ಇನ್ನು ಮೋದಿ ಇಡ್ಲಿ v/s ಅಮ್ಮಇಡ್ಲಿ ಫೈಟ್‌

ಚೆನ್ನೈ, ಸೆ.2 : ತಮಿಳುನಾಡಿನಲ್ಲಿ ಮೋದಿಯ ಇಡ್ಲಿ ಮತ್ತು ಅಮ್ಮನ ಇಡ್ಲಿ ನಡುವಿನ ತುರುಸಿನ ಸ್ಪರ್ಧೆಗೆ ವೇದಿಕೆ ಸಜ್ಜಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಪ್ರಾರಂಭಿಸಿದ ಅಮ್ಮ ಕ್ಯಾಂಟೀನ್‌ ಈಗಾಗಲೇ ಭಾರಿ ಜನಪ್ರಿಯವಾಗಿದೆ. ಇಲ್ಲಿ ಅಗ್ಗದ ಬೆಲೆಗೆ ಸಿಗುವ ಇಡ್ಲಿ ಸಾಂಬಾರ್‌ಗೆ ಜನರು ಮುಗಿಬೀಳುತ್ತಿದ್ದಾರೆ. ಮತದಾರರನ್ನು ಸೆಳೆಯುವ ಉದ್ದೇಶದಿಂದ ಜಯಲಲಿತಾ ಈ ಯೋಜನೆಯನ್ನು ಶುರು ಮಾಡಿದರೂ ಬಳಿಕ ಇತರ ರಾಜ್ಯಗಳಿಗೂ ಅದು ಮಾದರಿಯಾದದ್ದೆಲ್ಲ ಇತಿಹಾಸ. ಈಗ ತಮಿಳುನಾಡಿನಲ್ಲೇ ಅಮ್ಮನ ಇಡ್ಲಿಗೆ ಬಲವಾದ ಸ್ಪರ್ಧೆ ಎದುರಾಗುತ್ತಿದೆ. ಅದು ಬೇರೆ ಯಾರಿಂದಲೂ ಅಲ್ಲ ಪ್ರಧಾನಿ ನರೇಂದ್ರ ಮೋದಿಯಿಂದ.

 ಹೌದು ಮೋದಿ ಹೆಸರಿನಲ್ಲಿ  ಸೇಲಂನಲ್ಲಿ ಅಮ್ಮ ಕ್ಯಾಂಟೀನ್‌ ಮಾದರಿಯಲ್ಲೇ ಮೋದಿ ಕ್ಯಾಂಟೀನ್‌ ಶುರುವಾಗಲಿದೆ. 10 ರೂ.ಗೆ ನಾಲ್ಕು ಇಡ್ಲಿ ಮೋದಿ ಕ್ಯಾಂಟೀನ್‌ ವಿಶೇಷತೆ.

ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಮಹೇಶ್‌ ಅವರೇ ಮೋದಿ ಕ್ಯಾಂಟೀನ್‌ ರೂವಾರಿ. ಸೇಲಂನ ಅಲ್ಲಲ್ಲಿ ಈಗಾಗಲೇ ಮೋದಿ ಕ್ಯಾಂಟೀನ್‌ ಬ್ಯಾನರ್‌ಗಳು ರಾರಾಜಿಸುತ್ತಿವೆ.

10 ರೂ.ಗೆ 4 ಇಡ್ಲಿ

ಮೋದಿ ಕ್ಯಾಂಟೀನ್‌ ನಲ್ಲಿ  10 ರೂ.ಗೆ ನಾಲ್ಕು ಇಡ್ಲಿ ಸಿಗಲಿದೆ. ಸಾಕಷ್ಟು ದೊಡ್ಡದಾಗಿರುವ ನಾಲ್ಕು  ಇಡ್ಲಿ ಮತ್ತು ಸಾಂಬಾರ್‌ ಕೊಡಲಿದ್ದೇವೆ. ಒಬ್ಬನ ಹೊಟ್ಟೆ ತುಂಬುವಷ್ಟು ಇಡ್ಲಿ ನಮ್ಮ ಕ್ಯಾಂಟೀನ್‌ ನಲ್ಲಿ ಬರೀ 10 ರೂ.ಗೆ ಸಿಗಲಿದೆ ಎನ್ನುತ್ತಾರೆ ಮಹೇಶ್.‌

ಮೋದಿ ನನ್ನ ಹೀರೊ. ರಾಜಕೀಯ ನಾಯಕರ ಹೆಸರಲ್ಲಿ ಅನೇಕ ಯೋಜನೆ ಇರುವಾಗ ಮೋದಿಯ ಹೆಸರಲ್ಲಿ ಇಡ್ಲಿ ಮಾರುವುದರಲ್ಲಿ ತಪ್ಪೇನಿದೆ? ನನ್ನ ಇಡ್ಲಿಗೆ ಮೋದಿಯ ಇಡ್ಲಿ ಎಂದೇ ಹೆಸರಿಡುತ್ತೇನೆ ಎನ್ನುವುದು ಮಹೇಶ್‌ ತನ್ನ ಯೋಜನೆಗೆ ನೀಡುವ ಸಮರ್ಥನೆ.

20 ಲಕ್ಷ ಬಂಡವಾಳ

ಐದು ನಿಮಿಷಕ್ಕೆ 1,000 ಇಡ್ಲಿ ತಯಾರಿಸುವ ಸ್ಟೀಮರ್‌, ಶುದ್ಧ ನೀರಿನ ಪ್ಲಾಂಟ್, ಕಟ್ಟಡ ಎಂದು ಮಹೇಶ್‌ ಸುಮಾರು 20 ಲ.ರೂ. ಬಂಡವಾಳ ಹಾಕಿದ್ದಾರೆ. ಇದು ಲಾಭದ ಯೋಜನೆಯಲ್ಲ. ಹೀಗಾಗಿ ಬಂಡವಾಳವನ್ನು ಹೂಡಿಕೆ ಎಂದು ಪರಿಗಣಿಸುವುದಿಲ್ಲ ಎನ್ನುತ್ತಾರೆ ಮಹೇಶ್.‌  

ಅಂದಹಾಗೇ ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.ಈ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಚುನಾವಣೆಗಾಗುವಾಗ ಇಡ್ಲಿ ವಾರ್‌ ಇನ್ನಷ್ಟು ತೀವ್ರವಾಗಲಿದೆ.















































































































































error: Content is protected !!
Scroll to Top