ಮಣಿಪಾಲ, ಸೆ. 21: ಮಣಿಪಾಲದ ಸಿಂಡಿಕೇಟ್ ಸರ್ಕಲ್ ಸಮೀಪ ಕುಂಡೇಲುಕಾಡಿನಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿಯುವ ಭೀತಿಯಲ್ಲಿದ್ದು, ಇದರಲ್ಲಿರುವ ಜನರನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ತೆರವುಗೊಳಿಸಲಾಗಿದೆ.
ತಳ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಮತ್ತು ಮೇಲೆ ಫ್ಲ್ಯಾಟ್ ಗಳನ್ನು ಹೊಂದಿರುವ ಪ್ರೀಮಿಯರ್ ಕೋರ್ಟ್ ಕಟ್ಟಡದ ಅಡಿಭಾಗದಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮಣ್ಣು ಜರಿದಿದೆ. ಇದರಿಂದ ಈ ಬೃಹತ್ ಕಟ್ಟಡಕ್ಕೆ ಅಪಾಯ ಎದುರಾಗಿದೆ.
ಹತ್ತು ಅಂತಸ್ತಿನ ಈ ಕಟ್ಟಡದಲ್ಲಿ ಅನೇಕ ಫ್ಲ್ಯಾಟ್ ಗಳಿದ್ದು ಸುಮಾರು ಒಂದು ಸಾವಿರ ಮಂದಿ ವಾಸವಾಗಿದ್ದಾರೆ. ಈ ಸಾಲಿನಲ್ಲಿ ಇನ್ನೂ ಅನೇಕ ಕಟ್ಟಡಗಳಿದ್ದು ಅವುಗಳಿಗೂ ಭೀತಿ ಎದುರಾಗಿದೆ. ಕುಂಡೇಲುಕಾಡು ಎಂಬ ಇಳಿಜಾರು ಪ್ರದೇಶದಲ್ಲಿ ನೀರು ಹರಿದುಹೋಗುವ ದಾರಿಯನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಿದ್ದು, ಅವುಗಳು ಈಗ ಅಪಾಯಕ್ಕೆ ಸಿಲುಕಿವೆ.

ಕೆಲ ವರ್ಷಗಳ ಹಿಂದೆಯೂ ಕುಂಡೇಲುಕಾಡಿನಲ್ಲಿ ಇದೇ ರೀತಿ ಗುಡ್ಡ ಜರಿದು ಒಂದು ಮಲ್ಟಿಪ್ಲೆಕ್ಸ್ ಸೇರಿ ಕೆಲವು ಕಟ್ಟಡಗಳು ಅಪಾಯಕ್ಕೆ ಸಿಲುಕಿದ್ದವು.
































