ಧನಾತ್ಮಕ ಆಲೋಚನೆಗಳಿಂದ ಮಾನಸಿಕ ಅರೋಗ್ಯದ ನಿಯಂತ್ರಣ:ಡಾ. ಪದ್ಮಿನಿ ಪೈ

ಕಾರ್ಕಳ, ಆ. 10: ಪ್ರತಿಯೊಬ್ಬರ ಸುಪ್ತ ಮನಸ್ಸಿನ ಆಳದಲ್ಲಿ ಶಕ್ತಿ ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಗುರುತಿಸುವ ಕಾರ್ಯವಾಗಬೇಕು. ಮನಸ್ಸು ಒತ್ತಡದಲ್ಲಿ ಇದ್ದಾಗ ಅದರಿಂದ ಹೊರಬರುವ ರೀತಿಯನ್ನು ತಿಳಿದುಕೊಳ್ಳಬೇಕು. ಧನಾತ್ಮಕ ಯೋಚನೆಗಳು ನಮ್ಮ ಮನಸ್ಸಿನ ಆರೋಗ್ಯವನ್ನು ಹತೋಟಿಯಲ್ಲಿಡುತ್ತವೆ. ಮೌಲ್ಯಗಳು ಉತ್ತಮವಾಗಿದ್ದರೆ ಜೀವನದಲ್ಲಿ ಮಾಡುವ ಕೆಲಸಗಳೂ ಯಶಸ್ವಿಯಾಗುತ್ತವೆ. ತಮ್ಮ  ಸಾಮರ್ಥ್ಯವನ್ನು ಅರಿತು ಪ್ರತಿಯೊಬ್ಬರೂ ಗುರಿಯನ್ನು ತಲುಪುವ ಯೋಜನೆ ರೂಪಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಸರ್ಕಾರದ ಆರೋಗ್ಯ ವಿಭಾಗದ ಕಾರ್ಯಕ್ರಮ ನಿರ್ದೇಶಕಿ ಡಾ. ಪದ್ಮಿನಿ ಪೈ  ಹೇಳಿದರು.

ಅವರು ಭುವನೇಂದ್ರ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ `ವ್ಯಕ್ತಿತ್ವ ವಿಕಸನದ ಭಾಗವಾಗಿ ಸಾಮರ್ಥ್ಯವನ್ನು ಗುರುತಿಸುವಿಕೆ’ ವಿಷಯದ ಕುರಿತು ನಡೆದ ಅಂತಾರಾಷ್ಟ್ರೀಯ ಮಟ್ಟದ ವೆಬಿನಾರ್‍ನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮನೆಯಲ್ಲಿದ್ದುಕೊಂಡೇ ಒಬ್ಬ ವ್ಯಕ್ತಿ ತನ್ನ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟವನ್ನು ತಲುಪಲು ಬೇಕಾದ ಸೂತ್ರಗಳು ಹಾಗೂ ಪ್ರತಿಯೊಬ್ಬನೂ ತನ್ನ ಸಾಮರ್ಥ್ಯವನ್ನು ಅರಿತು, ತನ್ನಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸಿ ಅವುಗಳನ್ನು ಮುಂದಕ್ಕೆ ಬೆಳೆಸಿಕೊಂಡು ಹೋಗುವುದರ ಕುರಿತು ತರಬೇತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ. ಕೋಟ್ಯಾನ್  ಮಾತನಾಡಿ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾದುದು. ಇಂದಿನ ಒತ್ತಡದ ಜೀವನದಲ್ಲಿ  ನಾವೆಲ್ಲರೂ ಕೆಲಸದ ಹಿಂದೆ ಬಿದ್ದು ಮಾನಸಿಕ ಆರೋಗ್ಯವನ್ನು ಕಳೆದುಕೊಂಡಿದ್ದೇವೆ. ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ, ಶಕ್ತಿಯನ್ನು ಗುರಿತಿಸಲಾಗದ ಮಟ್ಟಿಗೆ ವ್ಯಸ್ತರಾಗಿದ್ದೇವೆ. ಇಂತಹ ಕಾರ್ಯಕ್ರಮಗಳು ಸ್ವಲ್ಪ ಮಟ್ಟಿಗಾದರೂ ಮನಸ್ಸಿನ ಹತೋಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿವೆ ಎಂದರು.

ಉಡುಪಿಯ ಸರ್ಕಾರಿ ಮಹಿಳಾ ಕಾಲೇಜಿನ ಮನೋವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ. ವಾಣಿ ಬಲ್ಲಾಳ್ ಕಾರ್ಯಕ್ರಮದ ಸಮನ್ವಯಕಾರರಾಗಿ ಭಾಗವಹಿಸಿದ್ದರು.

ಅನಂತರ ಸಂವಾದವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮನಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ವೆಬಿನಾರ್ ಸಂಯೋಜಕ ಚಂದ್ರಕಾಂತ ಗೋರೆ, ಐಕ್ಯುಎಸಿ ಸಂಯೋಜಕ ನಾಗಭೂಷಣ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಹಾಗೂ ವೆಬಿನಾರ್ ಸಹ ಸಂಯೋಜಕಿ ರಕ್ಷಿತಾ ಕುಮಾರಿ ತೋಡಾರು,  ತಾಂತ್ರಿಕ ಸಹಕಾರ ನೀಡಿದ ಗಣಕ ಯಂತ್ರ ವಿಭಾಗದ ದಿವ್ಯಾಕ್ಷ ಪ್ರಭು ಹಾಗೂ  ಗೀತಾ, ದಿನೇಶ್ ದೇವಾಡಿಗ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





























































































































































































































error: Content is protected !!
Scroll to Top