ಕೊಪ್ಪಳ : ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಟೆಂಪಲ್ ರನ್ ನಡೆಸಿದ್ದಾರೆ. ಜಿಲ್ಲೆಯ ಯಲಬುರ್ಗಾದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ತಮ್ಮ ಹೇಳಿಕೆ ವಿವಾದಕ್ಕೆ ಆಸ್ಪದ ನೀಡುತ್ತಿದ್ದಂತೆ ಇಂದು (ಆ.31) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟ ಆಂಜನೇಯ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದಿದ್ದ ರಾಯರೆಡ್ಡಿ
ಆ.30ರಂದು ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಸವರಾಜ ರಾಯರೆಡ್ಡಿ ಅವರು, ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ. ಆದರೆ ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಶ್ರೇಷ್ಠ ಧರ್ಮವಾಗಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಧರ್ಮ ಹೇಳಿಕೊಡುತ್ತದೆ. ಅಲ್ಲದೇ ನನಗೆ ಪವಿತ್ರ ಮೆಕ್ಕಾಗೆ ಹೋಗಿ ಹಜ್ ಯಾತ್ರೆ ಮಾಡಬೇಕೆಂಬ ಬಹುದೊಡ್ಡ ಆಸೆಯಿದೆ. ಆದರೆ ಅಲ್ಲಿಗೆ ಹೋಗಲು ನನಗೆ ಅವಕಾಶವಿಲ್ಲ. ಅಲ್ಲಿಗೆ ಪ್ರವೇಶ ಪಡೆಯಬೇಕಾದರೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.
ಮಠ-ಮಂದಿರಗಳಿಗೆ ಹೋಗಲ್ಲ
ಇದೇ ವೇಳೆ ಮಠ-ದೇವಾಲಯಗಳ ಭೇಟಿ ಬಗ್ಗೆ ಪ್ರಸ್ತಾಪಿಸಿದ ಅವರು, ನಾನು ಮಠ-ಮಾನ್ಯಗಳು, ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ಧಾರ್ಮಿಕ ಕ್ಷೇತ್ರಗಳಿಗೆ ಹೋದರೂ ಕೇವಲ ಅವುಗಳ ಇತಿಹಾಸ ಅಧ್ಯಯನಕ್ಕಾಗಿ ಮಾತ್ರ ಹೋಗುತ್ತೇನೆ. ಜನರು ಮತಾಂಧರು ಮತ್ತು ಜಾತಿವಾದಿಗಳಾಗಬಾರದು. ಕೇವಲ ಮಸೀದಿಗೆ ಹೋಗಿ ಅಲ್ಲಾಹು ಅಕ್ಬರ್ ಎಂದ ಮಾತ್ರಕ್ಕೆ, ಅಥವಾ ದೇವಸ್ಥಾನಗಳಿಗೆ ಹೋದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದರು.

ಶರಣ ತತ್ವವೇ ಜಗತ್ತಿನಲ್ಲಿ ಅತ್ಯುತ್ತಮ ಎಂದು ಹೇಳಿಕೆ ವಿವಾದಕ್ಕೆ ಸ್ಪಷ್ಟನೆ
ಹೇಳಿಕೆ ಟೀಕೆ ಬೆನ್ನಲ್ಲೇ ಯಲಬುರ್ಗಾದಲ್ಲಿ, ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ಉಲ್ಲೇಖಿಸಿ, ಶರಣ ತತ್ವವೇ ಜಗತ್ತಿನಲ್ಲಿ ಅತ್ಯುತ್ತಮ ಎಂದು ಸ್ಪಷ್ಟನೆ ನೀಡಿದ್ದರು. ನಾನು ಎಲ್ಲ ಧರ್ಮಗಳೂ ಶ್ರೇಷ್ಠ ಎಂದೇ ಹೇಳಿದ್ದೇನೆ, ಇದರಲ್ಲಿ ತಪ್ಪೇನಿದೆ? ಇಸ್ಲಾಂನಲ್ಲಿ ಶ್ರೇಷ್ಠ ವಿಚಾರಗಳಿವೆ ಎಂದಿದ್ದೇನೆಯೇ ಹೊರತು, ಬೇರೆ ಧರ್ಮಗಳು ಕಡೆ ಎಂದು ಹೇಳಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಸಾಂದರ್ಭಿಕವಾಗಿ ಮಾತನಾಡುತ್ತೇವೆ. ನಾನು ಇಸ್ಲಾಂ, ಕ್ರೈಸ್ತ, ಯಹೂದಿ ಸೇರಿದಂತೆ ಎಲ್ಲಾ ಧರ್ಮಗಳ ಇತಿಹಾಸ ಮತ್ತು ವಿಚಾರಗಳನ್ನು ಅಧ್ಯಯನ ಮಾಡುತ್ತೇನೆ. ಏಸು ಕ್ರಿಸ್ತನ ಸಮಾಧಿಗೂ ಹೋಗಿ ಬಂದಿದ್ದೇನೆ. ಆದರೆ ನಾನು ಯಾವುದೇ ಒಂದು ಧರ್ಮದ ಫಾಲೋವರ್ ಅಲ್ಲ. ನನಗೆ ಯಾವುದೇ ಧರ್ಮವಿಲ್ಲ. ಮಠ-ಮಾನ್ಯಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ, ಪತ್ನಿ-ಮಕ್ಕಳು ಅಥವಾ ಜೊತೆಗಿರುವವರ ಒತ್ತಾಯಕ್ಕೆ ಹೋಗುತ್ತೇನೆ ಎಂದಿದ್ದರು.





















