ಇದು ಕ್ರಿಯಾಶೀಲ ಶಿಕ್ಷಕರ “ಕ್ರಿಯೇಟಿವ್”‌ ಕಲ್ಪನೆ

ಒಬ್ಬ ವೈದ್ಯ  ಆಸ್ಪತ್ರೆ ಕಟ್ಟಬಲ್ಲನಾದರೆ, ಒಬ್ಬ ಉದ್ಯಮಿ ಮಳಿಗೆಗಳ ಮೇಲೆ ಮಳಿಗೆ ಕಟ್ಟಬಲ್ಲನಾದರೆ, ಒಬ್ಬ CA , ಒಬ್ಬ ಎಂಜಿನಿಯರ್ ತನ್ನದೆ ಸಂಸ್ಥೆ ಕಟ್ಟಬಲ್ಲನಾದರೆ ಇವರೆಲ್ಲರಿಗೂ ವಿದ್ಯೆ  ನೀಡುವ ಶಿಕ್ಷಕನೇಕೆ ತನ್ನದೆ ಸಂಸ್ಥೆ ರೂಪಿಸಬಾರದು.  ಈ ಪ್ರಶ್ನೆ ಮೂಡಿದ್ದು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ  ಉಪನ್ಯಾಸಕರಾಗಿದ್ದ ಏಳು  ಮಂದಿ ಉಪನ್ಯಾಸಕರ ಮನಸಿನಲ್ಲಿ. ಅದರ ಫಲಶ್ರುತಿಯೇ ನಾವಿಂದು ಕಾರ್ಕಳದಿಂದ ಹೆಬ್ರಿಗೆ ಹೋಗುವ ಮಾರ್ಗದಲ್ಲಿ ಕಾನಂಗಿಯಿಂದ ಒಳಗೆ ತಿರುಗಿ ಮುಕ್ಕಾಲು ಕಿಲೋಮೀಟರ್‌ ದೂರದಲ್ಲಿ    ತಲೆ ಎತ್ತುತ್ತಿರುವ ಕ್ರಿಯೇಟಿವ್‌ ಎಂಬ ಭವ್ಯವೂ ಸುಸಜ್ಜಿತವೂ ಆದ  ಕಾಲೇಜು.

ಹೆಸರೇ ಕ್ರಿಯೇಟಿವ್‌ ಎಂದು. ಹೆಸರಿಗೆ ಅನ್ವರ್ಥವಾಗುವಂತೆ ಇದರ ಹಿಂದೆ ಇರುವುದು ಒಂದಷ್ಟು ಕ್ರಿಯೇಟಿವ್‌ ಮನಸುಗಳು. ಶಿಕ್ಷಕರ ದಿನದಂದು ಈ ಯುವ ಶಿಕ್ಷಕರ ಹೊಸ ಕನಸುಗಳ ಬಗ್ಗೆ, ಕಲಿಸುವುದರಲ್ಲಿ ಅವರಿಗಿರುವ ಪ್ರೀತಿಯ ಬಗ್ಗೆ, ಸಮಾಜದ ಬಗ್ಗೆ ಅವರು ಹೊಂದಿರುವ ಚಿಂತನೆ ಬಗ್ಗೆ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನದ  ಕುರಿತು ಅವರು ಹೊಂದಿರುವ ಪರಿಕಲ್ಪನೆ ಕುರಿತು  ನಾಲ್ಕು ಮಾತು ಹೇಳಿದರೆ ಹೆಚ್ಚು ಪ್ರಸ್ತುತವಾಗಬಹುದು. ಶಿಕ್ಷಕರಾದವರೂ ಹೀಗೂ ಸಾಧನೆ ಮಾಡಿ ತೋರಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗುವವರು ಅವರು.   

ಗಣಪತಿ ಭಟ್‌, ಗಣನಾಥ್‌ ಶೆಟ್ಟಿ, ಅಮೃತ್‌ ರೈ, ಆದರ್ಶ್‌ ಎಂ.ಕೆ. ‌, ಅಶ್ವತ್ಥ್‌ ಎಸ್.‌ ಎಲ್.‌,  ವಿಮಲ್‌ ರಾಜ್‌  ಜಿ. ಮತ್ತು  ಗಣಪತಿ ಕೆ.ಎಸ್.‌ ಅವರೇ ಈ ಸಪ್ತ ಸಾಧಕರು. ಇವರೆಲ್ಲ ಖಾಸಗಿ ಕಾಲೇಜುಗಳಲ್ಲಿ ದುಡಿದವರು. ಶಿಕ್ಷಣ ಕ್ಷೇತ್ರದ ಒಳ ಹೊರಗನ್ನೆಲ್ಲ ಚೆನ್ನಾಗಿ ಬಲ್ಲವರು. ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಯಾವೆಲ್ಲ ರೀತಿಯಲ್ಲಿ ದುಡಿಸಿಕೊಳ್ಳುತ್ತವೆ ಎಂಬುದನ್ನು ಸ್ವತಃ ಅನುಭವಿಸಿದವರು. ಕಾಲೇಜುಗಳ ಆಡಳಿತ ಮಂಡಳಿಗಳು ಯಾವ ರೀತಿ ಉಪನ್ಯಾಸಕರ ಜುಟ್ಟು ಹಿಡಿದು ಆಟ ಆಡಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡವರು. ಇಂಥ ಸಂದರ್ಭದಲ್ಲೇ ಅವರಿಗೆ ಹೊಳೆದದ್ದು ತಾವೇ ಏಕೆ ಸಮಾಜಕ್ಕೆ ಒಂದು ಭಿನ್ನವಾದ ಕಾಲೇಜನ್ನು ಸ್ಥಾಪಿಸಿ ಕೊಡಬಾರದೆಂಬ ಆಲೋಚನೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ  ಏನು ಬೇಕು ಎನ್ನುವುದನ್ನು ಉಪನ್ಯಾಸಕರಿಂದ ಚೆನ್ನಾಗಿ ಬೇರ ಯಾರೂ ತಿಳಿದುಕೊಳ್ಳಬಲ್ಲರು. ಹೀಗೆ ಏಳು ಸಮರ್ಥ ಉಪನ್ಯಾಸಕರೇ ಒಂದು ತಂಡ ಕಟ್ಟಿಕೊಂಡು ರಂಗಕ್ಕಿಳಿದರು.

ಅನಂತರದ್ದೆಲ್ಲ ಈ ಆಲೋಚನೆಯನ್ನು ಕಾರ್ಯಗತಗೊಳಿಸುವ ಸಾಹಸ  ಕಥನ. ಕಾನಂಗಿಯಲ್ಲಿ ನಿವೇಶನ ಖರೀದಿಸಿದ್ದು, ಕಟ್ಟಡ ಎಬ್ಬಿಸಿದ್ದು, ಹಣಕಾಸು ಹೊಂದಿಸಿದ್ದು ಹೀಗೆ ಒಂದೊಂದೇ ಹಂತವನ್ನು ದಾಟಿ ಈಗ ಕಾಲೇಜಿಗೊಂದು ರೂಪ ಬಂದಿದೆ. 

ಈ ಎಲ್ಲ ಏಳು ಶಿಕ್ಷಕರು ದೊಡ್ಡ ಕುಳಗಳ ಹಿನ್ನೆಲೆ ಹೊಂದಿದವರು  ಅಲ್ಲ. ಎಲ್ಲರೂ ಮಧ್ಯಮ ವರ್ಗದ ಕೃಷಿಕ ಕುಟುಂಬಗಳಿಂದ ಬಂದವರು. ಕೃಷಿಕ ತಂದೆ-ತಾಯಿಗಳು ಮಕ್ಕಳ ಬಗ್ಗೆ ಏನೆಲ್ಲ ಕನಸು ಕಟ್ಟುತ್ತಾರೆ, ಅದನ್ನು ನನಸು ಮಾಡಲು ಏನೆಲ್ಲ ಪಡಿಪಾಟಲು ಪಡುತ್ತಾರೆ ಎಂಬುದನ್ನು ಸ್ವತಃ ಅನುಭವಿಸಿದವರು. ಹೀಗಾಗಿ ಅವರ ಕಾಲೇಜಿನಲ್ಲಿ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆ, ಶಿಕ್ಷಕರ ಮಕ್ಕಳಿಗೆ ಮತ್ತು ಯೋಧರ ಮಕ್ಕಳಿಗೆ ತುಸು ಹೆಚ್ಚು ಪ್ರಾಶಸ್ತ್ಯ. ಹಾಗೆಂದು ಉಳಿದವರಿಗೆ ಕಲಿಸುವುದರಲ್ಲಾಗಲಿ, ಹಾಸ್ಟಲ್‌ ನಲ್ಲಾಗಲಿ ಯಾವುದೇ ಬೇಧಭಾವ ಮಾಡುವುದಿಲ್ಲ.   ಮುಖ್ಯವಾಗಿ ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬ ಧ್ಯೇಯ ಕ್ರಿಯೇಟಿವ್‌ ತಂಡದವರದ್ದು.

ಉಮೇಶ್‌ ಕೋಟ್ಯಾನ್‌



































































































error: Content is protected !!
Scroll to Top