರುವ ವೆಬ್ ಸಿರೀಸ್ ನಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿಯವರು ನಟಿಸಲಿದ್ದಾರಂತೆ. ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬ್ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ .
ಈ ಕುರಿತು ಈಗಾಗಲೇ ಸುನಿಲ್ ಶೆಟ್ಟಿ ಜೊತೆಗೆ ಮಾತುಕತೆ ನಡೆಸಲಾಗಿದ್ದು ಅವರು ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುನೀಲ್ ಶೆಟ್ಟಿಯವರು ಈ ವೆಬ್ ಸಿರೀಸ್‌ನಲ್ಲಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಕಿಶೋರ್ ವೀರಪ್ಪನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸಿರೀಸ್ ಗೆ ಇನ್ನೋರ್ವ ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರನ್ನು ಕರೆ ತರುವ ಪ್ರಯತ್ನವೂ ನಡೆಯುತ್ತಿದೆ.
ಅಟ್ಟಹಾಸ ಚಿತ್ರದಲ್ಲೂ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು. ಇದೀಗ ವೆಬ್ ಸಿರೀಸ್‌ನಲ್ಲೂ ವೀರಪ್ಪನ್ ಪಾತ್ರ ಅವರನ್ನು ಅರಸಿಕೊಂಡು ಬಂದಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಇದು ಮೂಡಿಬರಲಿದ್ದು, ಆಯಾಯ ಭಾಷೆಯ ಜನಪ್ರಿಯ ನಟರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ.






















