ಅಮರಾವತಿ : ಕೋವಿಡ್-19 ಹೆಮ್ಮಾರಿ ಇದೀಗ ಮತ್ತೆ ನೆರೆಯ ರಾಜ್ಯ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಕೊರೋನಾ ಪರಿಣಾಮ ಇಬ್ಬರು ಮೃತಪಟ್ಟಿದ್ದು, 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊರೋನಾ ಹೊಸ ರೂಪಾಂತರದ ಶಂಕೆ ಹಿನ್ನೆಲೆಯಲ್ಲಿ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಅಲ್ಲಿನ ಜಿಲ್ಲಾಡಳಿತ ಆದೇಶಿಸಿದೆ. ಹೀಗಾಗಿ ಇದೀಗ ಕೊರೋನಾ ಸಾರ್ವಜನಿಕರಲ್ಲಿ ಮತ್ತೆ ಆತಂಕ ಹೆಚ್ಚಿಸಿದೆ.
ರಾಜಂಪೇಟೆ ಮೂಲದ 52 ವರ್ಷದ ವ್ಯಕ್ತಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ವೆಲ್ಲೂರಿನ ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ಕಡಪ ವೈದ್ಯಕೀಯ ಕಾಲೇಜಿನ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಸದ್ಯ ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾರೆ. ಸೋಂಕು ಕಂಡು ಬಂದ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ.
ಕೋವಿಡ್ ಪಾಸಿಟಿವ್ ಪತ್ತೆಯಾದ ಸೋಂಕಿತರಲ್ಲಿ ಎಲ್ಲರೂ ಕೋವಿಡ್-19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಾಗಿದ್ದಾರೆ. ಒಬ್ಬರು ಮಾತ್ರ ಬೂಸ್ಟರ್ ಡೋಸ್ ಅನ್ನು ಸಹ ಪಡೆದುಕೊಂಡಿದ್ದರು.

ಸಾರ್ವಜನಿಕ ಸ್ಥಳ ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಪಡಿಸಿ ಅಗತ್ಯವಿದ್ದರೆ ಐಸೋಲೇಷನ್‌ಗೆ ಸ್ಥಳಾಂತರಿಸುವಂತೆ ಜಿಲ್ಲಾಡಳಿತವು ವೈದ್ಯಕೀಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.






































































