ಕಾರ್ಕಳ : ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರ ಪಟ್ಟಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (gsb) ಸಮುದಾಯವನ್ನು ಸೇರಿಸುಂತೆ ಕಂದಾಯ ಸಚಿವ ಆರ್. ಅಶೋಕ್ ಮೂಲಕ ರಾಜ್ಯ ಸರಕಾರಕ್ಕೆ ಆ. 7ರಂದು ಮನವಿ ಸಲ್ಲಿಸಲಾಯಿತು.
2018-19 ರ ಆರ್ಥಿಕ ವರ್ಷದಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಕುಟುಂಬಗಳಿಗೆ ಕೇಂದ್ರ ಸರಕಾರ ದೇಶದ ಎಲ್ಲಾ ಭಾಗಗಳಲ್ಲಿ ಸರಕಾರಿ ನೌಕರಿ ಮತ್ತು ಶೈಕ್ಷಣಿಕ ಸವಲತ್ತುಗಳಲ್ಲಿ ಮೀಸಲಾತಿ ಕಲ್ಪಿಸುವ ಕಾಯಿದೆ ಜಾರಿ ತಂದಿತ್ತು. ಜಿಎಸ್‌ಬಿ ಸಮಾಜವು ಮೇಲ್ವರ್ಗವೆಂದು ಪರಿಗಣಿಸಲ್ಪಟ್ಟಿರುವುದರಿಂದ ಶೈಕ್ಷಣಿಕ ಮತ್ತು ನೌಕರಿ ಸೌಲಭ್ಯದಿಂದ ವಂಚಿತವಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಜಿಎಸ್‌ಬಿ ಸಮುದಾಯ ಗಣನೀಯ ಸಂಖ್ಯೆಯಲ್ಲಿದ್ದು ಆ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿವೆ. ಆದ್ದರಿಂದ ಜಿಎಸ್‌ಬಿ ಸಮಾಜವನ್ನು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ (ews) ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆರ್. ಅಶೋಕ್ ಅವರಿಗೆ ಉಡುಪಿಯಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ, ಕೆಎಂಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್, ಕಾರ್ಕಳ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ಮುಂಡ್ಕೂರು ರಘುವೀರ ಶೆಣೈ ಉಪಸ್ಥಿತರಿದ್ದರು.