ಇಂದಿನ ಐಕಾನ್ – ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಗುರುದತ್

       ಉಡುಪಿ ಜಿಲ್ಲೆಯ ಒಂದು ಪುಟ್ಟ ಊರು ಪಡುಕೋಣೆ. ಅಲ್ಲಿ ಹುಟ್ಟಿದ ಅನೇಕರು ಲೆಜೆಂಡ್ಸ್ ಆಗಿದ್ದಾರೆ. ಪ್ರಕಾಶ್ ಪಡುಕೋಣೆ, ದೀಪಿಕಾ ಪಡುಕೋಣೆ, ಪಡುಕೋಣೆ ರಮಾನಂದ್ ರಾವ್…ಹೀಗೆ ಪಟ್ಟಿ ಮುಂದುವರೆಯುತ್ತದೆ. ಆ ಪಟ್ಟಿಯಲ್ಲಿ ತುತ್ತತುದಿಯ  ಹೆಸರು ಗುರುದತ್! ಹಿಂದಿ ಸಿನೆಮಾಕ್ಕೆ ಸ್ಮರಣೀಯ ಎಪಿಕ್ ಸಿನೆಮಾಗಳನ್ನು ನೀಡಿದ ಕೀರ್ತಿ ಅವರದ್ದು.

       ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ ಎಂಬ ಇಷ್ಟುದ್ದ ಹೆಸರು ಅವರದ್ದು. ಕೊಂಕಣಿ ಮಾತೃಭಾಷೆಯ ಸಾರಸ್ವತ ಕುಟುಂಬ. ಅವರ ತಂಗಿ ಲಲಿತಾ ಲಾಜ್ಮಿ ಪ್ರಸಿದ್ದ ಪೈಂಟರ್ ಆಗಿದ್ದರು. ಸೊಸೆ ಕಲ್ಪನಾ ಲಾಜ್ಮಿ ಪ್ರಸಿದ್ದ ಸ್ಕ್ರಿಪ್ಟ್ ರೈಟರ್ ಆಗಿದ್ದರು. ಅವರ ತಂದೆ ತಾಯಿ ಮೊದಲು ನೆಲೆಸಿದ್ದು  ಕಾರವಾರದಲ್ಲಿ. ನಂತರ ಅವರು ಕೋಲ್ಕತ್ತಾದ ‘ಭವಾನಿಪೂರ್’  ಎಂಬ ನಗರಕ್ಕೆ ವರ್ಗಾವಣೆ ಆದರು. ಬಾಲ್ಯದಲ್ಲಿ ಒಮ್ಮೆ ಅಪಘಾತ ಆಗಿ ಮಗು  ಬದುಕುವುದೇ ಕಷ್ಟ ಅನ್ನಿಸಿದಾಗ ತಂದೆ ತಾಯಿ ದತ್ತಾತ್ರೆಯ ಸ್ವಾಮಿಗೆ ಹರಕೆ ಹೊತ್ತ ಕಾರಣ ಮಗುವಿನ ಪ್ರಾಣ ಉಳಿಯಿತು. ಅಂದಿನಿಂದ ಅವರ ಹೆಸರು ಗುರುದತ್ತ ಆಯಿತು.  ಕೋಲ್ಕತ್ತಾದಲ್ಲಿ ಟೆಲಿಫೋನ್ ಆಪರೇಟರ್ ಆಗಿ ಸ್ವಲ್ಪ ದಿನ ಕೆಲಸ ಮಾಡಿದರು. ಆ ಕೆಲಸ ಬೋರ್ ಆದಾಗ ರಾಜೀನಾಮೆ ಕೊಟ್ಟು ಪೂನಾಕ್ಕೆ ಬಂದರು.

      ಅವರ ಅದೃಷ್ಟ ತುಂಬಾ ಚೆನ್ನಾಗಿತ್ತು. ‘ಪ್ರಭಾತ್ ಫಿಲಂ ಕಂಪೆನಿ’ ಎಂಬ ಸಿನೆಮಾ  ನಿರ್ಮಾಣ ಕಂಪೆನಿಯ ಜೊತೆಗೆ ಮೂರು ವರ್ಷಗಳ ಒಪ್ಪಂದ ಆಯಿತು. ‘ ಚಾಂದ್’ ಮತ್ತು ‘ಹಮ್ ಏಕ್ ಹೈ’  ಸಿನೆಮಾಗಳಿಗೆ ಸಹ ನಿರ್ದೇಶನ ಮತ್ತು ನೃತ್ಯ ನಿರ್ದೇಶನ ಮಾಡುವ ಅವಕಾಶ ದೊರೆಯಿತು. ಅದರೊಂದಿಗೆ ವಿ. ಶಾಂತಾರಾಮ್ ಅವರ ‘ರಾಜಕಮಲ್ ಕಲಾ ಮಂದಿರ ‘ ಎಂಬ ನಿರ್ಮಾಣ ಸಂಸ್ಥೆಗೆ ಹಲವು ಸಿನೆಮಾಗಳನ್ನು ಸಹ ನಿರ್ದೇಶನ ಮಾಡಿದರು.

      ಅದೇ ಹೊತ್ತಿಗೆ ಹಿಂದಿ ಸಿನೆಮಾದ ಚಿರ ಯುವಕ ನಟ ದೇವಾನಂದ್ ಅವರ ಗೆಳೆತನ ಆಯಿತು. ಬಾಜಿ ಮತ್ತು ಚಾಲ್ ಎಂಬ ಎರಡು ಸಿನೆಮಾಗಳನ್ನು ಸ್ವತಂತ್ರವಾಗಿ ನಿರ್ದೇಶನ ಮಾಡುವ ಅವಕಾಶವನ್ನು ದೇವಾನಂದ್ ಅವರು ಗುರುದತ್ತ ಅವರಿಗೆ ನೀಡಿದರು.  ಆರ್ ಪಾರ್, Mr and Mrs 55, CID ಅವರು ಆರಂಭದಲ್ಲಿ  ನಿರ್ದೇಶನ ಮಾಡಿದ ಉತ್ತಮ ಸಿನೆಮಾಗಳು.

        ಅದರ ನಂತರ ಒಂದರ ಹಿಂದೆ ಒಂದು ಕ್ಲಾಸಿಕಲ್ ಸಿನೆಮಾಗಳನ್ನು ಅವರು ನಿರ್ದೇಶನ ಮಾಡಿದರು. ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಚೌದವೀನ್ ಕಾ ಚಾಂದ್…ಇವುಗಳು ಗುರುದತ್ ಅಭಿನಯ ಮಾಡಿದ ಎಪಿಕ್ ಸಿನೆಮಾಗಳು. ಯಾವ ಸಿನಿಮಾವನ್ನೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ‘ ಪ್ಯಾಸಾ’ ಸಿನೆಮಾ ಟೈಮ್ ಮ್ಯಾಗಝೀನ್  ಪಟ್ಟಿ ಮಾಡಿದ ಟಾಪ್ 100 ಸಿನೆಮಾಗಳಲ್ಲಿ ಸ್ಥಾನ ಪಡೆದಿದೆ! ಗುರುದತ್ ಅವರು ಹಿಂದಿ ಸಿನೆಮಾದ “ಗ್ರೇಟೆಸ್ಟ್ ಫಿಲ್ಮ್ ಡೈರೆಕ್ಟರ್ ” ಎಂಬ ಕೀರ್ತಿಗೆ ಭಾಜನರಾದರು. ತನ್ನದೇ ಜೀವನಚರಿತ್ರೆ ಆಧಾರಿತವಾದ “ಕಾಗಜ್ ಕೆ ಫೂಲ್” ಸಿನೆಮಾ ಬಾಲಿವುಡ್ಡಿನ ಮಹೋನ್ನತ ಕ್ಲಾಸಿಕಲ್ ಸಿನೆಮಾ ಎಂದು ಕರೆಸಿಕೊಂಡಿತು. ಆದರೆ ಸಿನೆಮಾ ಫ್ಲಾಪ್ ಆಗಿ ಗುರುದತ್ತ ಎಲ್ಲವನ್ನೂ ಕಳೆದುಕೊಂಡರು. ತ್ರಿಕೋನ ಪ್ರೇಮ ಕಥೆ ಹೊಂದಿದ್ದ “ಚೌದವೀಂ ಕಾ ಚಾಂದ್” ಸೂಪರ್ ಹಿಟ್ ಆಯಿತು. ಅವರ ಕೊನೆಯ ಸಿನೆಮಾ ‘ಸಾಂಝ್ ಔರ್ ಸವೆರಾ’ ಕೂಡ  ಸಾಕಷ್ಟು ಜನಪ್ರಿಯ ಆಯಿತು.

         ಮಹಾ ಕ್ಲಾಸಿಕ್ ಸಿನೆಮಾಗಳನ್ನು ಬಾಲಿವುಡ್ಡಿಗೆ ನೀಡಿದ ಗುರುದತ್ ಅವರ ಸಿನೆಮಾಗಳು ಮತ್ತೆ ಮತ್ತೆ ಬಿಡುಗಡೆ ಆಗುತ್ತಿದ್ದವು. ಜರ್ಮನಿ, ಫ್ರಾನ್ಸ್, ಜಪಾನ್ ದೇಶದಲ್ಲಿ ಅವರ ಸಿನೆಮಾಗಳು ಬಿಡುಗಡೆ ಆಗಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತಂದು ಕೊಟ್ಟಿತು. ಸಿಎನ್ಎನ್ ಸಂಸ್ಥೆ ಅವರನ್ನು ಏಷಿಯಾದ ಟಾಪ್ 25 ನಟರಲ್ಲಿ ಒಬ್ಬರು ಎಂದು ಸ್ಥಾನ ನೀಡಿತು.

      ಗುರುದತ್ ಎಂತಹ ಮಹಾನಟ ಆದರೂ ಅವರ ಖಾಸಗಿ ಜೀವನ ಅಷ್ಟೇ ದುರಂತ ಆಗಿತ್ತು. ಖ್ಯಾತ ನಟಿ ಮತ್ತು ಗಾಯಕಿ ಗೀತಾ ದತ್ತ ಅವರನ್ನು ಪ್ರೀತಿಸಿ ಮದುವೆಯಾದರೂ ಅವರ ನಡುವೆ ಪ್ರೀತಿ ಮುಂದೆ ಉಳಿಯಲಿಲ್ಲ. ಗುರುದತ್ತ ಅವರು ಅತಿಯಾದ ಶಿಸ್ತನ್ನು ಹೆಂಡತಿಯ ಮೇಲೆ ಹೇರಿದ್ದರಿಂದ ಗೀತಾ ದತ್ತ ಗಂಡನನ್ನು ಬಿಟ್ಟು ಹೋದರು. ಆಗ ಅತಿಯಾದ ನಿರಾಸೆ ಮತ್ತು ದುಃಖಕ್ಕೆ ಒಳಗಾದ ಗುರುದತ್ ಕುಡಿತ ಮತ್ತು ಧೂಮಪಾನಕ್ಕೆ ದಾಸರಾದರು. ಕೇವಲ 39 ವರ್ಷ ಮಾತ್ರ ಬದುಕಿದ್ದ ಗುರುದತ್ತ ಇಡೀ ಸಿನೆಮಾ ಜಗತ್ತನ್ನು ದುಃಖಕ್ಕೆ ದೂಡಿ 1964ರಲ್ಲೀ ಹೊರಟೇ ಹೋದರು!

ಅವರ ಶ್ರೇಷ್ಟ ಸಿನೆಮಾಗಳ ಮೂಲಕ ಅವರು ಇನ್ನೂ ನಮ್ಮೊಳಗೆ ಜೀವಂತವಾಗಿ ಇದ್ದಾರೆ.

ಬರಹ – ರಾಜೇಂದ್ರ ಭಟ್ ಕೆ.









































































































error: Content is protected !!
Scroll to Top