ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಅಸಮರ್ಪಕ ಕಾಮಗಾರಿಯಿಂದ ಒಳಚರಂಡಿಯ ನೀರು ಮಾನ್‍ಹೋಲ್‍ಗಳಿಂದ ಉಕ್ಕಿ ರಸ್ತೆಯಲ್ಲಿ ಮತ್ತು ಪಕ್ಕದ ಚರಂಡಿಯಲ್ಲಿ ಹರಿಯುತ್ತಿದೆ. ಚರಂಡಿ ನೀರು ಬಾವಿಗೆ ಹರಿದು, ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದು ಪುರಸಭಾ ಸದಸ್ಯ ಶುಭದ ರಾವ್ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿಯವರಿಗೆ ಲಿಖಿತ ದೂರು ನೀಡಿರುತ್ತಾರೆ.
ಚರಂಡಿಯಲ್ಲಿ ನಿಂತ ನೀರಿನಿಂದ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿ ಮತ್ತು ಗುತ್ತಿಗೆದಾರರು ಈ ಉಕ್ಕಿ ಹರಿಯುವ ಒಳಚರಂಡಿಯ ನೀರಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಆನೆಕೆರೆ ಮಸೀದಿಯ ಬಳಿ (ಆನೆಕೆರೆಯಿಂದ ಹರಿದು ಹೋಗುವ ನೀರಿನ ಪಕ್ಕದಲ್ಲಿರುವ) ಒಳಚರಂಡಿಯ ಪೈಪನ್ನು ಒಡೆದು ಹಾಕಿ ಚರಂಡಿಯು ನೀರು ಕೆರೆಗೆ ಹರಿಯುವಂತೆ ಮಾಡಿರುತ್ತಾರೆ. ಆದ್ದರಿಂದ, ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶುಧದ ಅವರು ಮನವಿಯಲ್ಲಿ ತಿಳಿಸಿದ್ದಾರೆ.