ಕಾರ್ಕಳ ಪೇಟೆ ಒಳಚರಂಡಿ ಕಾಮಗಾರಿ ಅವ್ಯವಸ್ಥೆ : ಯಾಮಾರಿಸಲು ಬಂದ ಎಂಜಿನಿಯರ್‌ಗಳನ್ನು ಜನರೇ ವಾಪಾಸು ಕಳುಹಿಸಿದರು

 ಕಾರ್ಕಳ, ಸೆ. 9: ಪೇಟೆಯ ರಥಬೀದಿ ಒಳಚರಂಡಿಯ ಅಸಮರ್ಪಕ  ಕಾಮಗಾರಿಯ  ಕರ್ಮಕಾಂಡ ಮುಂದುವರಿದಿದೆ. ಕಳಪೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಒಳಚರಂಡಿ ನೀರೆಲ್ಲ ರಸ್ತೆಯಲ್ಲಿ ಹರಿದು ಜನರು ಸಂಕಷ್ಟ ಅನುಭವಿಸಿದ್ದು ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಬಾವಿಗಳಿಗೂ ಕಲುಷಿತ ನೀರು ನುಗ್ಗಿ ಅಧ್ವಾನವಾಗಿದೆ.

ಈ ಕಳಪೆ ಕಾಮಗಾರಿ ವಿರುದ್ಧ ಈಗಾಗಲೇ ಪೊಲೀಸ್‌ ದೂರು ಕೂಡ ದಾಖಲಾಗಿದೆ.  

ಈ ಮಧ್ಯೆ ಮಂಗಳವಾರ ಕಾಮಗಾರಿ ನಡೆಸಿದ  ಗುತ್ತಿಗೆದಾರ ಕಂಪನಿಯ ಎಂಜಿನಿಯರುಗಳು ಬಂದು ಕಾಮಗಾರಿ ಸರಿಯಾಗಿದೆ ಎಂದು ಸಹಿ ಪಡೆದು ಸ್ಥಳೀಯ ಜನರನ್ನು ಯಾಮಾರಿಸಲು ಯತ್ನಿಸಿದ ಘಟನೆ ಸಂಭವಿಸಿದೆ.

ಗುತ್ತಿಗೆದಾರರ ಪರವಾಗಿ ಬಂದ ಕಮಲಾಕ್ಷ ಎಂಬವರು  ಪೇಟೆಯ ಕೆಲವು  ನಿವಾಸಿಗಳಿಂದ ಒಂದು ಕಾಗದದಲ್ಲಿ ಬರೀ ಒಂದು ವಾಕ್ಯ ಬರೆದು ಅದಕ್ಕೆ ಸಹಿ ಪಡೆದುಕೊಂಡರು.ಅದನ್ನು ತೋರಿಸಿ ಇನ್ನೂ ಕೆಲವರಿಂದ ಸಹಿ ಹಾಕಿಸಿಕೊಳ್ಳಲು ಮುಂದಾದಾಗ  ಈ ಮಾಹಿತಿ ತಿಳಿದ ಪುರಸಭಾ ಸದಸ್ಯರಾದ  ಜಿ.ಲಕ್ಷ್ಮಿನಾರಾಯಣ ಮಲ್ಯ ಮತ್ತು ಶುಭದ್‌  ರಾವ್‌ ಹಾಗೂ ಮಾಜಿ ಪುರಸಭಾ ಸದಸ್ಯ ವಿವೇಕಾನಂದ  ಅವರು  ಸ್ಥಳಕ್ಕೆ ಧಾವಿಸಿ ಅವರು ಸಹಿ ಪಡೆದ ಕಾಗದವನ್ನು ಪರಿಶೀಲಿಸಿದಾಗ ಅದು ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ ಎಂದು ಕಂಡುಬಂತು.

ನಮಗೆ ಈ ಒಳಚರಂಡಿ ಕಾಮಗಾರಿ ತೃಪ್ತಿ ಕೊಟ್ಟಿದೆ, ಈಗ ಯಾವ ಸಮಸ್ಯೆಯೂ ಇಲ್ಲ ಎಂಬುದನ್ನು ಜನರಿಂದಲೇ ಹೇಳಿಸುವ ಪ್ರಯತ್ನವನ್ನು ಗುತ್ತಿಗೆದಾರರು ಮಾಡಿದ್ದರು.ಇದಕ್ಕೆ ಬಲವಾದ ಆಕ್ಷೇಪ ಎತ್ತಿದ ಪುರಸಭಾ ಸದಸ್ಯರು ಮತ್ತು ಸ್ಥಳೀಯ ಜನರು ಪುರಸಭೆಯ ಎಂಜಿನಿಯರ್‌ ಪದ್ಮನಾಭ ಅವರನ್ನು ಕರೆಸಿದರು. ನಿಜವಾಗಿ ಇಂಥ ಪತ್ರಕ್ಕೆ ಮೊದಲು ಪುರಸಭೆಯ ಎಂಜಿನಿಯರ್‌, ಚೀಫ್‌ ಆಫೀಸರ್‌ ಮತ್ತಿತರರು ಸಹಿ ಹಾಕಿ ಅನಂತರ ಜನರಿಂದ ಸಹಿ ಪಡೆದುಕೊಳ್ಳಬೇಕಿತ್ತು. ಆದರೆ ಹೀಗೊಂದು ಪ್ರಕ್ರಿಯೆ ಕಾನೂನಾತ್ಮಕವಾಗಿ ಇಲ್ಲ. ಪುರಸಭೆ ಎಂಜಿನಿಯರ್‌ ನಾನು ಇದಕ್ಕೆ ಸಹಿ ಹಾಕುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬಳಿಕ ಗುತ್ತಿಗೆದಾರರ ಎಂಜಿನಿಯರ್‌ ಅಲ್ಲಿಂದ ತೆರಳಿದರು.  

ರಸ್ತೆ ಈಗ ಧೂಳುಮಯ

ಮಳೆ ಸುರಿಯುವಾಗ ಕೊಳಚೆ ನೀರಿನ ಕಾಟ, ಈಗ ಮಳೆ ತುಸು ಕಡಿಮೆಯಾದಾಗ ಧೂಳಿನ ಅಭಿಷೇಕ. ಹೀಗೆ ರಘಬೀದಿಯಲ್ಲಿರುವ ವ್ಯಾಪಾರಿಗಳಿಗೆ ಮತ್ತು ನಿವಾಸಿಗಳಿಗೆ ಸಮಸ್ಯೆ ತಪ್ಪುತ್ತಿಲ್ಲ.

ಮಾರುಕಟ್ಟೆ ರಸ್ತೆಯನ್ನು ಕಾಂಕ್ರೀಟಿಕರಣಕ್ಕಾಗಿ ಮುಚ್ಚಿರುವುದರಿಂದ ವಾಹನಗಳೆಲ್ಲ ರಥಬೀದಿಯಲ್ಲೇ ಓಡಾಡುತ್ತಿವೆ.

 ಒಂದು ರಸ್ತೆಯ ಕಾಮಗಾರಿ ಪೂರ್ತಿಯಾದ ಬಳಿಕ ಇನ್ನೊಂದು ರಸ್ತೆಯ ಕಾಮಗಾರಿ ಶುರು ಮಾಡಿದ್ದರೆ ಜನರಿಗಾಗುವ ತೊಂದರೆ ಸ್ವಲ್ಪವಾದರೂ ತಪ್ಪುತ್ತಿತ್ತು. ಅದರೆ ಎರಡು ಪ್ರಮುಖ ರಸ್ತೆಗಳನ್ನು ಏಕಕಾಲಕ್ಕೆ ಅಗೆದು ಹಾಕಿ ಅದೇನು ಸಾಧಿಸಲು ಹೊರಟಿದ್ದಾರೋ ದೇವರಿಗೇ ಗೊತ್ತು? ಹಾಗೊಂದು ವೇಳೆ ಕಾಮಗಾರಿ ಮಾಡುವುದಾದರೂ ಲಾಕ್‌ ಡೌನ್‌ ದಿನಗಳಲ್ಲಿ ಮಾಡಿ ಮುಗಿಸಬೇಕಿತ್ತು. ಅದು ಬಿಟ್ಟು ಈಗ ಜನಜೀವನ ತುಸು ಸಹಜ ಸ್ಥಿತಿಗೆ ಬಂದು ವ್ಯಾಪಾರ ವಹಿವಾಟುಗಳು ಮರಳಿ ಜೀವ ಪಡೆಯುವ ಹೊತ್ತಿನಲ್ಲೇ ಕಾಮಗಾರಿ ಪ್ರಾರಂಭಿಸಿ ವ್ಯಾಪಾರಿಗಳನ್ನು ಗೋಳುಹೊಯ್ದುಕೊಳ್ಳುವುದರಲ್ಲಿ ಯಾವ ಸಾರ್ಥಕತೆಯಿದೆ ಎಂದು ಕೇಳುತ್ತಾರೆ ಲಕ್ಷ್ಮೀನಾರಾಯಣ ಮಲ್ಯ.









































error: Content is protected !!
Scroll to Top