ನೂರಾರು ಮಂದಿಗೆ ನೆರವಾಗುತ್ತಿರುವ ಆಪತ್ಬಾಂಧವ ಆಸೀಫ್‌

ಕಾರ್ಕಳ : ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಂಡು ಅಸಹಾಯಕರಿಗೆ ನೆರವಾಗಬಹುದು ಎನ್ನುವುದಕ್ಕೆ ಇಲ್ಲೊಂದು ಅತ್ಯುತ್ತಮ ನಿದರ್ಶನವಿದೆ. ಈ ಮೂಲಕ ಸಹೃದಯಿ ಬಂಧುಗಳ ನೆರವಿನೊಂದಿಗೆ ನೊಂದವರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡುತ್ತಿದ್ದಾರೆ ಮಹಮ್ಮದ್‌ ಆಸೀಫ್‌. ಆಪತ್ಬಾಂಧವ ಆಸೀಫ್‌ ಎಂದೇ ಖ್ಯಾತರಾಗಿರುವ ಇವರು ಕಾರ್ಕಳ ತಾಲೂಕು ಸಾಣೂರು ಗ್ರಾಮದವರು. ಓರ್ವ ಆಂಬ್ಯುಲನ್ಸ್‌ ಚಾಲಕರಾಗಿರುವ ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ರೀತಿ ಅಮೋಘ, ಅಪೂರ್ವವಾದುದು.

ನೆರವು

ಇತ್ತೀಚೆಗೆ ಬೋಳದ ರಂಜೇಶ್‌ ಶೆಟ್ಟಿ ಅವರ ಚಿಕಿತ್ಸೆಗಾಗಿ ನೆರವು ನೀಡುವಂತೆ ಆಸೀಫ್‌ ಸಾರ್ವಜನಿಕರೊಂದಿಗೆ ಮಾಡಿಕೊಂಡ ಮನವಿಗೆ 14 ಲಕ್ಷ ರೂ. ಹರಿದುಬಂದಿತ್ತು.

ಸೆ. 16ರಂದು ಬೈಕ್‌ ಅಪಘಾತಕ್ಕೀಡಾಗಿ ಕಾರ್ಕಳದ ವಿಘ್ನೇಶ್‌ ಆಚಾರ್ಯ ಅವರಿಗೆ ತೀವ್ರತರದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ 2.5 ಲಕ್ಷ ರೂ. ಬೇಕಾಗಬಹುದೆಂದು ಆಸ್ಪತ್ರೆಯವರು ತಿಳಿಸಿದ್ದರು. ಇದರಿಂದಾಗಿ ಕಂಗೆಟ್ಟ ಕುಟುಂಬಕ್ಕೆ ಆಸೀಫ್‌ ಧೈರ್ಯ ತುಂಬಿ ನೆರವಿಗಾಗಿ ಸಾಮಾಜಿಕ ತಾಣದಲ್ಲಿ ಮನವಿ ಮಾಡಿಕೊಂಡಿದ್ದು, ಒಂದೆರಡು ದಿನದಲ್ಲೇ 3.5 ಲಕ್ಷ ರೂ. ಸಂಗ್ರಹವಾಯಿತು.

ಮತ್ತೊಂದು ಕುಟುಂಬಕ್ಕೆ ನೆರವಾದ ವಿಘ್ನೇಶ್‌ ಕುಟುಂಬ

ವಿಘ್ನೇಶ್‌ ಆಚಾರ್ಯರ ಚಿಕಿತ್ಸೆಗಾಗಿ ಎರಡೂವರೆಯಿಂದ 3 ಲಕ್ಷ ರೂ. ಅವಶ್ಯಕತೆಯಿದ್ದು, ಅದಕ್ಕಿಂತ ಹೆಚ್ಚು ಸಂಗ್ರಹವಾಗಿದ್ದ ಮೊತ್ತವನ್ನು ಇರ್ವತ್ತೂರು ಕ್ಯಾನ್ಸರ್‌ ಪೀಡಿತ ಬಾಲಕಿಯ ಚಿಕಿತ್ಸೆಗಾಗಿ ವಿಘ್ನೇಶ್‌ ಕುಟುಂಬ ನೀಡುವ ಮೂಲಕ ನೋವಿನಲ್ಲೂ ಮತ್ತೊಂದು ಕುಟುಂಬದ ಕಣ್ಣೀರು ಒರೆಸುವ ಕಾರ್ಯ ಮಾಡಿತು. ಇರ್ವತ್ತೂರಿನ 5 ವರ್ಷದ ಬಾಲಕಿ ಚಿಕಿತ್ಸೆಗೆ 50 ಸಾವಿರ ರೂ. ನೀಡಿ ಮಾದರಿಯಾದರು. ಕಡುಬಡತನದಲ್ಲಿದ್ದ ಬೆಂಗ್ರೆಯ ಮನ್ಸೂರ್‌ ಅಹಮ್ಮದ್‌ ಚಿಕಿತ್ಸೆಗೆ 4 ಲಕ್ಷ ರೂ., ಕೊಪ್ಪದ ಹೈದರ್‌ ಅವರ ಚಿಕಿತ್ಸೆಗಾಗಿ 6 ಲಕ್ಷ ರೂ. ಸಾರ್ವಜನಿಕರಿಂದಲೇ ಸಂಗ್ರಹಿಸಿ ಕೊಟ್ಟಿದ್ದರು ಮಹಮ್ಮದ್‌ ಆಸೀಫ್‌.

ಮೈಮೂನ ಫೌಂಡೇಶನ್

ಮಹಮ್ಮದ್‌ ಆಸೀಫ್‌ ಅವರು ಮೂಲ್ಕಿ ಕಾರ್ನಾಡು ಎಂಬಲ್ಲಿ ಮೈಮೂನ ಫೌಂಡೇಶನ್‌ ಮೂಲಕ ಸುಮಾರು 40 ಮಂದಿ ನಿರಾಶ್ರೀತರಿಗೆ ಆಶ್ರಯ ನೀಡಿದ್ದಾರೆ. ಆಪತ್ಬಾಂಧವ ಸೈಕೋ ರಿಹಾಬಿಲಿಟೇಶನ್‌ ಸೆಂಟರ್‌ ಮೂಲಕ ಭಿಕ್ಷುಕರು, ಮಾನಸಿಕ ಸ್ತಿಮಿತ ಕಳೆದುಕೊಂಡವರಿಗೆ ಸೂರು, ತುತ್ತು ಊಟ ಮೂಲಕ ಆಸರೆಯಾಗಿದ್ದಾರೆ. ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡ ಮಹಮದ್ಮ್‌ ಆಸೀಫ್‌ ಅವರ ಕಾರ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

































































error: Content is protected !!
Scroll to Top