ಥಾಲಿ ಥಾಲೀ ಮೆ ಲಿಖಾ ಹೈ ಏಕ್ ಹೀ ಪರಿವಾರ್ ಕಾ ನಾಮ್.ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿ ಕೊರೊನಾ ವಾರಿಯರ್ಸ್ ಗೆ ಗೌರವ ಸೂಚಕವಾಗಿ ಥಾಲಿ (ತಟ್ಟೆ) ಬಾರಿಸುವಂತೆ ವಿನಂತಿಸಿದ್ದಕ್ಕೆ ದೇಶಕ್ಕೆ ದೇಶವೇ ಸಿಕ್ಕ ಸಿಕ್ಕಿದ್ದನ್ನು ಹೊಡೆದದ್ದೇ ಹೊಡೆದದ್ದು.ಅದರಲ್ಲಿ ಎಷ್ಟು ಥಾಲಿಗಳು ತೂತಾಗಿವೆಯೋ ಗೊತ್ತಿಲ್ಲ.ಆದರೆ ಈಗ ತೂತಾಗಿರುವ ತಟ್ಟೆಯದ್ದೇ ಸುದ್ದಿ. ಆರಂಭಗೊಂಡಿದ್ದು ಸಂಸತ್ತಿನಲ್ಲಿ, ತೂತಾದದ್ದು ಬಾಲಿವುಡ್ ನ ಥಾಲಿ. ಈಗ ಇಡೀ ದೇಶವೇ ಆ ಥಾಲಿಯ ಹಿಂದೆ ಬಿದ್ದು ಎರಡು ಗುಂಪುಗಳಾಗಿವೆ.ಒಂದು ತೂತು(ರಂಧ್ರ) ಮಾಡುತ್ತಿದ್ದಾರೆ ಎಂದು ಬೊಬ್ಬಿಡುವವರು. ಮತ್ತೊಂದು ತೂತು ಮಾಡುವವರು.
‘ ಜಿಸ್ ಥಾಲೀ ಮೆ ಖಾತೇ ಹೈ ಉಸೀ ಥಾಲೀ ಮೆ ಛೇದ್ ಕರ್ತೇ ಹೈ” ಎನ್ನುವುದು ಚರ್ಚೆಯ ಮೂಲ. ಉಣ್ಣುವ ತಟ್ಟೆಯಲ್ಲೇ ಹೇಸಿಗೆ ಮಾಡುವುದು ಎಂದು ನಾವು ಆಡುಮಾತಿಗೆ ಹೇಳುತ್ತೇವಲ್ಲಾ.ಅದೇ ಗಾದೆ ಮಾತು ಇದು.ಹೇಸಿಗೆ ಬೇಡಾಂತ ಹಿಂದಿಯವರು ರಂಧ್ರ ಕೊರೆದದ್ದು.
ಮೊನ್ನೆಯಿಂದ ಈ ಥಾಲೀ ಛೇದ್…ಕತೆ ಕೇಳಿದ ನಿಮಗೆ ಏನಾದರೂ ಅರ್ಥವಾಗಿದೆಯೇ?

ಒಬ್ಬ ನಟ ಕಂ ಸಂಸದ ಸಂಸತ್ತಿನಲ್ಲಿ ಹೇಳಿದ್ದೇನು? ‘ ಈ ಡ್ರಗ್ಸ್ ಭೂತ ಬಾಲಿವುಡ್ ಅನ್ನೂ ಕಾಡುತ್ತಿದ್ದು ಹಿಂಡಿ ಹಿಪ್ಪೆಯಾಗಿಸುತ್ತಿದೆ.ಇದರಿಂದ ಬಾಲಿವುಡ್ ನ ಮುಂದಿನ ಪೀಳಿಗೆ ಮತ್ತು ಈಗಿನ ಯುವ ಪೀಳಿಗೆ ಪೀಡೆಗೊಳಗಾಗದಂತೆ ರಕ್ಷಿಸಬೇಕು’…ಓರ್ವ ಸಾಮಾನ್ಯ ನಾಗರಿಕನಿಗೂ ಅರ್ಥವಾಗುವ ವಿಷಯ. ಆ ಸಂಸದ ಎಲ್ಲೂ ಬಾಲಿವುಡ್ ಗಾಂಜಾ…ಅಫೀಮು, ಡ್ರಗ್ಸ್ ಸೇವಕರಿಂದ ತುಂಬಿ ಹೋಗಿದೆ. ಅವರು ಸಮಾಜಕ್ಕೆ ಮಾರಕರು ಅಥವಾ ಬಾಲಿವುಡ್ ಮಂದಿಯನ್ನು ಜರೆಯುವಂತಹ ಹಿಯಾಳಿಸುವಂಥಹ ಯಾವ ಮಾತನ್ನೂ ಆಡಲಿಲ್ಲ.

ಅಂದಿನಿಂದ ಇಂದಿನವರೆಗೆ ಬಾಲಿವುಡ್ ನಲ್ಲಿ ನಡೆಯುವಂತಹ ಎಲ್ಲಾ ಅನಾಚಾರ, ವ್ಯಭಿಚಾರಗಳ ಬಗ್ಗೆ ತುಟಿ ಬಿಚ್ಚದ ಈ ಮಾತೆ ಈಗ ಮಾತಾಡತೊಡಗಿರುವುದು ‘ ಕುಂಬಳಕಾಯಿ ಕಳ್ಳ ಅಂದಾಗ ಹೆಗಲು ಮುಟ್ಟಿಕೊಂಡ…’ ಗಾದೆಯನ್ನು ನೆನಪಿಸಿದ್ದು ನಿಜ. ಈ ಗಾದೆಗೆ ಆಧಾರವಾಗಿ ಕೆಲ ವಿಡಿಯೋಗಳು ವೈರಲ್ ಕೂಡಾ ಆಗುತ್ತಿವೆ.ಆ ಮಾತು ಬಿಡೋಣ.
ಆ ನಟ, ಸಂಸದ ಹೇಳಿದ್ದ ಮತ್ತೊಂದು ಮಾತು ” ಬಾಲಿವುಡ್ ನ ಕೊಳಕು ಹೊರಬೀಳುವುದಾದರೆ ಛೇದ್ ಕರ್ನಾ ಝರೂರಿ ಹೈ…’ ನೋಡಿದ್ರಾ ಮೊನ್ನೆಯಿಂದ ಬಾಲಿವುಡ್.. ಸ್ಯಾಂಡಲ್ವುಡ್ ನ ಎಷ್ಟು ಮಂದಿಗೆ ಎನ್ ಸಿ ಎ ಯ ನೋಟೀಸು ಹೋಗುತ್ತಿದೆಯಲ್ವಾ….ಈಗ ಹೇಳಿ ಥಾಲಿ ಮೇ ಛೇದ್ ಕರ್ನಾ ಹೀ ಅಚ್ಛಾ ಹೈ ಕಿ ನಹೀ..? ಆದರೆ ಆಯಮ್ಮ ಅಥವಾ ಆಕೆಯ ಬೆಂಬಲಿಗರು ಏನೂ ಹೇಳುತ್ತಿಲ್ಲ..ಇದರ ನಡುವೆ ಮೀ ಟೂ…ಮತ್ತೆ ಗರಂ ಆಗತೊಡಗಿದೆ…
ಅಂದ ಹಾಗೆ ಬಾಲಿವುಡ್ ಅನ್ನು ತನ್ನ ಅಸ್ತಿಯಂತೆ ನೋಡಿಕೊಳ್ಳುವ ಅನುಭವಿಸುವ ‘ ಕರೋಡ್ ಪತಿ’ ಗಳ ಕಾರ್ಯಕ್ರಮಗಳನ್ನು ನೋಡಿ ಅವರ ಥಾಲಿಯನ್ನು ನಾವ್ಯಾಕೆ ತುಂಬಿಸಿಕೊಳ್ಳಬೇಕು? ನಮ್ಮ ಥಾಲಿ ತುಂಬಬೇಕಾದರೆ ನಾವು ಬೆವರು ಹರಿಸಬೇಕು ತಾನೆ? ಈಗ ಬೆವರು ಹರಿಸಲು ತಯಾರಾಗಿ ನಿಂತಿದ್ದರೂ ಕೊರೊನಾ ಬಿಡುತ್ತಿಲ್ಲ. ಥಾಲಿ ಖಾಲಿಯಾಗಿದೆ. ಅವರಿಗೆ ಕೊರೋನಾ ಬಂದರೂ ಆಸ್ಪತ್ರೆಯ ಪ್ರಚಾರ ಮಾಡಿ ಅದರಲ್ಲೂ ತಮ್ಮ ಥಾಲಿ ತುಂಬಿಸಿಕೊಂಡಿದ್ದ ಗುಟ್ಟು ಎಷ್ಟು ಮಂದಿಗೆ ಗೊತ್ತು? ಅವರೇನು ಹತ್ತು ತಲೆಮಾರು ಕೂತು ಉಣ್ಣುವಷ್ಟು ಥಾಲಿ ತುಂಬಿಸಿ ಇಟ್ಟಿದ್ದಾರೆ.ಅದು ಹೇಗೆ ಸಾಧ್ಯವಾಯಿತು ಗೊತ್ತೇ? ನಾವು ನಾಳೆಯ ನಮ್ಮ ಥಾಲಿಯ ಚಿಂತೆ ಬಿಟ್ಟು ನೂರಾರು ರೂಪಾಯಿ ಕೊಟ್ಟು ಟಿಕೇಟು ಖರೀದಿಸಿ ಸಿನಿಮಾ ನೋಡಿದ್ದರಿಂದ, ಥಾಲಿ ಮುಂದಿಟ್ಟು ಟಿವಿ ಮುಂದೆ ಕರೋಡ್ ಪತಿ ನೋಡುತ್ತಾ ಆಡುವವ ಮತ್ತು ಆಡಿಸುವವ ಇಬ್ಬರೂ ಕರೋಡ್ ಪತಿ ಆಗುವುದರಲ್ಲೇ ಖುಷಿ ಪಟ್ಟಿದ್ದರಿಂದ…ಆದ್ದರಿಂದ ಇನ್ನು ಮುಂದಾದರೂ ನಮ್ಮ ಥಾಲಿಯ ಬಗ್ಗೆ ಚಿಂತಿಸೋಣ.,( ಥಾಲಿ=ಅನ್ನದ ಬಟ್ಟಲು)
ಏಳಿಂಜೆ ನಾಗೇಶ್, ಮುಂಬಯಿ- 98929 80750























