ಸಂಪಾದಕೀಯ- ರಾಜಕೀಯದಲ್ಲೂ ಸಿಂಗಂ ಆಗಿ ಮೆರೆಯಲಿ ಅಣ್ಣಾಮಲೈ

   ಪೊಲೀಸ್‌ ಇಲಾಖೆಯಲ್ಲಿ ದಕ್ಷತೆ ಮತ್ತು ನಿರ್ಭೀತಿಯಿಂದ ಕಾರ್ಯವೆಸಗಿ ಹೆಸರುವಾಸಿಯಾಗಿದ್ದ  ಯುವ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿಗೆ ಸೇರುವುದರೊಂದಿಗೆ  ಅವರ ರಾಜಕೀಯ ನಿಲುವುಗಳ ಕುರಿತಾಗಿ ಹರಡಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಪೊಲೀಸ್‌  ಇಲಾಖೆ ಮಾತ್ರವಲ್ಲ ಜನಸಾಮಾನ್ಯರಿಗೂ ಅಣ್ಣಾಮಲೈ ಎಂಬ ಹೆಸರು ಮಿಂಚು ಹರಿಸುತ್ತದೆ. ಇದಕ್ಕೆ ಕಾರಣ ಅವರು ಪೊಲೀಸ್‌ ಇಲಾಖೆಯ ಸೇವೆಯಲ್ಲಿರುವಾಗ  ತೋರಿಸಿದ ವೃತ್ತಿ ನಿಷ್ಠೆ ಮತ್ತು ದಿಟ್ಟತನ. ಯಾವುದೇ ರಾಜಕೀಯ ಲಾಬಿ, ಒತ್ತಡಗಳಿಗೆ ಮಣಿಯದೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಮೂಲಕ ಅವರು ಪೊಲೀಸ್‌ ಇಲಾಖೆಯ ಘನತೆಯನ್ನೂ ಎತ್ತಿ ಹಿಡಿದಿದ್ದರು. ಅಣ್ಣಾಮಲೈಯಂಥ ಅಧಿಕಾರಿ ನಮ್ಮ ಊರಿಗೂ ಬರಲಿ, ಹಾಗಾದರೂ ನಮ್ಮ ಊರು ಉದ್ಧಾರವಾಗಲಿ ಎಂದು ಜನರು ಆಶಿಸುವಷ್ಟು ಅಣ್ಣಾಮಲೈ ಕರ್ತವ್ಯ ನಿಷ್ಠೆ ದಂತಕತೆಯಾಗಿತ್ತು.  

    ಹೀಗಿದ್ದ ಅಣ್ಣಾಮಲೈ ಒಂದು ವರ್ಷದ ಹಿಂದೆ ದಿಢೀರ್‌ ಎಂದು ಪೊಲೀಸ್‌ ಸೇವೆಗೆ ರಾಜೀನಾಮೆ ನೀಡಿದ್ದು ಇಡೀ ದೇಶದಲ್ಲಿ ಸಂಚಲನವುಂಟು ಮಾಡಿದ ಸುದ್ದಿಯಾಗಿತ್ತು.ಇನ್ನೂ ಸಾಕಷ್ಟು  ವರ್ಷಗಳ ಸೇವೆ ಉಳಿದಿರುವಾಗ, ಪೊಲೀಸ್‌ ಇಲಾಖೆ ಅವರಿಂದ ಏನೋ ಮಹತ್ತರವಾದುದನ್ನುನಿರೀಕ್ಷಿಸುತ್ತಿರುವಾಗಲೇ ಅಣ್ಣಾಮಲೈ ಖಾಕಿ ಕಳಚಿಟ್ಟದ್ದು ಒಂದು ಶಾಕಿಂಗ್‌ ನ್ಯೂಸ್‌ ಆಗಿತ್ತು.

     ಆಡಳಿತದಲ್ಲಿರುವವರ ಕಿರುಕುಳದಿಂದ ಬೇಸತ್ತು ಅಣ್ಣಾಮಲೈ ಪೊಲೀಸ್‌ ನೌಕರಿ ಬಿಟ್ಟರು ಎಂಬ ಪುಕಾರು ಹಬ್ಬಿಸುವ ಪ್ರಯತ್ನ ಮಾಡಲಾಯಿತಾದರೂ  ಅದನ್ನು ಸ್ವತಃ ಅಣ್ಣಾಮಲೈಯವರೇ ಅಲ್ಲಗಳೆದರು. ಪೊಲೀಸ್ ಅಧಿಕಾರಿಯಾಗಿದ್ದರೂ ಅಣ್ಣಾಮಲೈಯೊಳಗೆ ಅದನ್ನೂ ಮೀರಿದ ಯೋಚನೆಗಳಿದ್ದವು. ದೇಶವನ್ನು ಆಮೂಲಾಗ್ರವಾಗಿ ಬದಲಾಯಿಸುವ, ಅದಕ್ಕಾಗಿ ಯುವ ಪಡೆಯನ್ನು ಕಟ್ಟುವಂಥ ದೊಡ್ಡ ಕನಸುಗಳಿದ್ದವು.ಇದನ್ನೆಲ್ಲ ಸಾಧಿಸಬೇಕಾದರೆ  ಪೊಲೀಸ್‌ ನೌಕರಿಯ ಬಂಧನವನ್ನು ಕಳಚಿಕೊಳ್ಳಬೇಕೆಂದು ಅಣ್ಣಾಮಲೈ ಭಾವಿಸಿದ್ದರೆ ಅದು ಅವರ ವೈಯಕ್ತಿಕ ನಿರ್ಧಾರ.

   ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಮೆಚ್ಚಿಕೊಂಡಿದ್ದರು. ಅಂತೆಯೇ ಆರ್ ಎಸ್‌ ಎಸ್‌ ಬಗೆಗೂ ಆವರು  ಉತ್ತಮ ಅಭಿಪ್ರಾಯ ಹೊಂದಿದ್ದಾರೆ.ಹೀಗಿರುವಾಗ ಅವರು ಬಿಜೆಪಿ ಸೇರಿರುವುರಲ್ಲಿ ಆಶ್ಚರ್ಯವಿಲ್ಲ. ಆಣ್ಣಾಮಲೈ ರಾಜಕೀಯ ಸೇರ್ಪಡೆಯಿಂದ ಅವರಿಗೆ ಲಾಭವಾಗುತ್ತೋ ಇಲ್ಲವೋ ಎನ್ನುವುದನ್ನು ಕಾಲವೇ ಹೇಳಬೇಕು. ಆದರೆ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಖಂಡಿತ ಅಣ್ಣಾಮಲೈ ವರ್ಚಸ್ಸಿನ ಲಾಭ ಸಿಗಬಹುದು. ಅಣ್ಣಾಮಲೈ ರಾಜಕೀಯ ಪಕ್ಷ ಸೇರಿದ ಕುರಿತಾಗಿ ಟೀಕಿಸುವ ಅಗತ್ಯವಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ರಾಜಕೀಯ ನಿಲುವುಗಳನ್ನು ಹೇಳಿಕೊಳ್ಳುವ, ಪ್ರದರ್ಶಿಸುವ ಹಕ್ಕನ್ನು ಸಂವಿಧಾನವೇ ಕೊಟ್ಟಿದೆ. ಯಾವ ಪಕ್ಷ ಸೇರಬೇಕೆನ್ನುವುದು ಅವರಿಗೆ ಬಿಟ್ಟ ವಿಚಾರ. ಒಂದು ವೇಳೆ ಅಣ್ಣಾಮಲೈ ಬಿಜೆಪಿ ಸೇರದೆ ಟೀಕಿಸುವವರ ಪಕ್ಷವನ್ನೇ ಸೇರಿದ್ದರೆ ಅವರ ವರಸೆ ಹೀಗಿರುತ್ತಿತ್ತೇ?

ಅಣ್ಣಾಮಲೈ ಹತ್ತೊರಲ್ಲೊಬ್ಬ ರಾಜಕಾರಣಿಯಾಗದೆ ಪೊಲೀಸ್‌ ಇಲಾಖೆಯಲ್ಲಿ ತೋರಿಸಿದ ಖದರನ್ನೇ ರಾಜಕೀಯದಲ್ಲಿ ತೋರಿಸಿದರೆ ದೇಶಕ್ಕೆ ಲಾಭವಾಗಬಹುದು. ಪೊಲೀಸ್‌ ಕರ್ತವ್ಯದಲ್ಲಿರುವಾಗ ಅಣ್ಣಾಮಲೈಗೆ ಕರ್ನಾಟಕದ ಸಿಂಗಂ ಎಂಬ ಖ್ಯಾತಿಯಿತ್ತು. ರಾಜಕೀಯದಲ್ಲೂ ಅವರು ಸಿಂಗಂ ಆಗಿ ಮೆರೆಯಬೇಕೆನ್ನುವುದು ಈ ದೇಶದ ಜನತೆ ಅವರ ಮೇಲಿಟ್ಟಿರುವ ನಿರೀಕ್ಷೆ.









































































































error: Content is protected !!
Scroll to Top