ನ್ಯೂಸ್ ಕಾರ್ಕಳ ವಿಶೇಷ ಸಂದರ್ಶನ
ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪ್ರಸ್ತುತ ಏನು ಮಾಡುತ್ತಿದ್ದಾರೆ ? ಅವರ ಮುಂದಿನ ರಾಜಕೀಯ ನಿಲುವು-ಒಲವೇನು ? ಎನ್ನುವ ಕುರಿತು ಅವರೊಂದಿಗೆ ನಡೆಸಿದ ಎಕ್ಸ್‌ಕ್ಲೂಸಿವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಪೊಲೀಸ್ ಇಲಾಖೆಯ ಘನತೆ, ಗೌರವವನ್ನು ಹೆಚ್ಚಿಸಿದ ಅಪ್ಪಟ ಅಪರಂಜಿ ಅಣ್ಣಾಮಲೈ. ತನ್ನ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಔದಾರ್ಯತೆ, ಮಾನವೀಯತೆಯ ಮೂಲಕವೇ ಇಡೀ ಕರ್ನಾಟಕದಾದ್ಯಂತ ಮನೆ ಮಾತಾದವರು. ತಮಿಳುನಾಡಿನ ಕೊಯಮ್ಮತ್ತೂರು ಕರೂರು ಮೂಲದ ಅಣ್ಣಾಮಲೈ ತನ್ನ ವೃತ್ತಿ ಜೀವನ ಆರಂಭಿಸಿರುವುದು ಕಾರ್ಕಳದಿಂದ. ಕಾರ್ಕಳದ ಕುರಿತು ವಿಶೇಷ ಪ್ರೀತಿ, ಅಭಿಮಾನ ಹೊಂದಿರುವ ಅಣ್ಣಾಮಲೈ ನ್ಯೂಸ್ ಕಾರ್ಕಳದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹೇಗಿದ್ದೀರಿ ಸರ್ ? ಪ್ರಸ್ತುತ ಏನು ಮಾಡುತ್ತಿರುವಿರಿ?
ಚೆನ್ನಾಗಿದ್ದೀನಿ… ಈಗ “ವಿ ದ ಲೀಡರ್ ಫೌಂಡೇಷನ್” ರನ್ ಮಾಡುತ್ತಾ ಇದ್ದೇವೆ. ಕೃಷಿಕರು, ಯುವಕರಿಗೆ ಆ ಮೂಲಕ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇವೆ. ವಿಶೇಷವಾಗಿ ಸಾವಯವ ಕೃಷಿಗೆ ಒತ್ತು ನೀಡುವುದು. ಯುವಕರಿಗೆ ಕೌಶಲ ಹಾಗೂ ನಾಯಕತ್ವ ತರಬೇತಿ ನೀಡುವುದು ನಮ್ಮ ಉದ್ದೇಶ. ಸುಮಾರು 6 ಸಾವಿರ ಮಂದಿ ಫೌಂಡೇಷನ್ ಮೂಲಕ ಸ್ವಯಂ ಸೇವಕರಾಗಿ ದುಡಿಯುತ್ತಿದ್ದು, ಕೊರೊನಾ ವಾರಿಯರ್ಸ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇವೆ.
ಕಾರ್ಕಳದಲ್ಲಿ ಕಾರ್ಯನಿರ್ವಹಿಸಿದ್ದ ಸಂದರ್ಭದ ಅನುಭವ
ಕಾರ್ಕಳ ಅತ್ಯಂತ ಸುಂದರ ಸ್ಥಳ. ಇಲ್ಲಿನ ಜನತೆ ತುಂಬಾನೆ ಒಳ್ಳೆಯವರು. ಬುದ್ಧಿವಂತರು. ವಿದ್ಯಾವಂತರು. ನನ್ನ ಬೆಸ್ಟ್ ಫ್ರೆಂಡ್ಸ್ ಎಲ್ಲರೂ ಅಲ್ಲೇ ಇದ್ದಾರೆ. ಇಲ್ಲಿನ ಬಾಹುಬಲಿ ಬೆಟ್ಟ, ವೆಂಕಟರಮಣ ದೇವಸ್ಥಾನ, ಅತ್ತೂರು ಚರ್ಚ್ ನನ್ನ ಮೆಚ್ಚಿನ ಧಾರ್ಮಿಕ ಕೇಂದ್ರಗಳು. ನನ್ನ ಕೆರಿಯರ್ ಕಾರ್ಕಳದಿಂದ ಪ್ರಾರಂಭವಾಗಿದ್ದು, ನನ್ನ ಬೆಳವಣಿಗೆಗೆ ಅದೇ ಅಡಿಪಾಯ. ನಾನಿಂದು ಏನಾಗಿದ್ದೇನೋ ಅದಕ್ಕೆ ಕಾರ್ಕಳವೇ ಕಾರಣ. ಅಲ್ಲಿ ಕಾರ್ಯನಿರ್ವಹಿಸಿದ ಸಂದರ್ಭವನ್ನು ಬಹಳಷ್ಟು ಎಂಜಾಯ್ ಮಾಡಿದ್ದೇನೆ.
ಪೊಲೀಸ್ ಇಲಾಖೆಯಲ್ಲಿಯೇ ಇದ್ದು ಸಾಕಷ್ಟು ಸುಧಾರಣೆ ತರಲು ತಮಗೆ ಅವಕಾಶವಿತ್ತಾದರೂ ತಾವು ರಾಜೀನಾಮೆ ನೀಡಿದ್ದಾದರೂ ಏಕೆ ?
ನಾನು ಕೈಗೊಂಡ ಕೈಲಾಸ ಯಾತ್ರೆ ಮತ್ತು ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಕಾಲಿಕ ಮರಣ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ಲೈಫ್ ಅನ್ನು ಬೇರೆ ರೀತಿಯಲ್ಲಿ ನೋಡೋಕೆ ಶುರು ಮಾಡಿದೆ. ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ.
ರಾಜೀನಾಮೆ ನೀಡಿರುವ ಕುರಿತು ಏನನ್ನಿಸುತ್ತಿದೆ ? ತಮ್ಮ ನಿರ್ಧಾರದ ಕುರಿತು ಪಶ್ಚಾತ್ತಾಪವಿದೆಯೇ ಅಥವಾ ಸಂತಸವಿದೆಯೇ?
ಯುವ ಸಮೂಹದೊಂದಿಗೆ ಬೆರೆತು ಕೆಲಸ ಮಾಡಬೇಕು. ಅವರಿಗೆ ಉತ್ತಮ ಕೌಶಲ ನೀಡಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕೆಂಬ ನಿಟ್ಟಿನಲ್ಲಿ ಹತ್ತಾರು ಕಾರ್ಯಕ್ರಮ ರೂಪಿಸಿದ್ದು, ಅದಕ್ಕಾಗಿ ಸಮಯ ನೀಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದೆ. ಸೊ ಹ್ಯಾಪಿ.
ನೀವು ಪೊಲೀಸ್ ಇಲಾಖೆಯಲ್ಲೇ ಇರಬೇಕಿತ್ತು ಅನ್ನುವುದು ಅನೇಕರ ಅಭಿಪ್ರಾಯ. ಈ ಕುರಿತು ಏನಂತೀರಿ ಸರ್ ?
ಹೌದು. ಹಲವಾರು ಮಂದಿ ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವರು ಉತ್ತಮ ನಿರ್ಧಾರ ತಗೊಂಡಿದ್ದೀರಿ ಅನ್ನುತ್ತಾರೆ. ನನ್ನ ಮೇಲಿನ ಪ್ರೀತಿಗೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತಿದ್ದೇನೆ.
ವ್ಯವಸ್ಥೆಯ ಬದಲಾವಣೆಯಲ್ಲಿ ಯುವ ಜನತೆಯ ಪಾತ್ರವೇನು?
ಯುವಕರಿಂದ ಆಮೂಲಾಗ್ರ ಬದಲಾವಣೆ ಸಾಧ್ಯ. ದೃಢ ವಿಶ್ವಾಸದಿಂದ ಯುವಕರು ಮುಂದುವರಿಯಬೇಕು. ಕೃಷಿ, ಉದ್ಯಮ ಯಾವುದೇ ಕಾರ್ಯವಾಗಲಿ ಅದನ್ನು ಅತ್ಯಂತ ಸೀರಿಯಸ್ ಆಗಿ ಮಾಡಬೇಕು. ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಮುಖ್ಯವಲ್ಲ. ಮಾಡುವ ಕೆಲಸದಲ್ಲಿ ಪ್ರೀತಿಯಿರಬೇಕು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆಸಕ್ತಿಯುಳ್ಳವರಿಗೆ ಏನು ಸಲಹೆ ನೀಡಲು ಬಯಸುತ್ತೀರಿ ?
ಒತ್ತಡವಿಲ್ಲದೇ ಓದುವುದು. ಯೋಗ, ಧ್ಯಾನ ಇವುಗಳ ಮೂಲಕ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವುದು ಮತ್ತು ಕಠಿನ ದುಡಿಮೆಯಲ್ಲಿ ನಂಬಿಕೆಯಿಡುವುದು ಬಹಳ ಮುಖ್ಯ .
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ಸುಧಾರಣೆ ತರಲು ಸಾಧ್ಯ ?
ಪ್ರತಿಯೊಂದು ಓಟಿಗೆ ಬೆಲೆಯಿದೆ. ಆಯ್ಕೆಯಾದ ಜನಪ್ರತಿನಿಧಿಯನ್ನು ಗಮನಿಸುತ್ತಿರಬೇಕು. ಆತನ ಉತ್ತರದಾಯಿತ್ವ ಮತ್ತು ಬದ್ಧತೆಯನ್ನುಪರಿಶೀಲಿಸುತ್ತಿರಬೇಕು. ಚುನಾವಣೆಯಲ್ಲಿ ಕ್ರಿಮಿನಲ್ ಹಿನ್ನೆಲೆಯಿಲ್ಲದ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು.
ಮಧುಕರ್ ಶೆಟ್ಟಿಯವರೊಂದಿಗಿನ ಒಡನಾಟದ ಕುರಿತು ಏನು ಹೇಳೋಕೆ ಬಯಸುತ್ತೀರಾ ?
ಮಧುಕರ್ ಶೆಟ್ಟಿ ಸಾರ್ ಒನ್ ಆಫ್ ದಿ ಬೆಸ್ಟ್ ಪೊಲೀಸ್ ಆಫೀಸರ್. ಅವರಿಗಿದ್ದ ಇಂಟೆಗ್ರಿಟಿ ಮತ್ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಅವರೇ ನಮಗೆಲ್ಲ ಸ್ಫೂರ್ತಿ. ಒಳ್ಳೆಯವರನ್ನು ದೇವರು ಬಹಳ ಬೇಗ ಕರೆದುಕೊಂಡ.
ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವ ಜವಾಬ್ದಾರಿ ಅಣ್ಣಾಮಲೈ ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೌದಾ?
ಯಾವ ಪಕ್ಷದ ಕೆಲಸವೂ ಇಲ್ಲ ಸರ್. ಕೃಷಿ ಕೆಲಸ ಮಾಡಿಕೊಂಡು ಆರಾಮವಾಗಿದ್ದೇನೆ. ದೇವರು ಸೂಚಿಸಿದ ದಾರಿಯಲ್ಲಿ ಮುಂದುವರಿಯುತ್ತಿದ್ದೇನೆ. ಸಮಯ ಸಂದರ್ಭ ಅದನ್ನೆಲ್ಲ ನಿರ್ಧರಿಸಲಿದೆ.
ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಒತ್ತಡಗಳಿಂದಾಗಿ ಉಸಿರುಕಟ್ಟಿಸುವ ವಾತಾವರಣವಿದೆಯೇ ?
ಕರ್ನಾಟದಲ್ಲಿ ಅಂತಹ ಪರಿಸ್ಥಿತಿ ಖಂಡಿತ ಇಲ್ಲ. ಕಾರ್ಕಳದಲ್ಲಿ ನಾನು ಕಾರ್ಯನಿರ್ವಹಿಸಿದ ಸಂದರ್ಭ ಶಾಸಕರಾದ ಸುನಿಲ್ ಕುಮಾರ್ ಮತ್ತು ಮಾಜಿ ಶಾಸಕರಾಗಿದ್ದ ಗೋಪಾಲ ಭಂಡಾರಿ ಇಬ್ಬರೂ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು.
ಮುಂದಿನ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆಯೇ ಎಂಬ ನ್ಯೂಸ್ ಕಾರ್ಕಳ ಡಾಟ್ ಕಾಮ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಅಂತಹ ಯೋಚನೆಯೇ ಇಲ್ಲವೆಂದರು. ಒಂದು ವೇಳೆ ಬಿಜೆಪಿ ಆಫರ್ ನೀಡಿದಲ್ಲಿ ಎಂದಾಗ ಖಂಡಿತವಾಗಿಯೂ ಉಡುಪಿಯಿಂದ ಸ್ಪರ್ಧಿಸಲ್ಲವೆಂದರು.