ಬಜಗೋಳಿ, ಅಜೆಕಾರು, ದೊಂಡೆರಂಗಡಿ ಆರೋಗ್ಯ ಕೇಂದ್ರದ ಮೇಲ್ದರ್ಜೆಗೂ ಬೇಡಿಕೆ
ಕಾರ್ಕಳ : ಕಾರ್ಕಳ ಸಾರ್ವಜನಿಕ ಸರಕಾರಿ ಅಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು.
ಆ. 8ರಂದು ಕಾರ್ಕಳ ಕಾಂಗ್ರೆಸ್ ಕಚೇರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಆರೋಗ್ಯ ಸಚಿವರಾಗಿದ್ದ ಸಂದರ್ಭ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 9 ಕೋಟಿ ರೂ. ಅನುದಾನ ಒದಗಿಸಿದ್ದೀರಿ. ಆದರೆ, ಇದೀಗ ಆಸ್ಪತ್ರೆಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಶೀಘ್ರವಾಗಿ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದರು.
ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯರಿರುವುದಿಲ್ಲ. ಮಕ್ಕಳ ವಿಭಾಗ, ಸ್ಕ್ಯಾನಿಂಗ್ ಮತ್ತು ಎಕ್ಸ್ರೇ ವಿಭಾಗದಲ್ಲಿ ವೈದ್ಯರ ಹಾಗೂ ಸಿಬಂದಿ ಕೊರತೆಯಿದೆ. ಸರಕಾರಿ ರಜಾ ದಿನಗಳಲ್ಲಿ ವೈದ್ಯರ ಅಲಭ್ಯ ಮೊದಲಾದ ಸಮಸ್ಯೆಗಳನ್ನು ಮನವಿಯಲ್ಲಿ ಉಲ್ಲೆಖಿಸಲಾಗಿದೆ.
ತಾಲೂಕಿನ ಬಜಗೋಳಿ ಮತ್ತು ಅಜೆಕಾರು ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಮತ್ತು ದೊಂಡೆರಂಗಡಿ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕೂ ಮನವಿ ಮಾಡಿಕೊಳ್ಳಲಾಗಿದೆ.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹಾಗೂ ಬ್ಲಾಕ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಇಂಟಕ್ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ, ಕೆ.ಎಂ.ಎಫ್. ನಿರ್ಧೇಶಕ ಸುಧಾಕರ್ ಶೆಟ್ಟಿ, ಪ್ರಥ್ವಿರಾಜ್ ಜೈನ್, ಸದಾನಂದ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿದ್ದರು.






































































