ಬೆಂಗಳೂರು, ಆ.2: ಕೊರೊನಾ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ಕೇಸ್ ದಾಖಲಿಸಿಕೊಂಡಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಗದಗ ಶಾಸಕ ಎಚ್. ಕೆ. ಪಾಟೀಲ್ ಅವರ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಾಗಿದೆ.
ವಿಧಾನಸಭೆ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರಾಗಿರುವ ಎಚ್. ಕೆ. ಪಾಟೀಲ್ ಆಸ್ಪತ್ರೆಗಳಲ್ಲಿ ಸರಿಯಾದ ವೇಳೆಗೆ ಹಾಸಿಗೆ , ಆಂಬುಲೆನ್ಸ್ ಸಿಗದೆ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೊರೊನಾದಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಕೊರೊನಾ ಸಾಂಕ್ರಾಮಿಕ ಪಿಡುಗನ್ನು ಸಮರ್ಪಕವಾಗಿ ನಿಭಾಯಿಸಬೇಕಾದ್ದು, ಮೃತರಿಗೆ ಘನತೆಯ ಸಂಸ್ಕಾರ ಮಾಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಇಲ್ಲಿ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರವಿದ್ದು, ಸರ್ಕಾರಿ
ಆಸ್ಪತ್ರೆ ಮತ್ತು ಕೋವಿಡ್ ಸೆಂಟರ್ ಗಳ ಸೇವೆಗಳಲ್ಲಿ ಆತಳಿತ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಎಚ್. ಕೆ. ಪಾಟೀಲ್ ರಾಜ್ಯ
ಮಾನವ ಹಕ್ಕುಗಳ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಅಂಬ್ಯುಲೆನ್ಸ್, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಮಾಧ್ಯಮಗಳು ಇದನ್ನು ಹೈಲೈಟ್ ಮಾಡುತ್ತಿವೆ. ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್ ನೀಡುತ್ತಿಲ್ಲ. ಎಂದು ಪಾಟೀಲ್ ಹೇಳಿದ್ದಾರೆ.