ಕಾರ್ಕಳ : ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ತೋಟ, ಗದ್ದೆಗಳಲ್ಲಿ ನೆರೆ ನೀರು ತುಂಬಿ ಕೃಷಿ ಹಾನಿಗೀಡಾಗಿದೆ. ಕೆಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಾಕೃತಿಕ ಹಾನಿ-ತೊಂದರೆ ವರದಿ ಈ ರೀತಿಯಿದೆ.
ಮರ್ಣೆ ಗ್ರಾಮದ ಎಣ್ಣೆಹೊಳೆ ಸ್ವರ್ಣ ನದಿಯ ಪ್ರವಾಹದಿಂದ ಸ್ಥಳೀಯ 13 ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಎಣ್ಣೆಹೊಳೆ ನೀರಾವರಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಶಾಲೆಗೆ ಸ್ಥಳಾಂತರಿಸಲಾಗಿದೆ.
ಕಾರ್ಕಳ ಕಸಬಾ
ಕಾರ್ಕಳ ಕಸಬಾ ಗ್ರಾಮದ ದಾನಶಾಲೆ ರಸ್ತೆ ಆನೆಕೆರೆ ಬಳಿಯ ರವಿರಾಜ ಶೆಟ್ಟಿ ಹಾಗೂ ಮೋಹನ್ ಭಂಡಾರಿ ಮನೆಗೆ ನೀರು ನುಗ್ಗಿದ್ದು ತಲಾ 10 ಸಾವಿರ ರೂ. ನಷ್ಟವುಂಟಾಗಿದೆ. ಆನೆಕೆರೆ ಬಳಿಯ ಡಿ. ಲಕ್ಷ್ಮಣ್ ಎಂಬವರ ಮನೆಗೆ ಹಾನಿಯಾಗಿದೆ. ತೆಳ್ಳಾರು ಸೇತುವೆ ಬಳಿ ಅಣ್ಣಿ ನಾಯ್ಕ ಎಂಬವರ ಅಡಿಕೆ ತೋಟ ಹಾಗೂ ಹಟ್ಟಿಗೆ ನೀರು ನುಗ್ಗಿದೆ.

ಹಿರ್ಗಾನ ಗ್ರಾಮದ ಸಂಜೀವಿ ಅವರ ಮನೆಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತಗಳಿಗೆ ಹಾನಿಯಾಗಿದೆ. ಇದೇ ಗ್ರಾಮದ ಸೀತಾ, ರತ್ನಾವತಿ ಶೆಟ್ಟಿ, ಸದಾಶಿವ ಆಚಾರ್ಯ ಅವರ ಮನಗೂ ನೀರು ನುಗ್ಗಿ ತಲಾ 10 ಸಾವಿರ ರೂ. ನಷ್ಟ ಸಂಭವಿಸಿದೆ. ಹಿರ್ಗಾನ ಗ್ರಾಮದ ಮಂಗಿಲಾರು ದೇಗುಲ ಜಲಾವೃತಗೊಂಡಿದೆ.
ದುರ್ಗಾ ಗ್ರಾಮದ ಸುನಂದ ಎಂಬುವವರ ಮನೆಗೆ ಗುಡ್ಡ ಜರಿದು 50 ಸಾವಿರ ರೂ. ನಷ್ಟವುಂಟಾಗಿದೆ. ಇದೇ ಗ್ರಾಮದ ಹೊಳೆ ಬದಿ ನಿವಾಸಿ ಭಾಸ್ಕರ ಆಚಾರ್ಯ ಅವರ ಮನೆಗೆ ಗುಡ್ಡ ಜರಿದು 10 ಸಾವಿರ ರೂ., ಮಾಡೊಟ್ಟು ಕೃಷ್ಣ ಅವರ ಮನೆಗೆ ನೀರು ನುಗ್ಗಿ 10 ಸಾವಿರ ರೂ. ನಷ್ಟವುಂಟಾಗಿದೆ.
ಎರ್ಲಪ್ಪಾಡಿ ಗ್ರಾಮದ ರಾಘು ಶೆಟ್ಟಿಗಾರ್, ರಾಜು ಶೆಟ್ಟಿಗಾರ್ ಅವರ ಮನೆಗೆ ನೀರು ನುಗ್ಗಿ ತಲಾ 10 ಸಾವಿರ ರೂ. ನಷ್ಟ ಸಂಭವಿಸಿದೆ.
ಈದು ಗ್ರಾಮದ ಹರೀಶ್ ಎಂಬುವವರ ವಾಸ್ತವ್ಯದ ಮನೆ ಪಕ್ಕಾಸು ಹಾನಿಗೊಂಡು 30 ಸಾವಿ ರೂ. ನಷ್ಟ ಸಂಭವಿಸಿದೆ.
ನೂರಾಳ್ಬೆಟ್ಟು ಗ್ರಾಮದ ಕಂಪೆಟ್ಟು ಸೇತುವೆ ಮಳೆ ನೀರಿಗೆ ಕುಸಿದು ಬಿದ್ದು, ಸಂಪೂರ್ಣ ಹಾನಿಗೀಡಾಗಿದೆ. ಇದರಿಂದ 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಇನ್ನಾ ಗ್ರಾಮದ ಶಾಂಭವಿ ನದಿಯ ಹರಿವು ಅಧಿಕವಾಗಿದ್ದು, ಇಲ್ಲಿನ 9 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಸೂಡ ಗ್ರಾಮದ ರಾಮಚಂದ್ರ ಭಟ್ ಹಾಗೂ ಅಮ್ಮಣಿ ಮೂಲ್ಯ ಎಂಬವರ ಮನೆ ಹಾನಿಗೀಡಾಗಿ ತಲಾ 5 ಲಕ್ಷ ರೂ. ನಷ್ಟವುಂಟಾಗಿದೆ.
ಬೋಳ ಪುಷ್ಪಾ ಎಂಬುವವರ ಮನೆಗೆ ಶಾಂಭವಿ ನದಿ ನೀರು ನುಗ್ಗಿದ್ದು ಕುಟುಂಬವನ್ನು ಸ್ಥಳಾಂತರಿಸಲಾಗಿದೆ.
ಹೆರ್ಮುಂಡೆ ಗ್ರಾಮದ ಉದಯ ಕುಲಾಲ್ ಹಾಗೂ ಉದಯ ನಾಯ್ಕ ಅವರ ಮನೆಗೆ ಹಾನಿಯಾಗಿದ್ದು, ತಲಾ 10 ಸಾವಿ ರೂ. ನಷ್ಟ ಸಂಭವಿಸಿದೆ.
ಮಾಳ ಮುಖ್ಯರಸ್ತೆಗೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಎಣ್ಣೆಹೊಳೆ ಸ್ವರ್ಣ ನದಿ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ತೊಡಕಾಗಿದ್ದು, ಪರ್ಯಾಯ ರಸ್ತೆ ಅವಲಂಬಿಸುವಂತಾಯಿತು.

























