ಮಿಸ್‌ ಗೆ ಈ ವರ್ಷ ಎಲ್ಲವೂ “ಮಿಸ್‌”

ಕೊರೊನಾ ಯಾವಾಗ ಮುಗಿಯುತ್ತದೆಯೋ ಶಾಲೆಗಳು ಯಾವಾಗ ಆರಂಭವಾಗುತ್ತದೆಯೋ ಎಂದು ಚಾತಕ ಪಕ್ಷಿಯಂತೆ ಕಾದು ಸಾಕಾಗಿದೆ. ಭರವಸೆ ಹೊರಟು ಹೋಗಿದೆ. ಆದ್ದರಿಂದ ಈ ವರ್ಷದ ಶಿಕ್ಷಕರ ದಿನಾಚರಣೆ ನಮ್ಮಂಥ ಶಿಕ್ಷಕರಿಗೆ ನೋವು ಮಾತ್ರ ಕೊಡುತ್ತದೆ. ಈ ವರ್ಷಕ್ಕೆ ಸಂಭ್ರಮಾಚರಣೆ ಇಲ್ಲ.

***        

ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಕ ದಿನಾಚರಣೆ ಬಂದಿದೆ. ಆದರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರ ಮನಸಿನಲ್ಲಿ ಇಂದು ಸೂತಕದ ಕಳೆ. ಸಂಭ್ರಮಿಸುವ ಖುಷಿಯಲ್ಲಿ ಯಾವ ಶಿಕ್ಷಕರೂ ಇಲ್ಲ. ಕೊರೊನಾ ಕಾರಣಕ್ಕೆ ಶಾಲೆಗಳು ಮುಚ್ಚಿವೆ. ಸದ್ಯ ಆರಂಭವಾಗುವ ಸ್ಥಿತಿ ಕೂಡ ಇಲ್ಲ. ಶಾಲೆಗಳು ಆರಂಭವಾಗುವವರೆಗೂ ನಾವು ಫೀಸ್‌ ಕೊಡುವುದಿಲ್ಲ ಎಂದು ಪೋಷಕರು ಜಿದ್ದಿಗೆ ಬಿದ್ದಿದ್ದಾರೆ. ಕೆಲವು ಶಾಲೆಗಳ  ಆಡಳಿತ ಮಂಡಳಿಯವರು ಆನ್‌ಲೈನ್‌ ಕ್ಲಾಸಿನ ಆಮಿಷ ತೋರಿಸಿ ಒಂದಿಷ್ಟು ಫೀಸನ್ನು ಸಂಗ್ರಹ ಮಾಡಿದ್ದೂ ಉಂಟು. ಆದರೆ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ನುಡಿಯಂತೆ ಆಂಗ್ಲ ಮಾಧ್ಯಮದ ಶಿಕ್ಷಕರು ಇಂದು ಕೊರೊನಾ ಸಂತ್ರಸ್ತರಾಗಿ ಪಡಬಾರದ ಪಾಡು ಪಡುತ್ತಿದ್ದಾರೆ. ಬಹಳ ಒಳ್ಳೆ ಮಿಸ್‌ ಗೆ ಈ ವರ್ಷ ಎಲ್ಲವೂ ಮಿಸ್ಸಿಂಗ್.‌

     ನಮ್ಮಂಥ ಶಿಕ್ಷಕರದ್ದು ಸ್ವಾಭಿಮಾನದ ಬದುಕು. ಎಲ್ಲಿ ಹೋದರೂ ಕೈ ಮುಗಿಯುವ ವಿದ್ಯಾರ್ಥಿಗಳು ಮತ್ತು ಪೋಷಕರು. ನಮಗೆ ಇನ್ನೊಬ್ಬರ ಮುಂದೆ ಕೈಚಾಚಿ ಗೊತ್ತಿಲ್ಲ. ಐದು ತಿಂಗಳಿಂದ ಸಂಬಳ ಬಾರದೆ ಇದ್ದಾಗ ನಮ್ಮ ಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಮನೆಯ ಖರ್ಚುಗಳು ನಿಲ್ಲುವುದಿಲ್ಲ. ಸಾಲ ಕೊಟ್ಟವರು ನಿಧಾನಕ್ಕೆ ಕೊಡಿ ಎನ್ನುವುದಿಲ್ಲ. ಶಾಲೆಗಳಲ್ಲಿ ನಮ್ಮಿಂದ ಅನ್‌ಲೈನ್‌ ಕ್ಲಾಸ್‌ ಗಳನ್ನು ಮಾಡಿಸುವ ಎಲ್ಲ ಆಡಳಿತ ಮಂಡಳಿಯವರು ಕನಿಕರ ತೋರುವುದಿಲ್ಲ. ನಮ್ಮಂಥ ಎಷ್ಟೋ ಜನ ಶಿಕ್ಷಕರು ಗಾರೆ ಕೆಲಸಕ್ಕೆ, ತರಕಾರಿ ಮಾರುವುದಕ್ಕೆ, ಹೋಟೆಲ್‌ ಕೆಲಸಕ್ಕೆ, ಅಡುಗೆ ಕೆಲಸಕ್ಕೆ ಹೋಗಿ ದುಡಿಯಬೇಕಾದ ಪ್ರಸಂಗ ಬಂದಿದೆ.

      ನಮ್ಮನ್ನು ದಶಕಗಳ ಕಾಲ ದುಡಿಸಿದ ನಮ್ಮ ಎಲ್ಲ ಸಾಮರ್ಥ್ಯಗಳನ್ನು ಸೂರೆ ಮಾಡಿದ ಆಡಳಿತ ಮಂಡಳಿಯವರು ನಾವು ಕಷ್ಟದಲ್ಲಿದ್ದೇವೆ ಎಂದಾಗ ಮುಂದೆ ನೋಡೋಣ ಎಂದು ಕೈಚೆಲ್ಲಿದರೆ ನಾವು ಯಾರನ್ನು ಕೇಳಬೇಕು? ಶಾಲೆಗೆ ಮಕ್ಕಳನ್ನು ಸೇರಿಸುವುದರಿಂದ ಆರಂಭಿಸಿ ಪ್ರತಿಭಾ ಕಾರಂಜಿ , ಕ್ರೀಡಾಕೂಟ, ವಾರ್ಷಿಕೋತ್ಸವ, ಪ್ರತಿಭಾ ದಿನಾಚರಣೆ ಇವುಗಳ ಜೊತೆಗೆ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳ ಟಾರ್ಗೆಟ್‌ ಅನ್ನು ನಮ್ಮ ತಲೆಯ ಮೇಲೆ ಹೊರಿಸಿ ಆಡಳಿತ ಮಂಡಳಿಯವರು  ಇಷ್ಟು ವರ್ಷಗಳ ಕಾಲ ನಮ್ಮನ್ನು ದುಡಿಸಿಕೊಂಡಿದ್ದಾರೆ. ಮಕ್ಕಳ ಮೇಲಿನ ಪ್ರೀತಿಯಿಂದ ಶಿಕ್ಷಕ ವೃತ್ತಿಯ ಮೇಲಿನ ಅಭಿಮಾನದಿಂದ ನಾವು ಇದನ್ನೆಲ್ಲ ಗೊಣಗದೆ ಮಾಡಿದ್ದೇವೆ.

   ಕೆಲವು ಕಡೆ ಆಡಳಿತ ಮಂಡಳಿಯವರು ಕನಿಕರ ತೋರಿಸಿ ಒಂದೆರಡು ತಿಂಗಳ ವೇತನ ಕೊಟ್ಟದ್ದೂ ಇದೆ. ಆದರೆ ನನ್ನಂಥ ಸಾವಿರಾರು ಶಿಕ್ಷಕ- ಶಿಕ್ಷಕಿಯರು ಐದು ತಿಂಗಳಿಂದ ವೇತನವಿಲ್ಲದೆ ಸಂತ್ರಸ್ತರಾಗಿದ್ದಾರೆ.ಲಾಕ್‌ಡೌನ್‌ ಕಾರಣಕ್ಕೆ ಮನೆಯವರೆಲ್ಲರೂ ಮನೆಯಲ್ಲಿದ್ದಾರೆ.ಆರೋಗ್ಯ ಚೆನ್ನಾಗಿರುವ ಕಾರಣ ಕಾಲ ಕಾಲಕ್ಕೆ ಹಸಿವಾಗುತ್ತದೆ. ಅಂಗಡಿಯರು ಯಾರೂ ಸಾಲ ಕೇಳಿದಾಗ ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಎಷ್ಟೋ ಜನ ಶಿಕ್ಷಕ – ಶಿಕ್ಷಕಿಯರು ಚಿನ್ನದ ಆಭರಣಗಳನ್ನು ಅಡವಿಟ್ಟು, ಇಲ್ಲವೇ ಮಾರಿ ಮರ್ಯಾದೆ ಉಳಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಕ್ಲಾಸುಗಳನ್ನು ವೀಕ್ಷಿಸುವ ಮಕ್ಕಳ ಹೆತ್ತವರಿಗೂ ನಮ್ಮ ಕಷ್ಟಗಳು ಆರ್ಥವಾಗುವುದಿಲ್ಲ. ವಿದ್ಯಾಗಮದಂಥ ಸರಕಾರಿ ಕಾರ್ಯಕ್ರಮದಲ್ಲಿ ಮುಳುಗಿ ಹೋಗಿರುವ ಶಿಕ್ಷಣ ಸಚಿವರಿಗೆ, ಸರಕಾರಕ್ಕೆ ನಮ್ಮ ಗೋಳು ಅರ್ಥವೇ ಆಗುವುದಿಲ್ಲ. ಯಾರಾದರೂ ಕೈಮುಗಿದು ಗುರುಗಳೇ ನಮಸ್ಕಾರ ಎಂದಾಗ ಸಿಟ್ಟು ಬರುತ್ತದೆ. ಮಾನಸಿಕ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಮನೆಯವರೊಂದಿಗೇ ಜಗಳ ಮಾಡುವ ಹಂತಕ್ಕೆ ತಲುಪಿದ್ದೇವೆ. ನೆಮ್ಮದಿಯ ನಿದ್ರೆ ಮಾಡುತ್ತಿದ್ದವರಿಗೆ ನಿದ್ದೆ ಮಾತ್ರೆಯ ಅವಶ್ಯಕತೆಯಿದೆ. ನಾನೊಬ್ಬ ಶಿಕ್ಷಕಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡರೆ ಮೈಯೆಲ್ಲಾ ಉರಿಯುತ್ತದೆ. ನನ್ನ ಕುಟುಂಬದಲ್ಲಿ ಯಾರೂ ಶಿಕ್ಷಕ ವೃತ್ತಿಗೆ ಬರುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇನೆ.

    ಸ್ವಾಭಿಮಾನ, ಗೌರವ, ಪ್ರಶಸ್ತಿಗಳು, ಪೋಷಕರ ಮೆಚ್ಚುಗೆಯ ಮಾತುಗಳು ನನ್ನಂಥ ಶಿಕ್ಷಕರ ಹೊಟ್ಟೆ ತುಂಬಿಸುವುದಿಲ್ಲ. ಸರಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ಸರಕಾರದ ಸಂಕಷ್ಟಗಳ ನಡುವೆಯೂ ಕೂಡ ವೇತನ ಪಡೆಯುತ್ತಿದ್ದಾರೆ. ಆದರೆ ನಮ್ಮಂಥ ಶಿಕ್ಷಕರ ಗೋಳು ನಮ್ಮ ಶತ್ರುಗಳಿಗೂ ಬೇಡ. ಕೊರೊನಾ ಯಾವಾಗ ಮುಗಿಯುತ್ತದೆಯೋ ಶಾಲೆಗಳು ಯಾವಾಗ ಆರಂಭವಾಗುತ್ತದೆಯೋ ಎಂದು ಚಾತಕ ಪಕ್ಷಿಯಂತೆ ಕಾದು ಸಾಕಾಗಿದೆ. ಭರವಸೆ ಹೊರಟು ಹೋಗಿದೆ. ಆದ್ದರಿಂದ ಈ ವರ್ಷದ ಶಿಕ್ಷಕರ ದಿನಾಚರಣೆ ನಮ್ಮಂಥ ಶಿಕ್ಷಕರಿಗೆ ನೋವು ಮಾತ್ರ ಕೊಡುತ್ತದೆ. ಈ ವರ್ಷಕ್ಕೆ ಸಂಭ್ರಮಾಚರಣೆ ಇಲ್ಲ.

ಓರ್ವ ನೊಂದ ಶಿಕ್ಷಕಿ        









































































































error: Content is protected !!
Scroll to Top