ಕಾರ್ಕಳ : ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಮಟ್ಟದ ಮಳೆ ಹಾನಿ ಪರಿಶೀಲನಾ ಸಭೆ‌

ಕಾರ್ಕಳ : ಅಧಿಕಾರಿಗಳು ಬುದ್ದಿವಂತಿಕೆಯಿಂದ ಮಾತ್ರವಲ್ಲ, ಹೃದಯ ವಂತಿಕೆಯಿಂದಲೂ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ಉಡುಪಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.
ಅವರು ಆ. 8ರಂದು ಕಾರ್ಕಳ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮಳೆ ಹಾನಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಸರಕಾರದ‌ ಮುಖವಾಣಿಯಿದ್ದಂತೆ. ಸರಕಾರ‌ ಮತ್ತು ಜನಪ್ರತಿನಿಧಿಗಳ‌ ನಡುವಿನ ಕೊಂಡಿಯಾಗಿರುವ ಅಧಿಕಾರಿಗಳು ಪ್ರಾಮಾಣಿಕವಾಗಿ, ಕ್ರಿಯಾಶೀಲವಾಗಿ‌ ಕಾರ್ಯನಿರ್ವಹಿಸಬೇಕು. ಸಾಮಾನ್ಯವಾಗಿ ಪ್ರಾಕೃತಿಕ ವಿಕೋಪಕ್ಕೆ ಹಾನಿಯಾಗುವುದು ಬಡವರ ಮನೆಯೇ ಹಾಗಿರುವಾಗ ಅಧಿಕಾರಿಗಳು ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಲಾಖೆ ಪ್ರಕ್ರಿಯೆಗಳ ಜೊತೆಗೆ ಸಾಂತ್ವನ ಹೇಳಿ ಹೃದಯವಂತಿಕೆಯಿಂದ ಕಾರ್ಯನಿರ್ವಹಿಸಬೇಕು. ದಿನದ 24 ಗಂಟೆಯೂ ಜನರ ಕರೆಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್ ಇಲಾಖೆಗೆ ಅಭಿನಂದನೆ
ಆ. 7ರಂದು ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಕಾರ್ಯವೈಖರಿ ಅಭಿನಂದನಾರ್ಹ. ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಕ್ರಿಮಿನಲ್‌ಗಳು ಕರ್ನಾಟಕ್ಕೆ ಬಂದರೆ ಉಳಿಗಾಲವಿಲ್ಲ ಎಂದು ಪೊಲೀಸರು ತೋರಿಸಿಕೊಟ್ಟಿದ್ದಾರೆ ಎಂದರು.

ಇಲಾಖಾ ವರದಿ
ಕೃಷಿ ಇಲಾಖಾ ಅಧಿಕಾರಿ ಮಾಹಿತಿ ನೀಡಿ, ಕಾರ್ಕಳದಲ್ಲಿ ಭತ್ತ ಬೆಳೆಗೆ ಪ್ರಾಧಾನ್ಯತೆಯಿದ್ದು, ಈ ಬಾರಿ 4002 ಹೆಕ್ಟರ್‌ ಪ್ರದೇಶದಲ್ಲಿ ಬೇಸಾಯ ಮಾಡಲಾಗಿದೆ. ಇನ್ನು ಮಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಆದರೆ, ತಡವಾಗಿ ಮಳೆಯಾದ ಕಾರಣ ನೇರವಾಗಿ ಭಿತ್ತನೆ ಕಾರ್ಯವನ್ನೇ ಮಾಡಿದ್ದಾರೆ ಎಂದರು. ತೋಟಗಾರಿಕೆ ಇಲಾಖಾಧಿಕಾರಿ ಮಾಹಿತಿ ನೀಡಿ 18 ಸಾವಿರ ಹೆಕ್ಟೇರ್ ಬೆಳೆಯಾಗಿದ್ದು, 6.2 ಹೆಕ್ಟೇರ್ ಡ್ಯಾಮೇಜ್ ಆಗಿದೆ. ಈ ಬಗ್ಗೆ ಈಗಾಗಲೇ ವರದಿ ಸಲ್ಲಿಕೆಯಾಗಿದೆ. ಇನ್ನು ಈ ಸಾಲಿನಲ್ಲಿ 4188 ವಿಮೆ ನೋಂದಣಿಯಾಗಿದೆ ಎಂದರು. ವಿಮೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಮಾಡಿ ಎಂದು ಅಧಿಕಾರಿಗೆ ಸಚಿವರು ತಿಳಿಸಿದರು.

ನಿಮ್ಮ ಕಿಸೆಯಿಂದಲ್ಲ ಸರಕಾರದಿಂದ ನಿಡೋದು
ಕಾರ್ಕಳದಲ್ಲಿ 59 ಮನೆ ಭಾಗಶ: ಹಾನಿಗೊಳಯಾಗಿದೆ. ಎಲ್ಲಾ ಮನೆಗಳಿಗೂ ಪರಿಹಾರ ಒದಗಿಸಲಾಗಿದೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ತಿಳಿಸಿದರು. ಈ ವೇಳೆ ಸಚಿವರು ಪ್ರತಿಕ್ರಿಯಿಸಿ ಹೆಚ್ಚಾಗಿ ಪಾಪದವರ ಮನೆಯೇ ಹಾನಿಗೊಳಗಾಗುವುದು. ಆದ್ದರಿಂದ ದೊಡ್ಡ ಮಟ್ಟದಲ್ಲಿ ಪರಿಹಾರ ಒದಗಿಸಿಕೊಡಿ. ಯಾಕೆಂದರೆ ನಿಮ್ಮ ಕಿಸೆಯಿಂದ ಅಲ್ಲ, ಸರಕಾರದಿಂದ ಹಣ ಪಾವತಿಯಾಗುವುದು ಎಂದರು.

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ
ಪುರಸಭಾ ವ್ಯಾಪ್ತಿಯಲ್ಲಿ 700 ಬೀದಿ ನಾಯಿಗಳಿವೆ ಎಂದು ಪಶುವೈದ್ಯಕೀಯ ಇಲಾಖಾಧಿಕಾರಿ ತಿಳಿಸಿದಾಗ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಮುಂದಿನ ಐದು ಹತ್ತು ವರ್ಷದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದ ಸಚಿವರು ಎನ್‌ಜಿಓ ಮೂಲಕ ಸಂತಾನ ಹರಣ‌ ಪ್ರಕಿಯೆ ಮಾಡಿಸಿ. ಇಲ್ಲವಾದಲ್ಲಿ ಪೌರಕಾರ್ಮಿಕರಿಗೆ ತರಬೇತಿ‌ ನೀಡಿ. ಪೌರಕಾರ್ಮಿಕರು ಮಾಡಿದ್ದಲ್ಲಿ ಅವರಿಂದ ದರ್ಮಕ್ಕೆ ಮಾಡಿಸಬೇಡಿ ಬದಲಾಗಿ ಅವರಿಗೆ ಅದಕ್ಕಾಗಿ ಬೇರೆಯೇ ಸಂಬಳ ನೀಡಿ ಎಂದರು.

ಕಾರ್ಕಳ ತಾಲೂಕಿನಲ್ಲಿ 342 ತರಗತಿ ಕೊಠಡಿಗಳು ಹಾಗೂ 50 ಆವರಣ ಗೋಡೆಗಳು ಅಪಾಯಕಾರಿಯಾಗಿದೆ ಎಂದು ಡಿಡಿಪಿಐ ತಿಳಿಸಿದಾಗ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಿ ಎಂದರು. 232 ಅಂಗನವಾಡಿ ಕೇಂದ್ರಗಳಿದ್ದು ಅಪಾಯಕಾರಿಯಿದ್ದ 2 ಕೇಂದ್ರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಹೇಳಿದರು.

ವಿದ್ಯುತ್‌ ಕಂಬ ಕ್ವಾಲಿಟಿ ಇಲ್ವಾ ?
ಮೆಸ್ಕಾಂ ಅಧಿಕಾರಿ ಈ ಬಾರಿ 955 ವಿದ್ಯುತ್‌ ಕಂಬಗಳು ತುಂಡಾಗಿದೆ ಎಂದಾಗ ಅದೇನು ಕಂಬ ಕ್ವಾಲಿಟಿ ಇಲ್ವಾ ಅಥವಾ ಮರ ಗಟ್ಟಿ ಇದೆಯೇ ಎಂದು ಹಾಸ್ಯದಿಂದ ಪ್ರತಿಕ್ರಿಯಿಸಿದ ಸಚಿವರು ದುರಸ್ತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಅರಣ್ಯ ಅಧಿಕಾರಿಗಳಲ್ಲಿ ಸಚಿವರು ಮರ ತೆರವು ಕಾರ್ಯಾಚರಣೆ ಬಗ್ಗೆ ಕೇಳಿದಾಗ ಶಾಸಕ ಸುನಿಲ್‌ ಕುಮಾರ್‌ ಅವರು ಮಾತನಾಡಿ ಈ ಬಾರಿ ಮರ ತೆರವಿಗೆ ಎಷ್ಟು ಅರ್ಜಿಗಳು ಬಂದಿದೆ. ಎಲ್ಲಾ ತೆರವು ಕಾರ್ಯ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು. ಅರಣ್ಯ ಅಧಿಕಾರಿ ತೆರವು ಕಾರ್ಯ ಮಾಡಲಾಗುತ್ತಿದೆ ಎಂದು ಉತ್ತರಿಸಿದಾಗ, ನಿನ್ನೆ ಹೆಬ್ರಿಯಲ್ಲಿ ರಸ್ತೆ ಬದಿಯಲ್ಲಿನ ಮರ ಕಾರಿನ ಮೇಲೆ ಬಿದ್ದು ವ್ಯಕ್ತಿ ಸಾವನಪ್ಪಿದ್ದು ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಮುಂದೆ ಈ ರೀತಿಯ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ದಲ್ಲಿ ನಿಮ್ಮ ಮೇಲೆಯೇ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಸಚಿವರು ಮರ ಬಿದ್ದು ಸಾವು ಸಂಭವಿಸುತ್ತದೆ ಎಂದಾದರೇ ನೀವು ಏನು ಕೆಲಸ ಮಾಡುತ್ತಿದ್ದೀರಿ ? ಯಾರೇ ಇರಲಿ ಪ್ರಾಣಕ್ಕೆ ಬೆಲೆಯಿದೆ. ಯಾವುದೇ ನಿರ್ಲಕ್ಷ್ಯ ಬೇಡ. ಅಪಾಯಕಾರಿ ಮರ ತೆರವುಗೊಳಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಅಧಿಕಾರಿ ಮೇಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದಾಗ ಫೂಟ್ಬಾಲ್ ಆಡಬೇಡಿ ಬದಲು ಗೋಲ್ ಹಾಕಿ ಎಂದು ಸಚಿವರು ಎಚ್ಚರಿಸಿದರು.

Who is the best officer ?
Who is the best officer (ಯಾರು ಉತ್ತಮ ಅಧಿಕಾರಿ) ಎಂದು ಪ್ರಶ್ನಿಸಿದ ಖಾದರ್‌ ಈ ವರ್ಷ ಇದ್ದ ಸಮಸ್ಯೆ ಮುಂದಿನ ವರ್ಷ ಇರದಂತೆ ಮಾಡುವವ ನಿಜವಾಗಿ ಬೆಸ್ಟ್‌ ಆಫೀಸರ್‌ ಎಂದರು.

ಅಗ್ನಿಶಾಮಕ ಠಾಣಾಧಿಕಾರಿಯವರು ಕಾರ್ಕಳ – ಹೆಬ್ರಿ ತಾಲೂಕಿಗೆ ಒಂದೇ ಠಾಣೆಯಿದ್ದು ಒಂದೇ ವಾಹನವಿದೆ. ಹೆಬ್ರಿಯಲ್ಲಿ ಠಾಣೆಗೆ ಅನುದಾನ ಮಂಜೂರಾಗಿದೆ. ಆದರೆ‌ ಅರಣ್ಯ ಇಲಾಖೆ ತೊಡಕಿನಿಂದಾಗಿ ಠಾಣೆ ನಿರ್ಮಾಣವಾಗಿಲ್ಲ ಎಂದರು. ಈ ಬಗ್ಗೆ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಂದು ಸಚಿವರು ಸೂಚಿಸಿದರು.
ಕಾರ್ಕಳ ನಗರಕ್ಕೆ ನೀರು ಒದಗಿಸುವ ಮುಂಡ್ಲಿ ಡ್ಯಾಂ ಬ್ರಿಡ್ಜ್, ನಿಟ್ಟೆ ಪರಪ್ಪಾಡಿ ಬ್ರಿಡ್ಜ್‌ ಸೇರಿದಂತೆ ಒಟ್ಟು 5 ಬ್ರಿಡ್ಜ್‌ಗಳ ದುರಸ್ತಿಗೆ 2 ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದು ಪಿಡಬ್ಲೂಡಿ ಅಧಿಕಾರಿ ಹೇಳಿದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಂಚಾಯತ್‌ಗಳಲ್ಲಿ ಅಗತ್ಯವಿರುವುದನ್ನು ಬಿಟ್ಟು ಬೇರೆ ಯಾವುದಕ್ಕೂ ಖರ್ಚು ಮಾಡಬೇಡಿ. ಚುನಾವಣೆ ಬಳಿಕ ಹೊಸ ಪಂಚಾಯತ್ ಬಾಡಿ ಬಂದಾಗ ಅವರಿಗೂ ಅನುದಾನವಿರಲಿ ಎಂದರು. ಸಚಿವರು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಅಧಿಕಾರಿ, ಮೈನರ್‌ ಇರಿಗೇಷನ್‌ ಅಧಿಕಾರಿಗಳಿಂದ ಇಲಾಖಾ ಸಂಬಂಧಪಟ್ಟಂತೆ ಮಾಹಿತಿ ಪಡೆದರು.

ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್‌ ಹೆಗ್ಡೆ ಅವರು ಪಳ್ಳಿ – ಕಣಜಾರು ವ್ಯಾಪ್ತಿಯ ಸರಕಾರಿ ಬಸ್‌ ಬಂದ್ ಆಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ‌ ಸಲ್ಲಿಸಲಾಗಿದೆ. ಆದರೆ ಪರಿಹಾರವಿಲ್ಲ ಎಂದಾಗ ಸರಕಾರದ ಯೋಜನೆ ಜನರಿಗೆ ಸೂಕ್ತವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಡಿಸಿಯವರಿಗೆ ಸಚಿವರು ಸೂಚಿಸಿದರು.
ಪಶ್ಚಿಮ ಘಟ್ಟವನ್ನು ಸೂಕ್ಷ್ಮಪ್ರದೇಶ ಎಂದು ಘೋಷಿಸಿರುವ ಕುರಿತು ರಾಜ್ಯ ಸರಕಾರದ ನಿಲುವಿನ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಾದರ್‌ ಕಾಡಿನಲ್ಲಿ ಜೀವಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ‌ ವಿ. ಸುನಿಲ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ, ಜಿಲ್ಲಾಧಿಕಾರಿ ಸ್ವರೂಪ‌ ಟಿ.ಕೆ., ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್ ವೇದಿಕೆಯಲ್ಲಿದ್ದರು. ‌





























error: Content is protected !!
Scroll to Top