ಮುಂಬಯಿ, ಸೆ. 20 : ಸಿನೇಮಾ ರಂಗದಲ್ಲಿ ಇನ್ನೊಂದು ಸುತ್ತಿನ ಮಿ ಟೂ ಅಭಿಯಾನ ಶುರುವಾಗುವ ಸಾಧ್ಯತೆ ಕಾಣಿಸಿದೆ. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಹೊರಿಸಿದ ಲೈಂಗಿಕ ಕಿರುಕುಳದ ಆರೋಪ ಈಗಾಗಲೇ ಡ್ರಗ್ ಕಳಂಕದಿಂದ ಕಂಗಾಲಾಗಿರುವ ಬಾಲಿವುಡ್‌ನಲ್ಲಿ ತಲ್ಲಣವುಂಟು ಮಾಡಿದೆ.
ಅನುರಾಗ್ ಕಶ್ಯಪ್ ನನಗೆ ಕಿರುಕುಳ ನೀಡಿದ್ದಾರೆ. ಇಂಥ ದುರದೃಷ್ಟಕರ ಘಟನೆ ಸಂಭವಿಸಬಾರದಿತ್ತು ಎಂದು ಹೇಳಿಕೊಂಡಿದ್ದಾರೆ ಪಾಯಲ್ ಒಂದು ಸಂದರ್ಶನದಲ್ಲಿ.
ಆ ದಿನಗಳಲ್ಲಿ ನಡೆದ ಘಟನೆಗಳನ್ನು ಪಾಯಲ್ ಹೀಗೆ ವಿವರಿಸಿದ್ದಾರೆ. ಆ ದಿನ ವರ್ಸೋವದ ಆರಾಮ್ ನಗರದಲ್ಲಿರುವ ಕಚೇರಿಯಲ್ಲಿ ಅನುರಾಗ್ ಕಶ್ಯಪ್ ಅವರನ್ನು ಭೇಟಿ ಮಾಡಿದೆ. ಇದು ಒಂದು ಮಾಮೂಲು ಭೇಟಿಯಾಗಿತ್ತು. ಎರಡನೇ ಭೇಟಿ ಸಂಭವಿಸಿದ್ದು ಅವರ ಮನೆಯಲ್ಲಿ. ಈ ಭೇಟಿಯಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಮಾಮೂಲು ವಿಚಾರಗಳನ್ನು ಮಾತನಾಡಿದೆವು. ಮೂರನೇ ಸಲ ಅನುರಾಗ್ ಸ್ವತಃ ನನ್ನನ್ನು ಮನೆಗೆ ಕರೆದರು. ಈ ಭೇಟಿಯಲ್ಲಿ ಅವರ ವರ್ತನೆ ಬದಲಾಗಿತ್ತು. ನನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾದರು. ಆದರೆ ನಾನು ಬೊಬ್ಬೆ ಹಾಕಲಿಲ್ಲ, ಈಗ ನನ್ನನ್ನು ಹೋಗಲು ಬಿಡಿ ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪಾರಾದೆ.


ಲೈಂಗಿಕ ಕಿರಿಕುಳದ ಆರೋಪವನ್ನು ಬಲವಾಗಿ ನಿರಾಕರಿಸಿರುವ ಕಶ್ಯಪ್ ನನ್ನ ಬಾಯಿ ಮುಚ್ಚಿಸಲು ಇಷ್ಟು ಸಮಯ ಬೇಕಾಯಿತೆ? ಈ ಪ್ರಯತ್ನದಲ್ಲಿ ನೀವು ಸಾಕಷ್ಟು ಸುಳ್ಳುಗಳನ್ನು ಹೇಳಿದ್ದೀರಿ ಮತ್ತು ಇತರ ಕೆಲವು ಮಹಿಳೆಯರನ್ನೂ ಎಳೆದು ತಂದಿದ್ದೀರಿ. ಓರ್ವ ಮಹಿಳೆಯಾಗಿ ನೀವು ಈ ರೀತಿ ಮಾಡಬಾರದಿತ್ತು. ಸ್ವಲ್ಪವಾದರೂ ಘನತೆ ಉಳಿಸಿಕೊಳ್ಳಿ ಮ್ಯಾಡಮ್ ಎಂಬುದಾಗಿ ಸರಣಿ ಟ್ವೀಟ್ ಮಾಡಿದ್ದಾರೆ.





















