ಹೆಬ್ರಿ : ಹೆಬ್ರಿ ಪೊಲೀಸ್ ಠಾಣೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಹೆಬ್ರಿ ನಾಡ ಕಚೇರಿ, ನೆಮ್ಮದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಆ. 11ರಂದು ಹೆಬ್ರಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದರು. ಸುದೀರ್ಘ ಹೋರಾಟದ ಮೂಲಕ ಹೆಬ್ರಿ ತಾಲೂಕು ರಚನೆಯಾಗಿದೆ. ಪೂರ್ಣ ಪ್ರಮಾಣದ ತಾಲೂಕಾಗಲು ಕೆಲವು ಸಮಯ ಬೇಕಾಗಬಹುದು. ಆದರೂ, ರಾಜ್ಯದ ಎಲ್ಲಾ ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಆದ್ಯತೆ ನೀಡಲಿದೆ ಎಂದು ಬೊಮ್ಮಾಯಿ ಹೇಳಿದರು.
ಹೆಬ್ರಿಯನ್ನು ಪೂರ್ಣ ಪ್ರಮಾಣದ ತಾಲೂಕು ಮಾಡುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್, ಸಬ್ ರಿಜಿಸ್ಟ್ರಾರ್ ಕಚೇರಿ, ಅಗ್ನಿ ಶಾಮಕ ಠಾಣೆ ತೆರೆಯಲು ಅನುಮತಿ ನೀಡುವಂತೆ ಶಾಸಕ ವಿ. ಸುನಿಲ್ ಕುಮಾರ್ ಅವರು ಸಚಿವ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ಎನ್. ವಿಷ್ಣುವರ್ಧನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೀತಿ ಗೇಹ್ಲೋಟ್, ಹೆಬ್ರಿ ತಹಶೀಲ್ಧಾರ್ ಕೆ. ಮಹೇಶ್ಚಂದ್ರ, ಕಾರ್ಕಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮೇಜರ್ ಹರ್ಷ ಕೆ.ಬಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರಿಂದ ಸಚಿವರಿಗೆ ಹಲವಾರು ಅಹವಾಲು ಸಲ್ಲಿಕೆಯಾಯಿತು. ಹೆಬ್ರಿ ಭಾಗದ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ 94 ಸಿ. ಹಕ್ಕುಪತ್ರ ವಿತರಿಸಲಾಯಿತು.