ಶಾಸಕರ ಮನೆಗೆ ಮೊದಲ ಪೋಸ್ಟರ್ ಅಂಟಿಸುತ್ತೇವೆ – ಶುಭದ ರಾವ್
ಕಾರ್ಕಳ : ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಾರ್ಕಳ ಶಾಸಕರು ಪರಶುರಾಮನ ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಕಾರಣಕ್ಕಾಗಿ ರಾಜೀನಾಮೆ ನೀಡಬೇಕು. ರಾಜೀನಾಮೆಗೆ ಆಗ್ರಹಿಸಿ ಕಾರ್ಕಳದಲ್ಲಿ ಪೋಸ್ಟರ್ ಅಭಿಯಾನ ಮಾಡಲಾಗುವುದು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಸೆ. 1ರಂದು ಕಾರ್ಕಳ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ದೇಶದ ರಾಜಕೀಯ ವಲಯದಲ್ಲಿ ಹಗರಣಗಳ ಆರೋಪ ಹೊತ್ತವರು ರಾಜೀನಾಮೆ ನೀಡುವ ಬೆಳವಣಿಗೆ ನಡೆಯುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷಾ ಅಕ್ರಮದ ಕಾರಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತಾರೆ. ರಾಜ್ಯದಲ್ಲಿ ಹಗರಣದ ಆರೋಪ ಬಂದ ಕಾರಣ ಸಚಿವ ನಾಗೇಂದ್ರ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತಾರೆ.
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಪಕ್ಷ ಬಿಜೆಪಿಯಲ್ಲಿ ಬಹುದೊಡ್ಡ ಹಗರಣದ ಆರೋಪ ಹೊತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಶಾಸಕರಾಗಿದ್ದು ಅವರ ರಾಜೀನಾಮೆ ಯಾವಾಗ ಎಂದು ಕಾರ್ಕಳದ ಜನತೆಯ ಪರವಾಗಿ ನಾವು ಕೇಳುತ್ತಿದ್ದೇವೆ. ನಾಗೇಂದ್ರ ರಾಜೀನಾಮೆ ಆಗ್ರಹಿಸುತ್ತಿದ್ದ ಕಾರ್ಕಳ ಶಾಸಕರು ವಿಧಾನ ಸಭೆಯಲ್ಲಿ ಪರಶುರಾಮನ ಪ್ರತಿಮೆ ಪುನಃ ನಿರ್ಮಾಣದ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದ ಶುಭದ ಅವರು ತಪ್ಪು ಮಾಡಿದವನಿಗೆ ಆತ್ಮಸಾಕ್ಷಿಯ ಅಡ್ಡ ಬಂದಿರಬೇಕು ಎಂದರು.

ಕಾರ್ಕಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇನೆಂದು, ಕಂಚಿನ ಪ್ರತಿಮೆ ಸ್ಥಾಪನೆ ಮಾಡಿದ್ದೇನೆಂದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪ್ರತಿಮೆಯನ್ನು ಸುನೀಲ್ ಕುಮಾರ್ ಉದ್ಘಾಟನೆ ಮಾಡಿಸಿದ್ದರು. ಅನಂತರ ಆ ಪ್ರತಿಮೆ ನಕಲಿ ಎಂದು ಜಗಜ್ಜಾಹೀರಾಗಿದ್ದು ಈಗ ಎಲ್ಲರಿಗೂ ತಿಳಿದಿರುವ ಸತ್ಯ. ಧರ್ಮದ ಹೆಸರಿನಲ್ಲಿ ಇಷ್ಟು ದೊಡ್ಡ ಮಟ್ಟದ ಮೋಸ ಅನಾಚಾರ ಮಾಡಿದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಲ್ಲವೇ ಎಂದರು.
ಜವಾಬ್ದಾರರಲ್ಲವೇ ?
ಈ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು ಕಾಲಂ 420, 409, 201,120B ವಂಚನೆ, ನಂಬಿಕೆ ದ್ರೋಹ, ಸಾಕ್ಷಿನಾಶ, ಮತ್ತು ಒಳಸಂಚು ಎನ್ನುವ ಗಂಭೀರ ಆರೋಪವನ್ನು ತಮ್ಮ ದೋಷಾರೋಪ ಪಟ್ಟಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರತಿಮೆ ನಿರ್ಮಿಸಿದ ಶಿಲ್ಪಿ, ಇಂಜಿನಿಯರ್ ಮೇಲೆ ಇಷ್ಟು ದೊಡ್ಡ ಗುರುತರವಾದ ಆರೋಪ ದಾಖಲಾಗಿದ್ದು ಈಗಾಗಲೇ ಶಿಲ್ಪಿಯ ಬಂಧನವಾಗಿ ಜೈಲುವಾಸವೂ ಆಗಿರುತ್ತದೆ. ಪ್ರತಿಮೆ ನಿರ್ಮಿಸಿದ ಶಿಲ್ಪಿ, ಇಂಜಿನಿಯರ್ ಆರೋಪವನ್ನು ಹೊತ್ತಿರುವಾಗ ಈ ಯೋಜನೆಯ ರೂವಾರಿಯಾಗಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೂಡ ಅಷ್ಟೇ ಜವಾಬ್ದಾರರಲ್ಲವೇ ? ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿರುವುದು ಅವರ ಜವಾಬ್ದಾರಿಯಾಗಿರುತ್ತದೆ. ಆತ್ಮಸಾಕ್ಷಿ ಇದ್ದರೆ ಇಷ್ಟು ದೊಡ್ಡ ಆರೋಪವನ್ನು ಹೊತ್ತು ಇನ್ನೂ ಅಧಿಕಾರದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದು ಶುಭದ ಪ್ರಶ್ನಿಸಿದರು.
ಪರಶುರಾಮ ಪ್ರತಿಮೆಯ ಎರಡು ಕಾಲು ಮತ್ತು ಅರ್ಧ ಭಾಗ ಬೆಟ್ಟದ ಮೇಲೆ ಇದ್ದರೂ ಇನ್ನೂ ಎರಡು ಕಾಲು ಮತ್ತು ಇಡೀ ದೇಹದ ಭಾಗ ಕಾರ್ಕಳ ಪೋಲಿಸ್ ಠಾಣೆಯಲ್ಲಿರುವುದು ಈ ಪ್ರಕರಣದಲ್ಲಿ ನಡೆದ ಮೋಸಕ್ಕೆ ಸಾಕ್ಷಿಯಾಗಿದೆ ಎಂದು ಶುಭದಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ ಮಾಳ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.


















