ನಿವೃತ್ತ ಐಎಎಸ್‌ ಅಧಿಕಾರಿ ಸದಾಶಿವ ಪ್ರಭು ಅವರಿಗೆ ಅಭಿನಂದನೆ

ಕಾರ್ಕಳ : ಸದಾಶಿವ ಪ್ರಭು ಅವರು ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಜನಮೆಚ್ಚುಗೆ ಗಳಿಸುವುದರೊಂದಿಗೆ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.
ಅವರು ಆ. 3ರಂದು ಕಡ್ತಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ನಿವೃತ್ತ ಐಎಎಸ್‌ ಅಧಿಕಾರಿ ಸದಾಶಿವ ಪ್ರಭು ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲಿ ಸದಾಶಿವ ಪ್ರಭು ಅವರ ಕಾರ್ಯಶೈಲಿ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಹೇಳಿದರು.

ಕಾರ್ಕಳ ತಾಲೂಕಿನ ಎಳ್ಳಾರೆಯ ಬಿ. ಸದಾಶಿವ ಪ್ರಭು ವಾಯುಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಕಿರಿಯ ವಾರಂಟ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. ನಂತರ 2005ರಲ್ಲಿ ಮಂಗಳೂರಿನ ಪೊಲೀಸ್ ಸಬ್ ಇನ್ಸೆಕ್ಟರ್ ಆಗಿ ನೇಮಕಾತಿ ಹೊಂದಿದರು. 2006 ಬ್ಯಾಚ್‌ನ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ, 2008ರಲ್ಲಿ ಸಹಾಯಕ ಅಯುಕ್ತರಾಗಿ ಕೆ.ಎ.ಎಸ್ ಸೇವೆಗೆ ಸೇರ್ಪಡೆಗೊಂಡರು. ಬಿಜಾಪುರದಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿದ ಬಳಿಕ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಾಯಕ ಕಮಿಷನ‌ರ್ ಆಗಿ, ನಂತರ ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ, ಬಳಿಕ ಐಎಎಸ್ ಪದೋನ್ನತಿ ಪಡೆದು ಬೆಂಗಳೂರಿನ ಮೇಲ್ಮನವಿ ನ್ಯಾಯಮಂಡಳಿ ಸದಸ್ಯರಾಗಿ ಅನಂತರ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡು ಮೇ 31ರಂದು ನಿವೃತ್ತಿ ಹೊಂದಿರುತ್ತಾರೆ.

ಅಜೆಕಾರು ನಂದಕುಮಾರ್ ಹೆಗ್ಡೆ ಅಭಿನಂದನಾ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಮೋದ್ ಕುಮಾರ್ ಹೆಗ್ಡೆ ಕಡ್ತಲ, ಧಾರ್ಮಿಕ ಮುಖಂಡ ಪ್ರಶಾಂತ್ ಬೆಳ್ಳಿರಾಯ, ಮಂಗಳೂರು ಎಂಆರ್‌ಪಿಎಲ್ ವ್ಯವಸ್ಥಾಪಕ ಅಶೋಕ್ ಕುಮಾರ್ ಹೆಗ್ಡೆ, ಲಕ್ಷ್ಮೀ ಜನಾರ್ಧನ ದೇವಸ್ಥಾನದ ಟ್ರಸ್ಟಿ ಮುಂಡಾರು ಪ್ರಸನ್ನ ಕುಮಾರ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ದೀಪಕ್ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಸುಕೇಶ್ ಹೆಗ್ಡೆ ಅಭಿನಂದನಾ ಪತ್ರ ವಾಚಿಸಿದರು. ಸತೀಶ್ ಪೂಜಾರಿ ವಂದಿಸಿದರು.

















































error: Content is protected !!
Scroll to Top