
ಬರೇಲಿ, ಆ.20: ಪರಿಸರ ನಾಶ , ಭ್ರಷ್ಟಾಚಾರದಣಥ ಪಿಡುಗುಗಳಿಂದ ಮನನೊಂದಿದ್ದ 16 ವರ್ಷದ ಬಾಲಕಿಯೊಬ್ಬಳು ಪ್ರಧಾನ ಮಂತ್ರಿಗೆ 18 ಪುಟಗಳ ಡೆತ್ ನೋಟ್ ಬರೆದು ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸಂಭವಿಸಿದೆ.
ಉತ್ತರ ಪ್ರದೇಶದ ಸಂಭಾಲ್‌ನ ಬಾಬ್ರಲಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 16ರ ಬಾಲಕಿ, ಆ.14 ರಂದು ರಾತ್ರಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರಣ್ಯ ನಾಶ, ಪರಿಸರ ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಪಿಡುಗುಗಳಿಂದ ಆತಂಕಗೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ 18 ಪುಟಗಳ ಪತ್ರ ಬರೆದು ಬಳಿಕ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಇದೇ ಪತ್ರದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಬಲವಾದ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ.
ಹೆಚ್ಚುತ್ತಿರುವ ಸಾಮಾಜಿಕ ದುಷ್ಕೃತ್ಯಗಳಿಂದಾಗಿ ನಾನು ತೊಂದರೆಗೀಡಾಗಿದ್ದೇನೆ. ಹಾಗಾಗಿ ಇಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆ ಪಿಎಂ ಮೋದಿ ಅವರೊಂದಿಗೆ ಚರ್ಚಿಸಲು ಬಯಸುತ್ತೇನೆ ಎಂದು ಬರಿದಿದ್ದಾಳೆ.