ಆಲೂ ಪಲ್ಯ ತಿನ್ನಲೊಪ್ಪದ ಗಂಡನಿಗೆ ಹೆಂಡತಿ ಮಾಡಿದ್ದಾದರೂ ಏನು?

ಅಹ್ಮದಾಬಾದ್‌, ಆ. 11: ಹೆಂಡತಿ ಮಾಡಿದ ಪಲ್ಯ ಚೆನ್ನಾಗಿಲ್ಲ ಎಂದರೆ ಏನು  ಮಾಡಬಹುದು? ಹೆಚ್ಚೆಂದರೆ ಹೆಂಡತಿಯನ್ನು ಬಯ್ಯಬಹುದು, ಇಲ್ಲ ಎಂದರೆ ಬೇರೆ  ಪಲ್ಯ ಮಾಡಿಸಬಹುದು. ಆದರೆ ಅಹುಮದಾಬಾದಿನ ಈ ವ್ಯಕ್ತಿಗೆ ಆದ ಡತಿಯನ್ನು ನೋಡಿದ ಬಳಿಕ ಹೆಂಡತಿಯ ಅಡುಗೆ ಚೆನ್ನಾಗಿಲ್ಲ ಎಂದು ಹೇಳುವಾಗ ಎರಡೆರಡು ಸಲ ಯೋಚಿಸಬೇಕು.

ಅಹ್ಮದಾಬಾದಿನ ವಾಸ್ನಾ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆಯಿದು. ಹರ್ಷದ್‌ ಗೋಯಲ್‌ ರಾತ್ರಿ ಕೆಲಸ  ಮುಗಿಸಿ ಮನೆಗೆ ಬಂದು ರಾತ್ರಿಯ ಅಡುಗೆ ಏನು ಎಂದು ಹೆಂಡತಿ ತಾರಾಳ ಬಳಿ ಪ್ರೀತಿಯಿಂದಲೇ  ಕೇಳಿದರು. ಚಪಾತಿ ಮತ್ತು ಆಲೂಗಡ್ಡೆ ಪಲ್ಯ  ಎಂಬ ಊತ್ತರ ಬಂದಾಗ  ಗೋಯಲ್‌ ಗೆ ಸಿಟ್ಟು ನೆತ್ತಿಗೇರಿತು. ಸಕ್ಕರೆ  ರೋಗ ಇರುವುದರಿಂದ ಆಲೂಗಡ್ಡೆ ತಿನ್ನಬಾರದು ಎಂದು ಡಾಕ್ಟರ್‌ ಹೇಳಿದ್ದರೂ ಹೆಂಡತಿ ಅದನ್ನೇ ಪಲ್ಯ ಮಾಡಿಟ್ಟದ್ದು ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಈ ಸಿಟ್ಟಿನಲ್ಲಿಯೇ ಹೆಂಡತಿಯನ್ನು ಹಿಗ್ಗಾಮುಗ್ಗಾ ಬೈದರು. ಆದರೆ ದಿನಾ ಗಂಡನ ಬಾಯಿಂದ ಪಿರಿಪಿರಿ ಕೇಳಿ ಹೆಂಡತಿಗೂ ರೋಸಿ ಹೋಗಿರಬೇಕು.ಸಿಟ್ಟಿನ ಭರದಲ್ಲಿ ಬಚ್ಚಲಿನಿಂದ   ಬಟ್ಟೆ ಒಗೆಯುವ ಬ್ಯಾಟ್‌ ತಂದು ಗಂಡನನ್ನು  ಮನಸೋ ಇಚ್ಚೆ ಥಳಿಸಿದಳು.

ಹೆಂಡತಿಯ ಕೈಯಿಂದ  ಪಾರಾಗಲು ಸಾಧ್ಯವಾಗದೆ ಗೋಯಲ್‌ ಸಹಾಯಕ್ಕಾಗಿ ಮೊರೆ ಇಟ್ಟಾಗಲೆ ಈ ಗಂಡ ಹೆಂಡತಿ ಜಗಳ ಬೀದಿಗೆ ಬಂದದ್ದು. ಅಕ್ಕಪಕ್ಕದವರು ಬಂದು ಬಿಡಿಸದಿರುತ್ತಿದ್ದರೆ ಗೋಯಲ್‌ ಕತೆ ಅಂದಿಗೆ ಮುಗಿಯುತ್ತಿತ್ತು. ನಾಲ್ಕು ಹೆಣ್ಣುಮಕ್ಕಳು ತಾಯಿಯ ರೌದ್ರವತಾರವನ್ನು ನೋಡಿ  ಭೀತಿಯಿಂದ ಕಿರುಚಲೂ ಆಗದೆ ದಿಕ್ಮೂಢರಾಗಿ ನೋಡುತ್ತಿದ್ದರು.

ನೆರೆಹೊರೆಯವರೇ ಸೇರಿ ಹರ್ಷದ್‌ರನ್ನು ಆಸ್ಪತ್ರೆಗೆ ಒಯ್ದರು. ಪರೀಕ್ಷೆ ಮಾಡಿದ ವೈದ್ಯರು ಭಜದ ಮತ್ತು ಕಾಲಿನ ಮೂಳೆ ಮುರಿದಿರುವುದರಿಂದ ಕನಿಷ್ಠ ಒಂದು ತಿಂಗಳು  ಮಲಗಿದಲ್ಲಿಯೇ ಇರಬೇಕೆಂದು ಹೇಳಿದ್ದಾರೆ. ಈಗ ಹೆಂಡತಿಯ ವಿರುದ್ಧ ಹರ್ಷದ್‌ ಪೊಲೀಸ್‌ ದೂರು ದಾಖಲಿಸಿದ್ದಾರೆ. ಹೀಗೆ ಆಲೂಗಡ್ಡೆ ಪಲ್ಯ ಗಂಡನನ್ನು ಆಸ್ಪತ್ರೆಗೂ ಹೆಂಡತಿಯನ್ನು ಲಾಕಪ್‌ಗೂ ಸೇರಿಸಿತು.

 

 

 







































error: Content is protected !!
Scroll to Top