ಸು”ಸಂಸ್ಕೃತ” ಶಿಕ್ಷಕ ಕೆ.ಸುಬ್ರಹ್ಮಣ್ಯ ಆಚಾರ್ಯ

ಕಾರ್ಕಳ: ಶ್ರೀ ನೇಮಿಸಾಗರ ವರ್ಣೀಜಿ ಪ್ರೌಢ ಶಾಲೆಯಲ್ಲಿ ಕಳೆದ 32 ವರ್ಷಗಳಿಂದ ಇಂಗ್ಲೀಶ್‌ ಮತ್ತು ಸಂಸ್ಕೃತ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಯ ಶಿಕ್ಷಕರಾಗಿ ಆ.31 ರಂದು ನಿವೃತ್ತರಾದ ಕೆ. ಸುಬ್ರಹ್ಮಣ್ಯ ಆಚಾರ್ಯ ಅವರನ್ನು newskarkala.com ಸಂದರ್ಶನ ಮಾಡಿತು. ಅವರೊಂದಿಗಿನ ಮಾತುಕತೆಯ ಸಾರಾಂಶ ಈ ರೀತಿ ಇದೆ.

ನನ್ನ ಬಾಲ್ಯದ ಪರಿಸರ

ನಾನು ಬಂಟ್ವಾಳ  ತಾಲೂಕಿನ ಕಾವಳಮೂಡೂರು ಕುಡಂಬೆಟ್ಟು ಮನೆಯಲ್ಲಿ ಜನಿಸಿದವನು. ನನ್ನ ತಂದೆ ಕೆ. ಅನಂತ ಆಚಾರ್ಯ ತಾಯಿ ಯಶೋದಾ. ನಾನು ಕೂಡುಕುಟುಂಬ ಪದ್ಧತಿಯಿಂದ ಬೆಳೆದು ಬಂದವನು. ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ಓದಿದವನು. ಮುಂದೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಓದುತ್ತಿದ್ದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆಯವರ ಪ್ರಭಾವಕ್ಕೆ ಒಳಗಾದೆನು. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಿದ್ದೆನು. ಮುಂದೆ ಮೈಸೂರಲ್ಲಿ ಬಿಎಡ್‌ ಪದವಿ ಮುಗಿಸಿ ಶಿಕ್ಷಕನಾಗುವ ಕನಸು ಕಂಡೆನು.

ಕಾರ್ಕಳಕ್ಕೆ ಆಗಮನ

ಕಾರ್ಕಳದ ಪ್ರಸಿದ್ಧ ಎಸ್ಎನ್ವಿ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕನಾಗಿ 1988 ಆ.6ರಂದು ನೇಮಕವಾಯಿತು.  ಇಲ್ಲಿಗೆ ಬಂದಾಗ ಹಿರಿಯರಾದ ಆದಿರಾಜ ಹೆಗ್ಡೆ, ಶಾಲೆಯ ಸಂಚಾಲಕರು, ಶಾಲೆಯ ಆಡಳಿತ ಮಂಡಳಿ ನನಗೆ ಪೂರ್ಣ ಪ್ರಮಾಣದ ಬೆಂಬಲ ನೀಡಿತು. ಮೂರು ವರ್ಷಗಳ ಕಾಲ ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮ ನನಗೆ ಆಶ್ರಯ ಕೊಟ್ಟಿತು. 

ನನಗೆ ಸಿಕ್ಕಿದ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರಗಳು ಆ ಆಶ್ರಮದ ಕೊಡುಗೆಗಳಾಗಿವೆ.

ಅಧ್ಯಾಪಕನಾಗಿ ನಾನು

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಶ್‌ ಮತ್ತು ಸಂಸ್ಕೃತ ಬೋಧನೆ ಮಾಡುತ್ತಾ ಪ್ರತಿ ವರ್ಷ ಶೇ. 100 ಫಲಿತಾಂಶ ಪಡೆಯಲು ನನಗೆ ಸಾಧ್ಯವಾಯಿತು. ಪ್ರತಿ ವರ್ಷ ಕೆಲವು ವಿದ್ಯಾರ್ಥಿಗಳಾದರೂ ನನ್ನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯುತ್ತಿದ್ದರು. ಈ ವರ್ಷ ಕೊರೊನಾ ಸಮಸ್ಯೆಗಳ ನಡುವೆ ಕೂಡ ಮೂವರು ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಶೇ. 100 ಅಂಕ ಪಡೆದಿದ್ದಾರೆ. ಆದರೆ ಸತತ ಪ್ರಯತ್ನದ ನಡುವೆ ಕೂಡ ಈ ವರ್ಷ ಮೂವರು ವಿದ್ಯಾರ್ಥಿಗಳು ಅನುತ್ತೀರ್ಣರಾದದ್ದು ನನಗೆ ತುಂಬ ನೋವು ಕೊಟ್ಟಿದೆ.

ನನ್ನ ವಿದ್ಯಾರ್ಥಿಗಳ ಪ್ರೀತಿ

32 ವರ್ಷಗಳ ಅವಧಿಯಲ್ಲಿ ನನ್ನ ವಿದ್ಯಾರ್ಥಿಗಳು ನನ್ನನ್ನು ತುಂಬ ಪ್ರೀತಿ ಮಾಡಿದ್ದಾರೆ. ನಾನು ಕೂಡ ಶಿಕ್ಷಕ ಎಂಬ ಅಹಂನ್ನು ಬಿಟ್ಟು ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಕಾರಣ ಉತ್ತಮ ಸಂವಹನ ಸಾಧ್ಯವಾಯಿತು. ಪಾಠದ ಮಧ್ಯೆ ನೀತಿ ಕತೆಗಳು , ಸುಭಾಷಿತಗಳು, ಸೂಕ್ತಿಗಳು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಕೊಡುತ್ತಿದ್ದವು. ವಿದ್ಯಾರ್ಥಿಗಳನ್ನು ದಂಡಿಸಿದ ಪ್ರಕರಣಗಳು ತುಂಬ ಕಡಿಮೆ. ವಿದ್ಯಾರ್ಥಿಗಳ ಮಧ್ಯೆ ಬೇಧ ಭಾವ ಅಥವಾ ಜಾಣ ದಡ್ಡ ಎಂಬ ವರ್ಗೀಕರಣ ನಾನು ಯಾವತ್ತೂ ಮಾಡಿಲ್ಲ. ವಿದ್ಯಾರ್ಥಿಗಳ ಹೆತ್ತವರು ಕೂಡ ನನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ನಮ್ಮ ವಿದ್ಯಾಸಂಸ್ಥೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು ನಾನು ಉಚಿತವಾಗಿ ನೀಡಿದ್ದೇನೆ. ಇದು ನನ್ನ ಅಳಿಲ ಸೇವೆ.  

ನನ್ನ ಶಾಲೆ – ನನ್ನ ಹೆಮ್ಮೆ

ನನಗೆ ಮೂರು ದಶಕಗಳ ಕಾಲ ಅನ್ನ ನೀಡಿದ ಎಸ್ಎನ್ ವಿ ವಿದ್ಯಾಸಂಸ್ಥೆಯನ್ನು ನಾನೆಂದಿಗೂ ಮರೆಯಲಾರೆ. ನನ್ನ ಮುಖ್ಯೋಪಾಧ್ಯಾಯರಾಗಿದ್ದ ಧರ್ಮರಾಜ ಅಜ್ರಿ , ಜಗತ್ಪಾಲ ಬಂಗ ನನಗೆ ನೀಡಿದ ಮಾರ್ಗದರ್ಶನವನ್ನು ಮರೆಯಲಾರೆ. ನಮ್ಮ ಶಾಲೆಯ ಸಂಚಾಲಕರಾದ ಎಂ.ಕೆ.ವಿಜಯಕುಮಾರ್‌ , ಶಾಲೆಯ ಅಡಳಿತ ಮಂಡಳಿ  ನನಗೆ ನೀಡಿದ ಅಭಿಮಾನಪೂರ್ವಕವಾದ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಈಗಿನ ಮುಖ್ಯೋಪಾಧ್ಯಾಯರಾದ ಉಷಾ ಪಡಿವಾಲ್  ಮತ್ತು ನನ್ನ ಎಲ್ಲ ಸಹೋದ್ಯೋಗಿಗಳು ಪ್ರಾಥಮಿಕ ಶಾಲೆಯ ಅಧ್ಯಾಪಕರು ಇವರಿಗೆಲ್ಲ ನಾನು ಚಿರಋಣಿಯಾಗಿದ್ದೇನೆ. ನನಗೆ ತಾಲೂಕು ಮತ್ತು ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿದ ಶಿಕ್ಷಣ ಇಲಾಖೆ ಮತ್ತು ಸಂಸ್ಥೆಗಳಿಗೆ ನನ್ನ ಧನ್ಯವಾದಗಳು.

ನಾನು ಮತ್ತು ಜ್ಯೋತಿರ್‌ ವಿಜ್ಞಾನ

ನಾನು ಕಾರ್ಕಳಕ್ಕೆ ಬಂದ ನಂತರ ಹಲವು ದೇವಸ್ಥಾನ, ದೈವಸ್ಥಾನ ಮತ್ತು ನಾಗಬನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ಅದಕ್ಕೆ ಪೂರಕವಾಗಿ ನನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಜ್ಯೋತಿಶ್ಶಾಸ್ತ್ರ ಮತ್ತು ವಾಸ್ತು ವಿಜ್ಞಾನವನ್ನು ನಾನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಬಂದೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ನಾನು ಈ ಜ್ಞಾನವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ಮುದ್ರಿಸಲ್ಪಡುವ ಭವಿಷ್ಯದ ಪುಸ್ತಕ ಜನಮನ್ನಣೆ ಗಳಿಸಿತು. ಹಲವು ಪತ್ರಿಕೆಗಳಲ್ಲಿ ವಾರ ಭವಿಷ್ಯ  ಮತ್ತು newskarkalaದಲ್ಲಿ ದಿನ ಭವಿಷ್ಯ ಬರೆಯುತ್ತಾ ಬಂದಿದ್ದೇನೆ. ವಾಸ್ತು ಸಲಹೆ , ಜಾತಕ ವಿಮರ್ಶೆ ಮತ್ತು ಮೇಳಾಮೇಳಿ ಇವುಗಳು ನನ್ನ ಆಸಕ್ತಿಯ ಕ್ಷೇತ್ರಗಳು.

ಸಾಧನೆಗೆ ಪ್ರೇರಣೆಯಾದ ಕುಟುಂಬ

ನನ್ನ ಧರ್ಮಪತ್ನಿ  ಜ್ಯೋತಿ 1993ರಿಂದ ನನ್ನ ಬಾಳ ಸಂಗಾತಿಯಾಗಿ ನನ್ನ ಸಾಧನೆಗೆ ಪ್ರೇರಣೆ ನೀಡಿದ್ದಾರೆ. ನನ್ನ ಏಕಮಾತ್ರ ಪುತ್ರ ಕೆ. ನಿತಿನ್‌ ಎಂಟೆಕ್‌ ಮುಗಿಸಿದ್ದು ನನ್ನ ಸಂತೋಷಕ್ಕೆ ಕಾರಣವಾಗಿದೆ. ನನ್ನ ಎಲ್ಲ ಸಾಧನೆಗೂ ನಾನು ನಂಬಿಕೊಂಡು ಬಂದಿರುವ  ಧರ್ಮಸ್ಥಳ ಮಂಜುನಾಥ ಸ್ವಾಮಿ ಮತ್ತು ದೈವ ದೇವರುಗಳು ಕಾರಣ. ಯಾವುದೇ ಸ್ವಾರ್ಥವಿಲ್ಲದೆ ನಾನು ಕರ್ತವ್ಯವನ್ನು ನೆರವೇರಿಸಿದ ಧನ್ಯತೆ ನನಗಿದೆ.

ಕೆ. ಸುಬ್ರಹ್ಮಣ್ಯ ಆಚಾರ್ಯ ಅವರಿಗೆ team newskarkala ಸಂತೃಪ್ತ ನಿವೃತ್ತಿ ಜೀವನವನ್ನು  ಕೋರುತ್ತದೆ.









































































































error: Content is protected !!
Scroll to Top