ಅರ್ಜಿತ್ ಸಿಂಗ್‌ ದ ಮ್ಯೂಸಿಕಲ್ ಲೆಜೆಂಡ್

ಏಪ್ರಿಲ್ 25 ಬಂತು ಅಂದರೆ ಅದು ದೇಶದ ಯುವ ಸಂಗೀತ ಪ್ರೇಮಿಗಳಿಗೆ ಬಹಳ ದೊಡ್ಡ ಹಬ್ಬ. ಏಕೆಂದರೆ ಅದು ಅವರ ಹೃದಯದ ಬಡಿತವೇ ಆಗಿರುವ ಅರ್ಜಿತ್ ಹುಟ್ಟಿದ ಹಬ್ಬ.
ಆತನ ವ್ಯಕ್ತಿತ್ವ, ಆತನ ಹಾಡುಗಳು, ಆತನ ಸ್ವರ ವೈವಿಧ್ಯ ಎಲ್ಲವೂ ಕೋಟಿ ಕೋಟಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿಬಿಟ್ಟಿವೆ. ಅದರಿಂದಾಗಿ ಇಂದು ಆತನಿಗೆ ದೇಶದಲ್ಲಿ ಸ್ಪರ್ಧಿಗಳೇ ಇಲ್ಲ ಎನ್ನುವುದನ್ನು ಅವನ ಸ್ಪರ್ಧಿಗಳೇ ಒಪ್ಪಿಕೊಂಡು ಬಿಟ್ಟಿದ್ದಾರೆ! ನಾನು ಇಂದು ಯಾವ ಕಾಲೇಜಿಗೆ ಹೋದರೂ ಅರ್ಜಿತ್ ಧ್ವನಿಯನ್ನು ಅನುಕರಣೆ ಮಾಡಿ ಹಾಡಲು ತೀವ್ರ ಪ್ರಯತ್ನ ಮಾಡುವ ಯುವಕ, ಯುವತಿಯರು ಇದ್ದಾರೆ. 2015ರಿಂದ ಆತನ ಜನಪ್ರಿಯತೆಯ ಗ್ರಾಫ್ ಕೆಳಗೆ ಬಂದದ್ದೇ ಇಲ್ಲ. ಅರ್ಜಿತ್ ಇಂದು ಜಗತ್ತಿನ ಅತ್ಯಂತ ಜನಪ್ರಿಯ ಗಾಯಕರಲ್ಲಿ ಮೂರನೇ ಸ್ಥಾನವನ್ನು, ಏಷ್ಯಾದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಅಂದರೆ ಆತನ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಅಭಿಮಾನ ಮೂಡುತ್ತದೆ.

ಆತನದ್ದು ಬಂಗಾಳದ ಸಂಗೀತದ ಹಿನ್ನೆಲೆಯ ಕುಟುಂಬ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ಅರ್ಜಿತ್. ಅವನ ಅಜ್ಜಿ, ಅವನ ಅತ್ತೆ ಎಲ್ಲರೂ ಚೆನ್ನಾಗಿ ಹಾಡುತ್ತಿದ್ದರು. ಸಹಜವಾಗಿ ಹುಡುಗನಲ್ಲಿ ಸಂಗೀತದ ಆಸಕ್ತಿ ಮೂಡಿತ್ತು. ಒಂಬತ್ತನೇ ವರ್ಷಕ್ಕೆ ರಾಜೇಂದ್ರ ಪ್ರಸಾದ್ ಹಜಾರಿ ಎಂಬ ಶಾಸ್ತ್ರೀಯ ಸಂಗೀತದ ಗುರುವಿನಿಂದ ಸಂಗೀತದ ಕಲಿಕೆ ಆರಂಭವಾಯಿತು. ಬಂಗಾಳದಲ್ಲಿ ರಬೀಂದ್ರ ಸಂಗೀತದ ಪ್ರಭಾವದಿಂದ ಯಾರೂ ಹೊರಬರಲು ಸಾಧ್ಯವಿಲ್ಲ. ಅದರ ಜೊತೆಗೆ ವಿಶ್ವದ ಶ್ರೇಷ್ಠ ಸಂಗೀತಗಾರರಾದ ಮೊಜಾರ್ಟ್ ಮತ್ತು ಬೀತೊವೆನ್ ಅವರ ಹಾಡುಗಳನ್ನು ಕೇಳುತ್ತಾ ಅರ್ಜಿತ್ ಬೆಳೆದರು. ಅದರ ಜೊತೆಗೆ ಕಿಶೋರ್ ಕುಮಾರ್, ಮನ್ನಾ ಡೆ, ಹೇಮಂತ್ ಕುಮಾರ್ ಅವರ ಹಾಡುಗಳನ್ನು ಕೇಳುತ್ತಾ ಆರ್ಜಿತ್ ತನ್ನದೇ ಸಿಗ್ನೇಚರ್ ಧ್ವನಿಯನ್ನು ಸಂಪಾದನೆ ಮಾಡಿಕೊಂಡರು. ಸೂಫಿ ಹಾಡುಗಳು, ಗಜಲ್, ಪಾಪ್ ಹಾಡುಗಳು, ಶಾಸ್ತ್ರೀಯ ಹಾಡುಗಳು, ಭಜನ್, ಜಾನಪದ ಹಾಡುಗಳು…ಹೀಗೆ ಎಲ್ಲ ವಿಧವಾದ ಹಾಡುಗಳನ್ನು ಅದ್ಭುತವಾಗಿ ಹಾಡಲು ಕಲಿತರು.

ರಿಯಾಲಿಟಿ ಶೋದಲ್ಲಿ ಸೋಲು

ಅರ್ಜಿತ್ ತನ್ನ 18ನೆಯ ವಯಸ್ಸಿನಲ್ಲಿ FAME GURUKUL ಎಂಬ ಟಿವಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಚೆಂದವಾಗಿ ಹಾಡಿದರು ಕೂಡ. ಆದರೆ ಆಡಿಯೆನ್ಸ್ ಪೋಲ್ ಇದ್ದ ಕಾರಣ ಅದರಲ್ಲಿ ಸೋತರು. ಆದರೆ ಆತನ ಧ್ವನಿಯ ಮಾಧುರ್ಯವನ್ನು ಗುರುತಿಸಿದ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತನ್ನ ಮುಂದಿನ ಸಿನೆಮಾ ಸಾವರಿಯಾದಲ್ಲಿ ಒಂದು ಹಾಡನ್ನು ಆತನಿಂದ ಹಾಡಿಸಿದರು. ಆದರೆ ಆ ಹಾಡು ಸಿನೆಮಾ ಎಡಿಟ್ ಆಗುವಾಗ ಬಿಟ್ಟು ಹೋಯಿತು. ಮುಂದೆ TIPS ಸಂಗೀತ ಕಂಪನಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಆಲ್ಬಂ ಸಾಂಗ್ಸ್ ರೆಕಾರ್ಡ್ ಮಾಡಿಕೊಂಡಿತು. ಆದರೆ ಅದ್ಯಾವುದೂ ಬಿಡುಗಡೆ ಆಗಲಿಲ್ಲ. ಆತನಲ್ಲಿ ಅಪ್ಪಟ ಪ್ರತಿಭೆ ಇದ್ದರೂ ದುರದೃಷ್ಟ ಆತನಿಗಿಂತ ಮುಂದೆ ಇತ್ತು. ಆದರೆ ಈ ಸೋಲುಗಳ ನಡುವೆ ಅರ್ಜಿತ್ ಸಂಗೀತವನ್ನು ಬಿಟ್ಟು ಹೋಗಿಲ್ಲ ಅನ್ನೋದು ಅದ್ಭುತ.

ಮುಂದೆ ಇನ್ನೊಂದು ಟಿವಿ ರಿಯಾಲಿಟಿ ಶೋ (10ಕೆ 10ಲೆ ಗಯೇ ದಿಲ್)ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದಾಗ ಆತನ ಬದುಕಿನಲ್ಲಿ ದೊಡ್ಡ ತಿರುವು ಉಂಟಾಯಿತು. ಆಗ ದೊರೆತ ಹತ್ತು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತಂದು ಮುಂಬೈಯಲ್ಲಿ ಒಂದು ಸ್ಟುಡಿಯೋ ಸ್ಥಾಪನೆ ಮಾಡಿದರು. ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸ, ಒಂದು ಹೊತ್ತಿನ ಊಟವೂ ಕಷ್ಟ ಆಗಿದ್ದ ದಿನಗಳು ಅವು. ಅರ್ಜಿತ್ ಒಂದು ದೊಡ್ಡ ಬ್ರೇಕ್‌ಗಾಗಿ ಕಾಯುತ್ತ ಕೂತಿದ್ದರು. ಈ ಅವಧಿಯಲ್ಲಿ ನೂರಾರು ಜಿಂಗಲ್, ಜಾಹೀರಾತುಗಳ ಸಂಗೀತವನ್ನು ಕಂಪೋಸ್ ಮಾಡಿ ಸ್ವತಃ ಹಾಡಿದರು.

2011ರಲ್ಲಿ ಭಾಗ್ಯದ ಬಾಗಿಲು ತೆರೆಯಿತು

ಆ ವರ್ಷ ಬಿಡುಗಡೆ ಆದ ಮರ್ಡರ್-2 ಸಿನೆಮಾದ ‘ಫೀರ್ ಮೊಹಬ್ಬತೆ’ ಹಾಡು ಸೂಪರ್‌ಹಿಟ್ ಆಯಿತು. ಬಾಲಿವುಡ್ ಆತನ ಟಿಪಿಕಲ್ ಧ್ವನಿಗೆ ಮಾರುಹೋಯಿತು. ಮುಂದೆ ರಬಟಾ (ಏಜೆಂಟ್ ವಿನೋದ್), ಉಸ್ಕಾ ಹೀ ಬನಾನಾ (ಎವಿಲ್ ರಿರ್ಟರ್ನ್) ಲಾಲ್ ಇಷ್ಕ್ ಮತ್ತು ಗೋಲಿಯೋನ್ ಕಿ ರಾಸ್‌ಲೀಲಾ (ರಾಮ್ ಲೀಲಾ) ಮೊದಲಾದ ಹಾಡುಗಳು ಭಾರಿ ಹಿಟ್ ಆದವು. ಮನವಾ ಲಾಗೇ ಮತ್ತು ಮಸ್ತ್ ಮಗನ್ ಹಾಡುಗಳು ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು. ಪದ್ಮಾವತ್ ಸಿನೆಮಾದ ‘ಬಿನ್ ತೆ ದಿಲ್ ‘ ಹಾಡಿಗೆ ರಾಷ್ಟ್ರಪ್ರಶಸ್ತಿ ಒಲಿದು ಬಂತು. 7 ಫಿಲಂಫೇರ್ ಪ್ರಶಸ್ತಿಗಳು ಬಂದವು. ಹಿಂದಿ, ತೆಲುಗು, ತಮಿಳು, ಬಂಗಾಳಿ ಸಿನೆಮಾಗಳಲ್ಲಿ ಅರ್ಜಿತ್ ಅವರಿಗೆ ಭಾರಿ ಡಿಮಾಂಡ್ ಕ್ರಿಯೇಟ್ ಆಯಿತು. ಭಾರಿ ದೊಡ್ಡ ಫ್ಯಾನ್ ಬೇಸ್ ಡೆವಲಪ್ ಆಯಿತು. ಇಂದು ಅರ್ಜಿತ್ ತನ್ನ ಸಂಗೀತದ ಪ್ರತಿಭೆಯಿಂದ ಭಾರಿ ಎತ್ತರಕ್ಕೆ ಬೆಳೆದಿದ್ದಾರೆ.

ಜವಾನ್, ಡುಮ್ಕಿ, ಅನಿಮಲ್ ಮೊದಲಾದ ಇತ್ತೀಚಿನ ಸೂಪರ್‌ಹಿಟ್ ಸಿನಿಮಾಗಳಲ್ಲಿ ಆರ್ಜಿತ್ ಹಾಡಿದ ಹಾಡುಗಳು ಇವೆ. ಆತ ಹಾಡಿದ ಎಲ್ಲ ಹಾಡುಗಳೂ ಸೂಪರ್‌ಹಿಟ್ ಆಗಿವೆ.

ಸ್ಟುಡಿಯೊ ಹಾಡುಗಳು ಮತ್ತು ಸ್ಟೇಜ್ ಕಾರ್ಯಕ್ರಮಗಳು

ಹಿನ್ನೆಲೆ ಹಾಡುಗಳು ಮತ್ತು ಆಲ್ಬಂ ಹಾಡುಗಳನ್ನು ಸ್ಟುಡಿಯೊ ಒಳಗೆ ಹಾಡುವ ಟ್ಯಾಲೆಂಟ್ ಒಂದೆಡೆ. ಸ್ಟೇಜ್ ಮೇಲೆ ಲಕ್ಷಾಂತರ ಮಂದಿ ಹುಚ್ಚು ಅಭಿಮಾನಿಗಳ ಮುಂದೆ ಗಿಟಾರ್ ಹಿಡಿದುಕೊಂಡು ಹಾಡುವ ಟ್ಯಾಲೆಂಟ್ ಇನ್ನೊಂದೆಡೆ. ಆರ್ಜಿತ್ ಎರಡೂ ಕಡೆಯಲ್ಲಿ ಗೆದ್ದಿದ್ದಾರೆ. ದೇಶ ವಿದೇಶಗಳ ನೂರಾರು ವೇದಿಕೆಗಳಲ್ಲಿ ಅವರ ಲೈವ್ ಸ್ಟೇಜ್ ಶೋಗಳಿಗೆ ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಆರ್ಜಿತ್ ಮತ್ತು ಶ್ರೇಯಾ ಘೋಷಾಲ್ ಸಂಗೀತದ ಶೋಗಳಿಗೆ ಇಂದು ಭಾರೀ ಡಿಮಾಂಡ್ ಇದೆ.

ಲೆಟ್ ದೇರ್ ಬಿ ಲೈಟ್ ಎಂಬ NGO ಸ್ಥಾಪನೆ ಮಾಡಿ ಆರ್ಜಿತ್ ತನ್ನ ಸಂಪಾದನೆಯ ಬಹು ದೊಡ್ಡ ಭಾಗವನ್ನು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ. ಆರ್ಜಿತ್ ಇಂದು ಭಾರತದ ನಂಬರ್ ಒನ್ ಹಿನ್ನೆಲೆ ಗಾಯಕ ಎಂದು ಸೋನು ನಿಗಮ್ ಸಾಕಷ್ಟು ವೇದಿಕೆಯಲ್ಲಿ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಗೆಳೆಯರು ಎಂದು ಕೂಡ ಸಾಬೀತಾಗಿದೆ.
ಅಂತಹ ಅನನ್ಯ ಪ್ರತಿಭೆ, ಜೇನ್ ದನಿಯ ಸರದಾರ ಅರ್ಜಿತ್ ಸಿಂಘ್ ಅವರಿಗೆ ಇಂದು ನೆನಪಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ಆಯ್ತಾ.























































































































































error: Content is protected !!
Scroll to Top