ಯೋಗ ಭರತಖಂಡದ ಪರಿಚಯ…ಅದು ಈ ನೆಲದ ಗುರುತು . ಯೋಗ ಇಲ್ಲಿನ ಸಂಸ್ಕ್ರತಿ ಯೊಂದಿಗೆ ಹಾಸುಹೊಕ್ಕಾಗಿದೆ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ.ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗ ವಿದ್ಯೆ’ಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು.
ನಮ್ಮ ನೆಲದ ನಮ್ಮ ಆಚರಣೆ-ಗಿಡಮೂಲಿಕೆಗಳು ನಮಗೆ ಪಥ್ಯವಾಗದೆ ದೂರವಾಗುತ್ತಿದ್ದು ವಿದೇಶಿಗರು ಅಪ್ಪಿಕೊಳ್ಳುತ್ತಿರುವಂತೆ ಯೋಗ ಕೂಡ ಇಂದು ನಮಗಿಂತಲೂ ವಿದೇಶಿಗರಿಗೆ ಪ್ರಿಯವಾಗತೊಡಗಿದೆ.ಅದರ ಲಾಭಗಳೇನು ಎಂಬುದು ಅವರಿಗೆ ಅರ್ಥವಾಗತೊಡಗಿದೆ. ಆದರೆ ನಾವು ಇನ್ನೂ ಯೋಗವನ್ನು ಗಂಭೀರವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ.ಈ ದೇಶದಲ್ಲಿ ಯೋಗ ವಿದ್ಯೆಯಲ್ಲಿ ಸಾಧನೆ ಮಾಡಿದ ಮಾಡುತ್ತಿರುವ ಸಾಧಕರು ಹಲವರಿದ್ದಾರೆ.ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಬಂದ ಬಳಿಕ ಯೋಗಕ್ಕೂ ಒಂದು ದಿನ ಬಂತು.ವಿಶ್ವವೇ ಅಪ್ಪಿಕೊಳ್ಳುವಂತಹ ಯೋಗ ಅದಕ್ಕೂ ಬಂತು.ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸುವಲ್ಲಿ ನಮ್ಮ ಪ್ರಧಾನಿ ಯಶಸ್ಸಾದರು.ವಿಶ್ವ ಕೂಡಾ ಯೋಗದ ಲಾಭವನ್ನು ಅರಿತು ಒಪ್ಪಿಕೊಂಡಿತು.ಆದರೆ ವಿಪರ್ಯಾಸ ನೋಡಿ,ನಮ್ಮಲ್ಲಿ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸುವ ಬಗ್ಗೆ ಮಾತನಾಡಿದಾಗ ಅದಕ್ಕೆ ಧರ್ಮದ ರಂಗು ನೀಡಿ ರಾಜಕೀಯ ಆರಂಭವಾಯಿತು. ಸೂರ್ಯ ನಮಸ್ಕಾರದ ಲಾಭವನ್ನು ತಿಳಿದುಕೊಳ್ಳುವ ಬದಲು ಸೂರ್ಯ ಎಂದರೆ ಅದು ಒಂದು ಧರ್ಮದ ದೇವರು,ಅದಕ್ಕೆ ನಮಸ್ಕಾರ ಮಾಡಬಾರದೆಂಬ ಧ್ವನಿ ಏಳತೊಡಗಿತು.ಅದೇನೇ ಇರಲಿ ಮೋದಿ ಬಂದ ಮೇಲೆ ಯೋಗ ವಿಶ್ವವನ್ನು ಒಂದುಗೂಡಿಸಿದರೆ ಬಾಬಾರಾಮ್ ದೇವ್ ರನ್ನು ಸೆಲೆಬ್ರಿಟಿಯಾಗಿಸಿತು…ಜೊತೆಗೆ ಅವರ ಉತ್ಪಾದನೆಗಳ ಮಾರುಕಟ್ಟೆಯೂ ವೃದ್ಧಿಸಿತು,ನಟಿ ಶಿಲ್ಪಾ ಶೆಟ್ಟಿ ಯೋಗವನ್ನೇ ಸೆಲೆಬ್ರಿಟಿ ಮಾಡಿಬಿಟ್ಟರು.ಆಕೆಯ ಮೈಮಾಟ ಕಂಡು ಹಲವರಾದರೂ ಯೋಗಕ್ಕೆ ಶರಣಾಗಿರುವುದು ಉತ್ಪ್ರೇಕ್ಷೆಯಲ್ಲ.ಈ ಯೋಗದಿಂದಾಗಿಯೇ ಸಿ.ಡಿ.ಗಳನ್ನು ಮಾಡಿ ಒಂದಷ್ಟು ಸಂಪಾದಿಸುವ ಯೋಗವೂ ಆಕೆಗೆ ಒದಗಿದ್ದು ಸುಳ್ಳಲ್ಲ.
ಇಂದು ವಿಶ್ವ ಯೋಗ ದಿನ.ತನ್ನ ಯೋಗಕ್ಷೇಮಕ್ಕಾಗಿ ಪ್ರಾಥಮಿಕ ಯೋಗ ವ್ಯಾಯಾಮಗಳನ್ನು ಕಲಿಯಲೆಂದು ಯೋಗ ತರಗತಿಗೆ ಸೇರಿ ಇಂದು ಯೋಗ ಪರೀಕ್ಷೆಯಲ್ಲಿ ವಿ.ವಿ.ಮಟ್ಟದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಯೋಗ ಸಾಧನೆಗೈದ ಕರಾವಳಿ ಮೂಲದ ಪುಣೆಯ ಕನ್ನಡತಿಯೋರ್ವರ ಪರಿಚಯವನ್ನು ಓದುಗರಿಗೆ ಮಾಡುವುದು ಸಕಾಲಿಕವಾದೀತು.
ಆಕೆಯ ಹೆಸರು ಹೀರಾ ಶೆಟ್ಟಿ.ಮುಂಡ್ಕೂರು ಇನ್ನ ಬಗ್ಗರಗುತ್ತು ರತ್ನಾಕರ ಹೆಗ್ಡೆ ಮತ್ತು ಉಷಾ ಹೆಗ್ಡೆ ದಂಪತಿಯ ಮಗಳು.ನಾನು ಆಕೆಯನ್ನು ಮೊದಲು ಕಂಡಿದ್ದು ಐಕಳ ಪಾಂಪೈ ಕಾಲೇಜಿನಲ್ಲಿ.ಮುಂಡ್ಕೂರು ವಿದ್ಯಾವರ್ಧಕ ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಮುಗಿಸಿ ಆಕೆ ಪಾಂಪೈ ಕಾಲೇಜಿಗೆ ಕಾಲಿಟ್ಟ ಮೊದಲ ದಿನ ಆ ಬಳುಕುವ ಬಳ್ಳಿಯಂತಹ ದೇಹ ಕಾಲೇಜು ಮುಗಿದು ಕೆಲ ವರ್ಷವಾದ ಬಳಿಕ ಸಿಕ್ಕಾಗಲೂ ಆ ದೇಹ ಅದೇ ಬಳುಕುವ ಬಳ್ಳಿಯಂತೆಯೇ ಇತ್ತು.ಆ ನಗು ಒಂದಿನಿತೂ ಕಳೆ ಕಳಕೊಂಡಿರಲಿಲ್ಲ.ಈ ಅವಧಿಯಲ್ಲಿ ಕೆಲವಾರು ಕೇಕ್ ಕತ್ತರಿಸಿ ಕ್ಯಾಂಡಲ್ ಆರಿಸಿದ್ದೆವು.ಕಾಲೇಜು ಮುಗಿದಾಕ್ಷಣವೇ ಮದುವೆಯೂ ಆಗಿ ತಾಯಿಯ ಎತ್ತರಕ್ಕೆ ಬೆಳೆದಿದ್ದ ಮಗನೂ ಇದ್ದ. ಸಾಮಾನ್ಯವಾಗಿ ಮದುವೆಯಾಗಿ ಒಂದು ಮಗುವಾದ ಮೇಲೆ ಹೆಣ್ಮಕ್ಕಳ ದೇಹ ತೂಕ ಹೆಚ್ಚಾಗುತ್ತದೆ. ಆದರೆ ಐದು ವರ್ಷಗಳ ಹಿಂದೆ ಮುಂಬಯಿಯಲ್ಲಿ ಸಮಾರಂಭವೊಂದರಲ್ಲಿ ಸಿಕ್ಕ ಆಕೆಯ ದೇಹಪ್ರಕೃತಿಯನ್ನು ಕಂಡು ದಂಗಾಗಿ ರಹಸ್ಯವೇನೆಂದು ಕೇಳಿದಾಗ ಆಕೆ ಅದು ‘ಯೋಗ’ಮಾರಾಯ ಅಂದಿದ್ದರು.
2007ರಲ್ಲಿ ದೈಹಿಕ ಫಿಟ್ನೆಸ್ ಗಾಗಿ ಕೆಲ ಸಾಮಾನ್ಯ ಮತ್ತು ಸುಲಭ ಆಸನಗಳನ್ನು ಮಾಡಲಾರ೦ಭಿಸಿದ್ದರಂತೆ.2013ರಲ್ಲಿ ಒಂದು ದಿನ ಮನೆ ಆವರಣದಲ್ಲಿ ಜಾರಿಬಿದ್ದ ಪರಿಣಾಮವಾಗಿ ಬೆನ್ನು ಮೂಳೆಗಳ ನಡುವೆ ಅಂತರ(gap)ಬಿತ್ತು. ಅದಕ್ಕಾಗಿ ಒಂದು ತಿಂಗಳ ಕಾಲ ಯೋಗಾಭ್ಯಾಸ ಮಾಡಿದ ಪರಿಣಾಮವಾಗಿ ಅದು ಸರಿ ಹೋಯ್ತು.ಯೋಗದಿಂದ ಆರೋಗ್ಯಕ್ಕೆ ಲಾಭ ಇದೆ ಎಂದು ಆವಾಗ ಮನದಟ್ಟಾಯಿತು.ಪುಣೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ಼್ ನ್ಯಾಚುರೋಪತಿ ಸಂಸ್ಥೆಯಲ್ಲಿ ಯೋಗ ಗುರು ಸೌರವ್ ಶರ್ಮಾರ ಮಾರ್ಗದರ್ಶನದಲ್ಲಿ ಯೋಗವನ್ನು ಕಲಿಯಲಾರಂಭಿಸಿದ ಈಕೆ ನಿರಂತರವಾಗಿ ಯೋಗ ತರಗತಿಗೆ ಹೋಗಲಾರಂಭಿಸಿದರು.
ಯೋಗ ಸಾಧನೆ ಮಾಡಬೇಕೆಂಬ ಬಯಕೆ ಚಿಗುರೊಡೆಯತೊಡಗಿತು .2018ರಲ್ಲಿ ಪುಣೆಯ ಸಾವಿತ್ರಿ ಭಾಯಿ ಫುಲೆ ಯುನಿವರ್ಸಿಟಿಯಲ್ಲಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಪ್ರವೇಶ ಪಡೆದು ಯೋಗ ಶಿಕ್ಷಕಿ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.
ಯೋಗದ ಜತೆಗೆ ಮೆಡಿಟೇಷನ್ ನಲ್ಲೂ ತರಬೇತಿ ಪಡೆದಿದ್ದು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಕಾಲ ಹರಣಕ್ಕಾಗಿ ಯೋಗದ ಕೆಲ ಅಸನ ಕಲಿಯಲಾರಂಭಿಸಿದ ಈಕೆ ಈಗ ಯೋಗ ಶಿಕ್ಷಕಿ ಪದವಿ ಪಡೆದು ವೃತ್ತಿಪರ ಯೋಗ ತರಬೇತುದಾರರಾಗಿ ಒಂದು ಮೈಲಿಗಲ್ಲನ್ನು ಮುಟ್ಟಿದ್ದಾರೆ.
ಪುಣೆ,ಲೋನಾವಳ ಮತ್ತಿತರ ಕಡೆ ಹಾಗೂ ತಾನು ಕಲಿಯುತ್ತಿರುವ ಯೋಗ ಶಾಲೆಯಲ್ಲಿ ನಿರಂತರವಾಗಿ ಯೋಗ ಶಿಬಿರಗಳನ್ನು ಆಯೋಜಿಸಿ ತರಬೇತಿ ನೀಡುತ್ತಿದ್ದಾರೆ.ಜತೆಗೆ ಹಲವು ಕಡೆ ಖಾಸಗಿ ಯೋಗ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ಹೌಸಿಂಗ್ ಸೊಸೈಟಿಯ ಹಿರಿಯರಿಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಿರುವ ಈಕೆ ಈಗ ತನ್ನ ಹೌಸಿಂಗ್ ಸೊಸೈಟಿಯ ಸದಸ್ಯರೆಲ್ಲರಿಗೂ ಸ್ಪೂರ್ತಿಯಾಗಿದ್ದು, ಹೆಚ್ವಿನವರು ಯೋಗದ ಕಡೆಗೆ ಮುಖ ಮಾಡತೊಡಗಿದ್ದಾರಂತೆ.
ಯೋಗಾಸನ ದೇಹದ ಸೌಂದರ್ಯ ಮತ್ತು ದೇಹ ಪ್ರಕೃತಿಯ(ಆಕಾರ)ನ್ನು ಉತ್ತಮವಾಗಿಸುತ್ತದೆ ಎನ್ನುವ ಈಕೆ ವಿಶೇಷವಾಗಿ ಹೆಣ್ಮಕ್ಕಳು ಮದುವೆಯಾಯಿತು ,ಇನ್ನು ಗಂಡ ಮಕ್ಕಳು ಅಡುಗೆ ಮನೆ ಇವಿಷ್ಟೇ ತಮ್ಮ ಬದುಕು ಎಂದು ಕೂರದೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನ ಹರಿಸಬೇಕು.ಮನೆಯ ಮಹಿಳೆ ಆರೋಗ್ಯದಿಂದಿದ್ದರೆ ಇಡೀ ಪರಿವಾರವೇ ಆರೋಗ್ಯದಿಂದ ಇದ್ದಂತೆ ಎಂದು ಹೇಳುವ ಹೀರಾ ಅವರು ಮಹಿಳೆಯರು ಮತ್ತು ಇತರ ಮನೆಮಂದಿ ಕೆಲವೊಂದು ಸುಲಭ ಆಸನಗಳಾದ ತಾಡಾಸನ,ವೃಕ್ಷಾಸನ,ಪಶ್ಚಿಮೋತ್ತಾಸನ,ಪ್ರಾಣಾಯಾಮ, ಕಪಾಲ್ ಬಾತಿ ಯಂತಹ ಆಸನಗಳ ಜತೆಗೆ ಬೆಳಿಗ್ಗೆ ಧ್ಯಾನ(ಮೆಡಿಟೇಷನ್)ಮಾಡಿದರೂ ಸಾಕು.ಇದರ ಜೊತೆಗೆ ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ ಅರ್ಧ ಗಂಟೆ ವಾಕಿಂಗ್,ಬೆಳಿಗ್ಗೆ ಎದ್ದ ತಕ್ಷಣ ಒಂದೆರಡು ಲೋಟ ಉಗುರು ಬೆಚ್ಚಗಿನ ನೀರು ಕುಡಿದು ಅರ್ಧ ಮುಕ್ಕಾಲು ತಾಸಿನ ಬಳಿಕ ಉಪಾಹಾರ ಸೇವಿಸಬೇಕು ಎನ್ನುತ್ತಾರೆ.
ಯೋಗ ಮಾಡುತ್ತಿದ್ದರೆ ಆರೋಗ್ಯವನ್ನು ಕಾಯ್ದುಕೊಳ್ಳುವ ಜತೆಗೆ ಮಾನಸಿಕ ಒತ್ತಡವೂ ಇಲ್ಲವಾಗುತ್ತದೆ.ಬಿಪಿ,ಶುಗರ್ ಗೆ ಮಾನಸಿಕ ಒತ್ತಡ ಮೂಲ ಕಾರಣ. ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ತಜ್ಞರ ಮಾರ್ಗದರ್ಶನದಂತೆ ಯೋಗಾಸನಗಳನ್ನು ಮಾಡಬೇಕೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ.
ವಿವಾಹದ ಬಳಿಕ ಪತಿ ರಾಜ್ ಶೇಖರ್ ಹಾಗೂ ಪುತ್ರ ಪಾರ್ಥ್ ಜತೆ ಪುಣೆಯ ಕಡ್ಕಿ ಬಝಾರ್ ನ ಮೆಹ್ತಾ ಟವರ್ ನಲ್ಲಿ ನೆಲೆಸಿರುವ ಇವರು ಪುಣೆ ಬಂಟರ ಸಂಘದ ಸದಸ್ಯೆ. ಈಗಲೂ ನಿತ್ಯ ಬೆಳಿಗ್ಗೆ ಮೆಡಿಟೇಶನ್ ಹಾಗೂ ಸಂಜೆ ಯೋಗಾಭ್ಯಾಸ ವನ್ನು ತಪ್ಪಿಸುತ್ತಿಲ್ಲ.
ಏಳಿಂಜೆ ನಾಗೇಶ್