ಟಾಟಾ ಪರಿಚಯಿಸುತ್ತಿದೆ ಪತ್ತೆದಾರ ಫೇಲುದಾ ಹೆಸರಿನ ಕೊರೊನಾ ವೈರಸ್ ಟೆಸ್ಟ್‌ ಕಿಟ್‌

 ದಿಲ್ಲಿ, ಸೆ. 21 : ದೇಶದಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ  ನಿತ್ಯ 90,000ಕ್ಕೂ ಅಧಿಕ ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 55  ಲಕ್ಷ ತಲುಪುತ್ತಿದೆ.

ಒಮ್ಮೆಲೆ ಕೊರೊನಾ ಪ್ರಕರಣಗಳು ಹೆಚ್ಚಾಗಲು ಪರೀಕ್ಷೆಗಳ ಪ್ರಮಾಣವೂ ಹೆಚ್ಚಿರುವುದು ಒಂದು ಕಾರಣ. ಆದರೆ ಕೊರೊನಾ ಪರೀಕ್ಷೆ ಎನ್ನುವುದು ಭಾರಿ ತ್ರಾಸದಾಯಕ ಕೆಲಸ. ಮಾತ್ರವಲ್ಲದೆ ಖರ್ಚಿನ ಬಾಬತ್ತು ಕೂಡ ಹೌದು. ಕೆಲವು ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೆ 10,000-15,000 ರೂ. ತನಕ ವಸೂಲು ಮಾಡುತ್ತಿರುವ ಕುರಿತು ದೂರುಗಳು ನಿತ್ಯ ಕೇಳಿ ಬರುತ್ತಿವೆ.ಅಲ್ಲದೆ ಈ ಕೊರೊನಾ ಪರೀಕ್ಷೆ ವರದಿ ಬರಲು ಕೆಲವು ದಿನ ಕಾಯಬೇಕಾಗುತ್ತದೆ.  

ಇದೀಗ ಟಾಟಾ ಗ್ರೂಪ್‌ ಹೊಸ ಕೋವಿಡ್-‌ 19 ಟೆಸ್ಟಿಂಗ್‌ ಕಿಟ್‌ ಅಭಿವೃದ್ಧಿಪಡಿಸಿದೆ. ಇದರ ವಿಶೇಷ ಏನೆಂದರೆ ಬರೀ ಎರಡು ತಾಸಿನಲ್ಲಿ ಈ ಕಿಟ್‌ ಕೊರೊನಾ ಪರೀಕ್ಷೆಯ ವರದಿ ನೀಡುತ್ತದೆ. ಇದು ಅಗ್ಗವೂ ಹೌದು.

ಇಂಟರ್ರಪ್ಟೆಡ್‌ ಶಾರ್ಟ್‌ ಪಾಲಿಂಡ್ರೊಮಿಕ್‌ ರಿಪೀಟ್ಸ್‌ ಕೊರೊನಾ ವೈರಸ್‌ ಟೆಸ್ಟ್‌ (ಸಿಆರ್‌ಐಎಸ್‌ಪಿಆರ್) ಎಂಬ ಈ ಕಿಟ್‌ ಅನ್ನು ಟಾಟಾ ಗ್ರೂಪ್‌ ಸಿಎಸ್‌ಐಅರ್‌ – ಇನ್‌ಸ್ಟಿಟ್ಯೂಟ್  ಆಫ್‌ ಜನೊಮಿಕ್ಸ್‌ ಆಂಡ್‌ ಇಂಟೆಗ್ರೆಟಿವ್‌ ಬಯೊಲಾಜಿ ಸಂಸ್ಥೆಯ ಸಹಯೋಗದಲ್ಲಿ  ಅಭಿವೃದ್ಧಿಪಡಿಸಿದೆ. ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌  ಇಂಡಿಯಾ ಈ ಕಿಟ್‌  ಬಳಕೆಗೆ ಅನುಮತಿ ನೀಡಿದೆ.

ವಿಶೇಷವೆಂದರೆ ಟಾಟಾ ಗ್ರೂಪ್‌ ಈ ಕೋವಿಡ್‌ 19 ಟೆಸ್ಟಿಂಗ್‌ ಕಿಟ್‌ಗೆ ಸತ್ಯಜಿತ್‌ ರೇ ಕಾದಂಬರಿಗಳ ಜನಪ್ರಿಯ ಪತ್ತೇದಾರ ಫೇಲುದಾ ಹೆಸರಿಟ್ಟಿದೆ. ಫೇಲು ದಾ ಕ್ಷಿಪ್ರವಾಗಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ನಿಷ್ಣಾತನಾಗಿದ್ದ ಪತ್ತೆದಾರ.  ಫೇಲು ದಾನ ಪೂರ್ತಿ ಹೆಸರು ಪ್ರದೋಶ್‌ ಚಂದ್ರ ಮಿತ್ತರ್‌ ಎಂದು. ಆದರೆ ಎಲ್ಲರೂ ಅಭಿಮಾನದಿಂದ ಫೇಲು ದಾ ಎಂದು ಕರೆಯುತ್ತಿದ್ದರು. ಸರ್‌ ಆರ್ಥರ್‌ ಕೊನನ್‌ ಡೊಯ್ಲ್‌ ಸೃಷ್ಟಿಸಿದ ಶೆರ್ಲಾಕ್‌ ಹೋಮ್ಸ್‌ ಪಾತ್ರದಿಂದ ಪ್ರಭಾವಿತರಾಗಿ ಸತ್ಯಜಿತ್‌ ರೇ ಬಂಗಾಳಿಯಲ್ಲಿ ಫೇಲು ದಾನನ್ನು ಸೃಷ್ಟಿಸಿದ್ದರು. ಶರ್ಲಾಕ್ಸ್‌ ಹೋಮ್ಸ್‌ ಪತ್ತೆದಾರಿ ಕಾದಂಬರಿಗಳೆಂದರೆ ಸತ್ಯಜಿತ್‌ ರೇಗೆ ಬಹಳ ಅಚ್ಚುಮೆಚ್ಚು ಆಗಿತ್ತು. ಹೀಗೆ ಕೊರೊನಾ ವೈರಸ್‌ ನಂಟು ಎಲ್ಲೆಲ್ಲೋ ಸುತ್ತಿಕೊಂಡು ಹೋಗಿ ಒಂದು ಕಾಲ್ಪನಿಕ ಪತ್ತೆದಾರನ ಪಾತ್ರದ ಜೊತೆಗೆ ತಳಕು ಹಾಕಿಕೊಂಡಿದೆ.  ಇದು ನಾಲ್ಕು ಹಂತಗಳಲ್ಲಿ ನಡೆಯುವ ಸರಳ ಮತ್ತು ಕರಾರುವಕ್ಕಾದ ಪರೀಕ್ಷೆ.

















































error: Content is protected !!
Scroll to Top