ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಕಾಯ್ದೆ 2025

ನಮ್ಮ ಭಾರತ ದೇಶದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ನಾಗರಿಕನು ಸಮಾನವಾದ ಘನತೆ ಮತ್ತು ಗೌರವವನ್ನು ಹೊಂದಲು ಹಕ್ಕುಳ್ಳವನಾಗಿರುತ್ತಾನೆ. ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವು ಸಂವಿಧಾನದ ಭಾಗ-||| ರಲ್ಲಿ ಪ್ರತಿಷ್ಟಾಪಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನು ಉಳಿದಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು 2025 ರಲ್ಲಿ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಕಾಯ್ದೆ 2025 ಎಂಬ ಕಾನೂನನ್ನು ಕರ್ನಾಟಕ ರಾಜ್ಯದಾದ್ಯಂತ ಜ್ಯಾರಿಗೆ ತಂದಿರುತ್ತದೆ.

ಈ ಕಾನೂನಿನ ನಿಯಮಾನುಸಾರದ ಪ್ರಕಾರ ಸಾಮಾಜಿಕ ಬಹಿಷ್ಕಾರದ ಕೃತ್ಯವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿರುತ್ತದೆ. ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾವುದೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರಿದರೆ ಅಥವಾ ಹೇರಲು ಕಾರಣನಾದರೆ ಅಥವಾ ಆಚರಿಸಿದರೆ, ಇಂತಹ ಅಪರಾಧವು ಸಾಭೀತಾದ್ದಲ್ಲಿ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸ ಅಥವಾ ಒಂದು ಲಕ್ಷ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಇವೆರಡರಲ್ಲಿ ಯಾವುದೇ ಪ್ರಕಾರದ ಅಥವಾ ಇವರೆಡರಿಂದಲೂ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಮಾತ್ರವಲ್ಲದೇ ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಸಮುದಾಯದ ಯಾವುದೇ ಸದಸ್ಯನ ಮೇಲೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸುವ ವಿಷಯದ ಮೇಲೆ ಅಭಿಪ್ರಾಯ ಅಥವಾ ಉದ್ದೇಶಪೂರ್ವಕ ಚರ್ಚೆಯೊಂದಿಗೆ ಒಟ್ಟುಗೂಡುವುದು, ಸಭೆ ಸೇರುವುದು ಅಥವಾ ಗುಂಪು ಗೂಡುವುದು ಈ ಕಾನೂನಿನ ಪ್ರಕಾರ ನಿಷೇದಿಸಲ್ಪಟ್ಟಿದ್ದು ಅಂಥ ಸಭೆ ಸೇರುವಿಕೆಯನ್ನು ಕರೆದಿರುವ ಅಥವಾ ಸಂಘಟಿಸಿರುವ ಪ್ರತಿ ವ್ಯಕ್ತಿಯನ್ನು ಮತ್ತು ಅದರಲ್ಲಿ ಭಾಗವಹಿಸಿರುವ ಅದರ ಪ್ರತಿ ಸದಸ್ಯನು ಸಹಾ ಅಪರಾಧ ನಡೆಸಿದಂತಾಗಿ ಶಿಕ್ಷೆಗೆ ಒಳಪಡಬೇಕಾಗುತ್ತದೆ.

ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ಯಾವುದೇ ಅಪರಾಧದ ಕೃತ್ಯ ನಡೆದ ಸಂದರ್ಭದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಟ್ಟ ಸಂತ್ರಸ್ತ ವ್ಯಕ್ತಿಯು ಅಥವಾ ಆತನ ಕುಟುಂಬದ ಯಾರೇ ಸದಸ್ಯನು ಅಪರಾಧ ನಡೆಸಿದವರ ವಿರುದ್ಧ ದೂರನ್ನು ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಸಂಬಂಧಪಟ್ಟ ಸರಹದ್ದಿನ ಪೋಲೀಸರಿಗೆ ಅಥವಾ ನೇರವಾಗಿ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೆಟರಿಗೆ ದೂರನ್ನು ದಾಖಲಿಸಬಹುದಾಗಿದೆ. ಅಥವಾ ಅಪರಾಧಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸ್ವೀಕರಿಸಿದ ಇನ್ಸ್ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ಪೋಲೀಸ್ ಅಧಿಕಾರಿಯು ಸಹಾ ಸ್ವಪ್ರೇರಿತ ಕ್ರಮವನ್ನು ಕೈಗೊಳ್ಳಬಹುದು.







































error: Content is protected !!
Scroll to Top