–ಕೊರೊನಾ ಮುಕ್ತ ಭಾರತಕ್ಕೆ ಕೈ ಜೋಡಿಸಿ – ಡಾ.ಯಶೋದಾ ಐತಾಳ್
ಹೆಬ್ರಿ , ಆ. 11 :ಮುಂಬಯಿಯ ಕೆಇಎಂ ಆಸ್ಪತ್ರೆಯಲ್ಲಿ 100 ದಿನ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿ ಹುಟ್ಟೂರಿಗೆ ರಜೆಯಲ್ಲಿ ಆಗಮಿಸಿದ ಹೆಬ್ರಿಯ ಡಾ.ಯಶೋದಾ ಆರ್. ಐತಾಳ್ ಅವರನ್ನು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಭವ್ಯ ಸ್ವಾಗತ ನೀಡಿ ಸನ್ಮಾನಿಸಲಾಯಿತು.
ಕೊರೊನಾದ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಜಾಗೃತಿ ಅಗತ್ಯ, ಎಲ್ಲರೂ ಮುಂಜಾಗ್ರತೆ ವಹಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಂದರೆ ನಾವೆಲ್ಲ ಸೇರಿ ಭಾರತವನ್ನು ಕೊರೊನಾ ಮುಕ್ತವಾಗಿ ಮಾಡಬಹುದು ಎಂದು ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ರಾಮಚಂದ್ರ ಐತಾಳ್ ಮತ್ತು ಡಾ.ಭಾರ್ಗವಿ ಐತಾಳ್ ದಂಪತಿಯ ಪುತ್ರಿ ಡಾ.ಯಶೋದಾ ಆರ್. ಐತಾಳ್ ಹೇಳಿದರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಎಚ್. ದಿನಕರ ಪ್ರಭು ಪರಿಕಲ್ಪನೆಯಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕೊರೊನಾ ವಾರಿಯರ್ ಡಾ.ಯಶೋದ ಆರ್ ಐತಾಳ್ ಭವ್ಯ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮುಂಬಯಿಯ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಎಂಡಿ ಪದವಿ ಮಾಡುತ್ತಿರುವ ನಮ್ಮ ತಂಡಕ್ಕೆ ಕೊರೊನಾ ವಾರಿಯರ್ ಆಗಿ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ತಕ್ಷಣವೇ ಕರ್ತವ್ಯ ಮಾಡಲೇ ಬೇಕು ಎಂಬ ಆದೇಶ ಬಂತು. ಆರಂಭದಲ್ಲಿ ತುಂಬಾ ಭಯವಾಯಿತು. ಬಳಿಕ ಅಭ್ಯಾಸವಾಯಿತು. ಜನರ ಆರೋಗ್ಯದ ಸೇವೆ ಮಾಡಿದ ಧನ್ಯತಾ ಭಾವ ಮೂಡಿದೆ. ಈಗ ಹೆಮ್ಮೆ ಆಗುತ್ತಿದೆ. ಕೊರೊನಾ ವಾರಿಯರ್ ಆಗಿ 100 ದಿನಗಳ ಸತತ ಸೇವೆ ಮಾಡಿ ಕೇವಲ 4 ದಿನದ ರಜೆಯಲ್ಲಿ ಊರಿಗೆ ಬಂದ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ ಗೌರವಿಸಿದ್ದಕ್ಕೆ ಋಣಿಯಾಗಿದ್ದೇನೆ, ಹುಟ್ಟೂರಿನ ಗೌರವ ಇನ್ನಷ್ಟು ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಡಾ.ಯಶೋದಾ ಐತಾಳ್ ಕೃತಜ್ಞತೆ ಸಲ್ಲಿಸಿದರು.
ಡಾ. ಯಶೋದಾ ಐತಾಳ್ ತಾಯಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಭಾರ್ಗವಿ ಐತಾಳ್ ಮಾತನಾಡಿ ಮಗಳ ಸೇವೆಯನ್ನು ಗುರುತಿಸಿ ಭವ್ಯ ಸ್ವಾಗತ ನೀಡಿ ಗೌರವಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ ಮಗಳ ಸೇವೆಗೆ ಹುಟ್ಟೂರಿನಲ್ಲಿ ಪ್ರೀತಿಯ ಗೌರವ ಸಿಕ್ಕಿದೆ ಎಂದರು.
ಕಾರ್ಯಕ್ರಮದ ರೂವಾರಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಎಚ್. ದಿನಕರ ಪ್ರಭು ಮಾತನಾಡಿ ವೈದ್ಯಕೀಯ ವಿದ್ಯಾರ್ಥಿಯಾದರೂ ದೇಶದೆಲ್ಲೆಡೆ ಜನ ಆತಂಕದಲ್ಲಿರುವಾಗ ವಾರಿಯರ್ ಆಗಿ ಸೇವೆ ಸಲ್ಲಿಸಿ ನಮ್ಮೂರಿನ ಕೀರ್ತಿಯನ್ನು ಯಶೋದಾ ಐತಾಳ್ ಮುಂಬಯಿಯಲ್ಲಿ ಬೆಳಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಸಂಪುಟ ಕಾರ್ಯದರ್ಶಿ ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದಿಸಿ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ನಾಡಿಗೆ ಐತಾಳರ ಕುಟುಂಬ ಇನ್ನಷ್ಟು ಆರೋಗ್ಯದ ಸೇವೆ ನೀಡುವಂತಾಗಲಿ ಎಂದು ಆಶಿಸಿದರು.
ಆಯುಷ್ ಫೆಡರೇಶನ್ ಕಾರ್ಕಳ ಶಾಖೆಯ ಅಧ್ಯಕ್ಷ ಡಾ.ರವಿಪ್ರಸಾದ್ ಹೆಗ್ಡೆ, ಹೆಬ್ರಿ ಜೇಸಿಐ ಅಧ್ಯಕ್ಷೆ ಸುನೀತಾ ಎ.ಹೆಗ್ಡೆ, ಡಾ.ಯಶೋದಾ ಐತಾಳ್ ಅವರನ್ನು ಗೌರವಿಸಿದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಎಚ್.ರಮೇಶ್ ಆಚಾರ್ಯ, ಬೇಳಂಜೆ ಹರೀಶ ಪೂಜಾರಿ, ಲಯನ್ಸ್ ಕ್ಲಬ್ ಸದಸ್ಯರು, ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಸಿಬಂದಿ, ಡಾ.ರಾಮಚಂದ್ರ ಐತಾಳ್, ಅಣ್ಣ ಡಾ.ಕಾರ್ತಿಕ್ ಐತಾಳ್, ರಾಜಸ್ಥಾನದ ಗಣೇಶ್ ಖೆಮನಿ ಮುಂತಾದವರು ಉಪಸ್ಥಿತರಿದ್ದರು.
“ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದಕ್ಕೆ ಈಗ ಅತ್ಯಂತ ಖುಷಿಯಾಗುತ್ತಿದೆ. ನಿಮ್ಮೇಲ್ಲರ ಪ್ರೀತಿ ಗೌರವದಿಂದ ಇನ್ನಷ್ಟು ಸೇವೆ ಮಾಡುವೆ.
ಡಾ. ಹೆಬ್ರಿ ಯಶೋದ ಐತಾಳ್