ಸೀನು ಮತ್ತು ನಾನು…

ಸದಾ ನೆನಪಾಗಿ ಕಾಡುವ  ನನ್ನ ಹಳ್ಳಿಯ ಸುಂದರ ಪರಿಸರದ  ನಡುವೆ, ಆಷ್ಟೇ ಆತ್ಮೀಯವಾಗಿ ಕಾಡುವ ನೆನಪು “ಸೀನು”.    ಸ್ವಂತ ಅಣ್ಣಂದಿರಿಗೂ ನನಗೂ ವಯಸ್ಸಿನ ಅಂತರ ಬಹಳವಿದ್ದರಿಂದ, ಸೀನು ಆ ಜಾಗವನ್ನು ಸದಾ ತುಂಬುತ್ತಿದ್ದ. ಅವನ ಭೂಮಿ ತೂಕದ ಸಹನೆಗೆ ನಾನು ದೊಡ್ಡ ಸವಾಲಾಗಿದ್ದೆ. ನನ್ನ ಕೆಟ್ಟ ಹಠಗಳಿಗೆಲ್ಲಾ ಸೀನು ಮಾತ್ರ ಗಂಭೀರವಾಗಿ ಸ್ಪಂದಿಸುತ್ತಿದ್ದ.  ಬಹಳಷ್ಟು ನೆನಪುಗಳು ನಮ್ಮ ನಡುವೆ ಹರಿದಾಡಿದರೂ, ಮರೆಯಲಾಗದ ಒಂದು ಘಟನೆಯನ್ನಷ್ಟೇ ಇಲ್ಲಿ ಹೇಳುತ್ತಿದ್ದೇನೆ. ನನಗಾಗ ಮೂರೋ ,ನಾಲ್ಕೋ ವರ್ಷವಿರಬೇಕು. ನಮ್ಮ ಮನೆಯ ಪಕ್ಕ  ಹರಿಯುತ್ತಿದ್ದ ತೊರೆಗೆ ಮಳೆಗಾಲ ಮುಗಿದೊಡನೆ ಕಟ್ಟ ಕಟ್ಟುತ್ತಿದ್ದರು. ಅದರಲ್ಲಿ ಸುಮಾರು ಏಳೆಂಟು ಅಡಿ ನೀರು ಸಂಗ್ರಹವಾಗುತ್ತಿತ್ತು. ನನ್ನ ಅಣ್ಣಂದಿರು, ನೆರೆಹೊರೆಯ ಯುವಕರು , ನೀರೊಳಗೆ ಧುಮುಕಿ ಸರಾಗವಾಗಿ ಈಜುತ್ತಿದ್ದದ್ದನ್ನು, ನಾನು ಮತ್ತು ನನ್ನಿಂದ 2 ವರ್ಷಗಳಷ್ಟು ದೊಡ್ಡವನಾದ ಸೀನು ,ಬೆರಗುಗಣ್ಣಿಂದ ನೋಡುತ್ತಿದ್ದೆವು. ” ಎಂಕ್ಲಾ ನೀಂದೊಡು”…. ಮೆಲ್ಲನೆ ನನ್ನ ವರಾತ ತೆಗೆದೆ. ನನ್ನ ಹಠ ಸ್ವಭಾವದ ಅರಿವಿದ್ದ ಸೀನು,  ನನ್ನ ಸಂಗೀತ ಕಛೇರಿ ಆರಂಭವಾಗುವ ಮುಂಚೆ, ಎಲ್ಲರೂ ಹೋದ ಮೇಲೆ ತಾನೇ ನನಗೆ ಈಜು ಕಲಿಸುವುದಾಗಿ ಹೇಳಿ ನನ್ನ  ಬಾಯಿ ಮುಚ್ಚಿಸಿದ. ಸರಿ ಎಲ್ಲರೂ ಅಲ್ಲಿಂದ ಹೊರಟಾಗ, ನಾವೂ ಹೊರಟೆವು.  ಮೊದಲೇ ನಿಗದಿಯಾದಂತೆ ಎಲ್ಲರ ಕಣ್ಣು ತಪ್ಪಿಸಿ ಮತ್ತೆ ಅಲ್ಲಿಗೆ ಮರಳಿದೆವು.  “ಎಂಚ ನೀಂದುಣಾ?” ಎನ್ನುವ ನನ್ನ ಪ್ರಶ್ನೆಗೆ, ಮೇಲಿಂದ ಕೆಳಗೆ ಧುಮುಕಿ ಕೈಕಾಲು ಬಡಿದರಾಯಿತು ಎಂದ.  ( ಪ್ರಾಯೋಗಿಕವಾಗಿ ತೋರಿಸಿಕೊಡಲು ಅವನಿಗೂ ಧೈರ್ಯವಿರಲಿಲ್ಲ). ಸರಿ…ಎತ್ತರದ ಜಾಗ ಹುಡುಕಿ  ಧುಮುಕಿಯೇ ಬಿಟ್ಟೆ.. .. ಅದೇ ಹೊತ್ತಿಗೆ, “ಬೈರಾಸು” ಮರೆತೆ ಎಂದು ತಿರುಗಿ ಅಲ್ಲಿಗೆ ಬಂದ ಅಣ್ಣ, ಹೊಟ್ಟೆಯೊಳಗೆ ಸೇರಿದ್ದ ಗುಡಾಣದಷ್ಟು ನೀರನ್ನು ಕಕ್ಕಿಸದೇ ಇದ್ದಿದ್ದರೆ,  ಶಾಶ್ವತವಾಗಿ ನಾನು “ಈಜು” ತ್ತಲೇ ಇರುತ್ತಿದ್ದೆ..

ಜ್ಯೋತಿ ಪದ್ಮನಾಭ್







































error: Content is protected !!
Scroll to Top