ನೆಮ್ಮದಿಯ ಬದುಕಿಗೆ ಒಂದಷ್ಟು ಸೂತ್ರಗಳು 

ಒಬ್ಬ ವ್ಯಕ್ತಿಯಲ್ಲಿ ಧನಾತ್ಮಕ ಯೋಚನೆ ಇದ್ದರೆ ಮಾತ್ರ  ಆತ ಇರುವ ಮನೆ , ಸಂಸ್ಥೆ,ಉದ್ಯೋಗ ತಾಣ ನೆಮ್ಮದಿಯಿಂದ ಇರಬಲ್ಲದು.ಹಾಗೆಯೇ ಆತನೊಂದಿಗೆ ಇರುವ ವ್ಯಕ್ತಿಗಳೂ ನೆಮ್ಮದಿಯಿಂದ ಇರಬಲ್ಲರು.

       ನೆಮ್ಮದಿಯ ಜೀವನ ನಡೆಸಲು ಗಂಡ ಅಥವಾ ಹೆಂಡತಿ ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಬಗ್ಗೆ ಸ್ಪರ್ಧೆ ಬೇಡ.ಜೀವನ ಸ್ಪರ್ಧಾ ಕಣವೂ ಅಲ್ಲ ರಣರಂಗವೂ ಅಲ್ಲ.ಬೆಳಿಗ್ಗೆ ಎದ್ದ ತಕ್ಷಣ ಗಂಡ ಮಕ್ಕಳಿಗೆ ತಿಂಡಿ ಯಾವುದಿಷ್ಟ ಎಂದು ತಿಳಿದುಕೊಂಡು ಮಾಡಿ. ಅಥವಾ ಗಂಡನೇ ಬೇಗ ಎದ್ದು ಇನ್ನೂ ಏಳದಿರುವ ಹೆಂಡತಿ ಮಕ್ಕಳನ್ನು ಎಬ್ಬಿಸಿ ಬೈದು ಮನೆಯನ್ನು  ರಂಪಾಟಗೊಳಿಸುವ ಬದಲಿಗೆ ಯಾರಿಗೆ ಏನಿಷ್ಟವೋ ಆ ತಿಂಡಿ ಮಾಡಿಟ್ಟರೆ ಅ ಮನೆ ನಂದಗೋಕುಲ ಆಗಬಹುದು.ಆ ತಿಂಡಿ ಈ ತಿಂಡಿ ತಿನ್ನದಿರಿ ಎಂದು ಕೆಲವು ಆರೋಗ್ಯ ತಜ್ಞರು ಬೊಗಳೆ ಬಿಡಬಹುದು.ಆದರೆ ಅವರ ಮಕ್ಕಳು ಮಾಡುವ ಹಟ  ಪಾಪ ಅವರಿಗೇ ಗೊತ್ತು. ಮಕ್ಕಳು ತಿಂಡಿ ಬೇಡ ಎಂದರೆ ಪಾಪ ಹಸಿದಿರುವರೋ ಏನೋ ಎಂಬ ಸಂಕಟ ಬೇಡ.ಉಪವಾಸ  ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು   ಎಂದೆಣಿಸಿಕೊಳ್ಳಿ.ಕೆಲವೊಮ್ಮೆ ಅವಿಭಕ್ತ ಕುಟುಂಬಗಳಲ್ಲಿ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಜಗಳಗಳು ಬಂದರೂ ಅಲ್ಲಿ ಎಲ್ಲರೂ ಒಬ್ಬ ಹಿರಿಯ ವ್ಯಕ್ತಿಯ ಅಧೀನದಡಿ ಎಲ್ಲರೂ ಬರುವುದರಿಂದ ಜಗಳಗಳು ಬೆಳೆಯದೇ ತಣ್ಣಗಾಗುವ ಸಂದರ್ಭಗಳೇ ಹೆಚ್ಚಿರುವುದರಿಂದ ಅವಿಭಕ್ತ ಕುಟುಂಬಗಳಲ್ಲಿ ಆಗುವ ನಷ್ಟಕ್ಕಿಂತ ಲಾಭಗಳೇ ಹೆಚ್ಚು.

ಇನ್ನು ಶಾಲಾ ಕಾಲೇಜಿನ ವಿಷಯದಲ್ಲೂ ನೆಮ್ಮದಿ ಕೆಡಿಸುವವರುಂಟು. ಮಕ್ಕಳು  ಬೇಗ ಏಳಲಿಲ್ಲವೆಂದು ಕೂಗಿ ರಂಪಾಟ ಮಾಡಿ ಎಬ್ಬಿಸಿ ಸ್ಕೂಲ್ ಬಸ್ಸೋ ವ್ಯಾನಿಗೋ ದಬ್ಬದಿರಿ.ತಿಳಿವಳಿಕೆ ಬಂದಾಗ ನೀವು ಬೇಡವೆಂದರೂ ಅವರಾಗಿಯೇ ಹೋಗುತ್ತಾರೆ.ಇಲ್ಲಿ ತಾಳ್ಮೆ ಅತಿ ಅವಶ್ಯಕ. ಒಂದೆರಡು ದಿನ ನೀವು ನಿರ್ಲಕ್ಷ್ಯ ಮಾಡಿದರೆ ಅವರಾಗಿಯೇ ಮಾಡುತ್ತಾರೆ.

ಅಂಕಗಳ ಬಗ್ಗೆ ಪದೇಪದೆ  ಶಿಕ್ಷಕರ ತಲೆ ತಿನ್ನುವುದೋ,ಪ್ರಾಂಶುಪಾಲರ ತಲೆ ತಿನ್ನುವುದೋ ಮಾಡದಿರಿ.ಒಂಭತ್ತನೇ ತರಗತಿಯವರೆಗಿನ ಅಂಕಪಟ್ಟಿಯನ್ನು ಕೆಲಸ ನೀಡುವ ಸಂದರ್ಭದಲ್ಲಿ ಪರಿಗಣಿಸಿದ್ದು ತೀರಾ ಕಡಿಮೆ. ಮೊದಲೇ ಅವರ ಅಂಕಗಳ ಕಡೆಗೆ ಗಮನ ನೀಡದಿದ್ದರೆ ಅವರು ಹತ್ತನೇ ತರಗತಿ, ಪಿಯುಸಿ, ಪದವಿಗಳಲ್ಲಿ ಅದು ಹೇಗೆ ನಾವೆಣಿಸಿದಷ್ಟು ಅಂಕ ತೆಗೆಯಲು ಸಾಧ್ಯ ಎಂಬ ಪ್ರಶ್ನೆ ಏಳಬಹುದು.ಆದರೆ ಒಳ್ಳೆಯ ಬದುಕು ನಡೆಸಲು ಅಂಕಗಳ ನಿರ್ಧಾರದಿಂದಲ್ಲ ಅದು ಆರೋಗ್ಯಕರ ಮನಸ್ಥಿತಿಯನ್ನು ಹೊಂದಿದ್ದರೆ ಮಾತ್ರ.

ಇನ್ನು ಹಣಕಾಸಿನ ವಿಷಯಕ್ಕೆ ಬಂದರೆ ಕೆಲವರಿಗೆ ತಮ್ಮ ಆದಾಯಕ್ಕಿಂತಲೂ  ವ್ಯಯದ ಪ್ರಮಾಣವೇ ಹೆಚ್ಚಿರುತ್ತದೆ.ಹೆಂಡತಿ ಮಕ್ಕಳ ಆಸೆ ಈಡೇರಿಸಲೋ ತಮಗೆ ಸಿಕ್ಕದ ಸುಖವನ್ನು ಮಕ್ಕಳು ಅನುಭವಿಸಲೆಂದೋ ಅಥವಾ ಬಂಧು ಮಿತ್ರರ ಎದುರಲ್ಲಿ ನಾನೂ ಕೂಡಾ ಉತ್ತಮ ಜೀವನವನ್ನು ನಡೆಸುತ್ತಿದ್ದೇನೆ ಎಂದು ತೋರಿಸಿಕೊಳ್ಳಲೋ ಕೈ ಸಾಲವೋ ಬ್ಯಾಂಕ್ ಸಾಲವೋ ತಂದು ಅದನ್ನು ತೀರಿಸಲು ಇನ್ನೊಂದು ಸಾಲ ಮಾಡುವುದೋ ಮಾಡಿ ಜೀವನವಿಡೀ ಕೊರಗುವವರಿದ್ದಾರೆ.ಅಲ್ಲದೆ ಚಿನ್ನ ಮಾರುವುದೋ  ಅಥವಾ ಅಡವಿಡುವುದೋ ಮಾಡಿ ಹೆಂಡತಿ ಮಕ್ಕಳೆದುರು ಸ್ವಯಂ ಹೀನಾಯ ಸ್ಥಿತಿಯನ್ನು ಅನುಭವಿಸುವವರಿದ್ದಾರೆ. ಹೌದು! ಮನೆ ಸ್ವರ್ಗ ಸದೃಶವಾಗಿರಬೇಕು ಎಂದರೆ  ಇನ್ನೊಬ್ಬರ ಸಂಸಾರವನ್ನು ನಮ್ಮ ಸಂಸಾರದೊಂದಿಗೆ ತುಲನೆ ಮಾಡಬಾರದು.ಯಾವುದನ್ನೂ ತುಲನೆ ಮಾಡದೆ ಸಮತೋಲನದಲ್ಲಿ ಬದುಕಿದರೆ ಜನಪದರು ಹೇಳುವಂತೆ ಆದಾವ ನಮ ಜೋಳ ಉಳಿದಾವ ನಮ ಹಾಡು… ಎಂಬಂತೆ ನಮ್ಮ ಜೀವನ ಅನ್ನುವ ಜೋಳವನ್ನು ಜಾಗರೂಕತೆಯಿಂದ ಆಯ್ದು ನುಣ್ಣಗಿನ ಹಿಟ್ಟನ್ನು ಮಾಡಿ   ಇರುವಷ್ಟು ದಿನ  ಸುಂದರವಾಗಿ ಬದುಕೋಣ.

                                 ವಾಸಂತಿ ಅಂಬಲಪಾಡಿ





























































































































































































































error: Content is protected !!
Scroll to Top