ಪ್ರಸಕ್ತ ಸನ್ನಿವೇಶದಲ್ಲಿ ರಾಷ್ಟ್ರಗಳ ನಡುವೆ ಮಿತ್ರತ್ವ -ಶತ್ರುತ್ವವನ್ನು ಉಂಟು ಮಾಡುವುದು ಕೇವಲ ಗಡಿ ಅಥವಾ ಜನಾಂಗ ಸಮಸ್ಯೆಗಳು ಅಲ್ಲ. ವಿಶ್ವ ವ್ಯಾಪಾರೀಕರಣವು ಇಂದು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ದೇಶಗಳ ನಡುವಿನ ಶತ್ರುತ್ವ ಮಿತ್ರತ್ವವನ್ನು ಅದುವೇ ನಿರ್ಧರಿಸುತ್ತದೆ. ಒಂದು ದೇಶದ ಆರ್ಥಿಕ ಸುಸ್ಥಿರತೆಯು ಆ ದೇಶಕ್ಕೆ ಹಲವು ಮಿತ್ರರನ್ನು ಹಾಗೂ ಬೆಂಬಲಿಗರನ್ನು ತಂದುಕೊಡುತ್ತದೆ. ಕ್ಷೀಣ ಆರ್ಥಿಕತೆಯು ನಮ್ಮ ದೇಶದ ಆಂತರಿಕವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳಲ್ಲಿ ಇನ್ನೊಂದು ದೇಶವು ಮೂಗು ತೋರಿಸುವುದಕ್ಕೆ ದಾರಿ ಮಾಡಿಕೊಡುತ್ತದೆ. ಎಲ್ಲಿಯ ತನಕ ಎಂದರೆ ಒಂದು ದೇಶದ ನಾಯಕತ್ವವನ್ನು ಇನ್ನೊಂದು ದೇಶ ನಿರ್ಧರಿಸುವಷ್ಟರಮಟ್ಟಿಗೆ ಇದು ಬೆಳೆದು ನಿಂತಿದೆ. ತಮ್ಮ ತಾಳಕ್ಕೆ ಕುಣಿಯುವ ವ್ಯಕ್ತಿಯನ್ನು ಇನ್ನೊಂದು ದೇಶದ ಗದ್ದುಗೆಯಲ್ಲಿ ಕೂರುವಂತೆ ಸನ್ನಿವೇಶವನ್ನು ನಿರ್ಮಾಣ ಮಾಡಿಸಿ ಆ ದೇಶದ ಆರ್ಥಿಕತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಆ ದೇಶವನ್ನು ಕೊಳ್ಳೆ ಹೊಡೆಯುವುದು ಹಾಗೂ ಬಲಿಷ್ಠವಾಗುವುದು 21ನೇ ಶತಮಾನದ ಹೊಸ ವೈಖರಿಯ ವಸಾಹತುಶಾಹಿ ಆಕ್ರಮಣ.
ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು ಅಲ್ಲಾಡಿಸುವ, ಕ್ಷೀಣಗೊಳಿಸುವ ಹಲವು ವಿದ್ಯಮಾನಗಳು ನಡೆದು ಹೋದವು. ವ್ಯಾಪಾರ ತೆರಿಗೆ, ತೈಲ, ಶಸ್ತ್ರಾಸ್ತ್ರಗಳ ವಿನಿಮಯ, ದೇಶದ ಆಂತರಿಕ ರಾಜಕೀಯದಲ್ಲಿ ವಿದೇಶಿಯ ಕಾಣದ ಕೈಗಳ ಹಸ್ತಕ್ಷೇಪ, ದೇಶದ ಷೇರುಮಾರುಕಟ್ಟೆಯನ್ನು ವಿಫಲಗೊಳಿಸುವಂತಹ ಪ್ರಬಲವಾದ ಪ್ರಕ್ರಿಯೆಗಳು, ರಾಷ್ಟ್ರದ ಭದ್ರ ಬುನಾದಿಗೆ ಅಗತ್ಯವಿರುವ ನಮ್ಮ ದೇಶದ ಪ್ರಮುಖ ಕೈಗಾರಿಕೆಗಳ ಕುರಿತಾಗಿ ವಿದೇಶಿ ಹಸ್ತಕ್ಷೇಪ, ಅಪಪ್ರಚಾರ, ದೇಶದ ಆಂತರಿಕ ಕಂಪನಿಗಳಿಗೆ ವಿದೇಶದ ನ್ಯಾಯಾಲಯಗಳಲ್ಲಿ ಕಾನೂನು ಮೊಕದ್ದಮೆಯನ್ನು ದಾಖಲಿಸುವುದು, ನಮ್ಮ ಆಹಾರವನ್ನು ಇತರೆ ದೇಶ ನಿರ್ಧರಿಸುವುದು, ಆಮದು ಸುಂಕ ತಾರತಮ್ಯ ಮತ್ತು ಸುಂಕವಿಧಿಸಿ ಬೆದರಿಸುವುದು, ಅಕ್ಕಪಕ್ಕದ ದೇಶಗಳಲ್ಲಿ ಅಸ್ತಿರತೆ ಉಂಟು ಮಾಡಿ ಭಾರತ ವಿರೋಧಿ ಶಕ್ತಿಗಳನ್ನು ಅಧಿಕಾರಕ್ಕೇರಿಸುವುದು, ಸಸ್ಯಮೂಲ ಸಸ್ಯಹಾರದ ಬದಲಿಗೆ ಹಿಂಸಾ ಮೂಲ ಮಾಂಸಹಾರವನ್ನು ನಮ್ಮ ದೇಶದ ಮಾರುಕಟ್ಟೆಯಲ್ಲಿ ಮಾರುವಂತಹ ಪ್ರಯತ್ನ, ನಮ್ಮ ರೈತರ ಬೆಳೆಗೆ ಪೆಟ್ಟು ನೀಡುವಂತಹ ವ್ಯಾಪಾರವನ್ನು ನಮ್ಮ ದೇಶದ ಮೇಲೆ ಹೇರುವಂತಹ ಪ್ರಯತ್ನ, ನಮ್ಮ ಧಾರ್ಮಿಕ ನಂಬಿಕೆಗಳಿಗೆ ಮಸಿ ಬಳಿಯಲು ಯತ್ನ ಇತ್ಯಾದಿ ಹತ್ತು ಹಲವು ದೊಡ್ಡಮಟ್ಟದ ಆಕ್ರಮಣಗಳನ್ನು ನಾವೆಲ್ಲರೂ ನೋಡುವಂತಾಯಿತು.
ಇಂತಹ ಪ್ರಯತ್ನಗಳು ನಡೆದಾಗ ಅವೆಲ್ಲವನ್ನೂ ಮೆಟ್ಟಿ ಬೆಳೆಯುವಂತಹ ಹಾಗೂ ರಾಷ್ಟ್ರದ ಆರ್ಥಿಕತೆಯನ್ನು ಪ್ರಬಲವಾಗಿ ಬೆಳೆಸುವಂತಹ ಕಾರ್ಯ ಕೇವಲ ಸರ್ಕಾರದಿಂದ ಸಾಧ್ಯವಾಗದು ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ವಿದೇಶಿ ಅನಗತ್ಯ ವಸ್ತುಗಳಿಗೆ ಭಾರತ ಮಾರುಕಟ್ಟೆಯಾಗುವಂತಹ ಪ್ರಯತ್ನಗಳನ್ನು ಕೇವಲ ಸರ್ಕಾರ ಮಾತ್ರ ನಿಯಂತ್ರಿಸಲಾಗದು. ಇಂತಹ ವಿಚಾರಗಳಲ್ಲಿ ಸರ್ಕಾರದ ಅತಿಯಾದ ಪ್ರಯತ್ನ ದೇಶ – ದೇಶಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗುತ್ತದೆ. ಸರ್ಕಾರ ನೇರವಾಗಿ ಇಂತಹ ಕೆಲವು ವಿಚಾರಗಳನ್ನು ತಡೆಯಲು ಅಣಿಯಾದರೆ ನಮಗೂ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ ಮತ್ತು ಅವರು ಕೂಡ ನಮ್ಮ ಮೇಲೆ ಅನಪೇಕ್ಷಿತ ಪ್ರತಿಕ್ರಿಯೆಯನ್ನು ನೀಡಬಹುದು. ಆಗ ಸಮಸ್ಯೆ ವಿಪರೀತವಾಗುತ್ತದೆ. ಈ ಸೂಕ್ಷ್ಮತೆಯನ್ನು ಇಂದು ಪ್ರಜೆಗಳು ಅರಿತು ದೇಶದ ಆರ್ಥಿಕತೆಯ ರಕ್ಷಣೆ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ನನ್ನ ಕೊಡುಗೆ ಏನಾಗಬೇಕು ಎಂದು ತಿಳಿದು ಕಾರ್ಯಪ್ರವೃತ್ತರಾಗುವುದು ಅವಶ್ಯ.

ವಿದೇಶಿ ವಿನಿಮಯ ಎಂದರೆ ಒಂದು ದೇಶದ ಕರೆನ್ಸಿಯ ಮೌಲ್ಯವನ್ನು ಇನ್ನೊಂದು ದೇಶದ ಕರೆನ್ಸಿ ಮೌಲ್ಯಕ್ಕೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ವಿನಿಮಯ ಮಾಡುವುದು. ಈ ವಿನಿಮಯ ಪ್ರಕ್ರಿಯೆಯಲ್ಲಿ ಒಂದು ದೇಶದ ಕರೆನ್ಸಿಯ ಮೌಲ್ಯಕ್ಕೆ ಇನ್ನೊಂದು ದೇಶದ ಕರೆನ್ಸಿಯ ಮೌಲ್ಯಕ್ಕಿರುವ ವ್ಯತ್ಯಾಸವನ್ನು ಆ ದೇಶದ ಆರ್ಥಿಕ ಸದೃಢತೆ ನಿರ್ಧರಿಸುತ್ತದೆ. ಪ್ರತಿ ರಾಷ್ಟವು ತನ್ನ ಅಗತ್ಯಕ್ಕೆ ಅನುಗುಣವಾಗಿ ಒಂದಷ್ಟು ಮೊತ್ತವನ್ನು ವಿದೇಶಿ ವಿನಿಮಯ ಸಂಗ್ರಹವಾಗಿ ಮೀಸಲಿಡುತ್ತದೆ. ಆ ಮೊತ್ತವು ಆ ದೇಶದ ಆರ್ಥಿಕ ಬಲವನ್ನು ಸೂಚಿಸುತ್ತದೆ. ಉದಾಹರಣೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹವು 650 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಈ ಸಂಗ್ರಹವನ್ನು ಆಮದುಗಳಿಗೆ ಪಾವತಿ ಮಾಡಲು, ಆರ್ಥಿಕ ಸಂಕಷ್ಟವನ್ನು ಎದುರಿಸಲು ಹಾಗೂ ರೂಪಾಯಿ ಮೌಲ್ಯ ದೃಢವಾಗಿಡಲು ಬಳಸಲಾಗುತ್ತದೆ. ಡಾಲರ್ ಬಹುತೇಕ ಎಲ್ಲಾ ರಾಷ್ಟ್ರಗಳ ವಿದೇಶಿ ವಿನಿಮಯಕ್ಕೆ ಬಳಸಲಾಗುತ್ತಿರುವ ಕಾರಣ ಅಮೆರಿಕನ್ ಡಾಲರನ್ನು ಎಲ್ಲಾ ದೇಶಗಳು ವಿದೇಶಿ ವಿನಿಮಯಕ್ಕೆ ಮೀಸಲಿಡುತ್ತದೆ. ಹೆಚ್ಚಿನ ವಿದೇಶಿ ವಸ್ತುಗಳ ಖರೀದಿಯು ಹೆಚ್ಚು ರೂಪಾಯಿ ಹಣವು ಡಾಲರ್ ಖರೀದಿಯ ಮೂಲಕ ವಿದೇಶಕ್ಕೆ ಹರಿದು ಹೋಗುವಂತೆ ಮಾಡುತ್ತದೆ. ಸ್ವದೇಶಿ ವಸ್ತುಗಳ ಖರೀದಿಯು ನಮ್ಮ ಹಣ ನಮ್ಮ ದೇಶದಲ್ಲಿಯೇ ಉಳಿಯುವಂತೆ ಮಾಡುತ್ತದೆ.
ಇದರಿಂದ
೧) ದೇಶದ ಒಳಗಿನ ಕಂಪನಿಗಳಿಗೆ ಲಾಭವಾಗುತ್ತದೆ ಮತ್ತು ದೇಶ ಆರ್ಥಿಕವಾಗಿ ಬಲಾಢ್ಯವಾಗುತ್ತದೆ.
೨) ಭಾರತೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಮತ್ತು ವಿದೇಶಿ ಅವಲಂಬನೆ ಕಡಿಮೆಯಾಗುತ್ತದೆ.
೩) ಸರ್ಕಾರಕ್ಕೂ ಸಾಕಷ್ಟು ತೆರಿಗೆ ಸಂಗ್ರಹವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ.
೪) ದೇಶದೊಳಗಿನ ಶಿಕ್ಷಣ, ಆರೋಗ್ಯ, ಸಾರಿಗೆ, ನೆಲ, ಜಲ, ಆಹಾರ, ಮೂಲ ಸೌಕರ್ಯಗಳು ವೃದ್ಧಿ ಹೊಂದುತ್ತದೆ.
೫) ನಮ್ಮಲ್ಲಿನ ಕೃಷಿ ಚಟುವಟಿಕೆಗಳು ಹೆಚ್ಚಾಗಿ ತಾಪಮಾನ ಕಡಿಮೆಯಾಗಿ ಪ್ರಕೃತಿಯು ನಮಗೆ ವರದಾಯಕವಾಗುವುದು.
ಭಾರತದಲ್ಲಿ ಉತ್ಪಾದಿತ ಮತ್ತು ಭಾರತೀಯ ಕಂಪನಿಗಳಿಂದ ಉತ್ಪಾದಿತ ವಸ್ತುಗಳು ಸ್ವದೇಶಿ ವಸ್ತುಗಳಾಗುತ್ತದೆ. ಸ್ವದೇಶಿ ವಸ್ತುಗಳ ಬಳಕೆ ಮಾಡುವುದರಿಂದ ದೇಶದ ಸಂಸ್ಕೃತಿ ಆರ್ಥಿಕತೆ ಮತ್ತು ಅಸ್ಮಿತೆ ಬೆಳೆಯುತ್ತದೆ. ತಂತ್ರಜ್ಞಾನಗಳ ಸ್ವದೇಶಿ ಅಭಿವೃದ್ಧಿಯು ರಾಷ್ಟ್ರದ ಭದ್ರತೆಗೂ ಬಹಳ ಮುಖ್ಯ. ಹಾಗಾಗಿ ಸ್ವದೇಶಿ ವಸ್ತುಗಳ ಬಳಕೆಯು ಮಹತ್ತರ ದೇಶ ಸೇವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಒಂದು ಕರೆ ಅತ್ಯಂತ ಪ್ರಾಮುಖ್ಯವನ್ನು ಹೊಂದಿದೆ. ದೇಶದ ಉನ್ನತಿಗಾಗಿ ಇಂಧನವನ್ನು ಮಿತವಾಗಿ ಬಳಸುವಂತೆ, ಚಿನ್ನ ಖರೀದಿಗೆ ಸ್ವಯಂ ನಿಯಂತ್ರಣ ಹೇರುವಂತೆ, ಖಾದ್ಯ ತೈಲ, ಅಡುಗೆ ಅನಿಲವನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸುವಂತೆ ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಒಂದು ಕರೆ ನೀಡಿದರು. ಯಾಕೆಂದರೆ ನಾವು ದುಡಿದ ಸಂಪತ್ತಿನ ಬಹುತೇಕ ಭಾಗ ಇಂದು ವಿದೇಶಗಳಿಂದ ಇಂಧನ, ಖಾದ್ಯ ತೈಲ ಮತ್ತು ಅಡುಗೆ ಅನಿಲ ಹಾಗೂ ಚಿನ್ನದ ಖರೀದಿಗೆ ವ್ಯಯವಾಗುತ್ತಿದೆ. ಇರಾಕ್ ಮತ್ತು ಅಮೆರಿಕ ಯುದ್ಧದ ಪರಿಣಾಮವಾಗಿ ಇಂಧನ ತುಟ್ಟಿಯಾಗುತ್ತಿದೆ. ಆಮದು ಹೆಚ್ಚಾಗಿ ರಫ್ತು ಕಡಿಮೆಯಾದಂತೆ ಚಾಲ್ತಿ ಕೊರತೆ ಉಂಟಾಗುತ್ತದೆ. ಅದರಿಂದ ದೇಶದ ಒಳಗಿನ ಹಣ ಹರಿವು ಕಡಿಮೆಯಾಗಿ ನಮ್ಮ ದುಡಿಮೆ ವಿದೇಶಗಳಿಗೆ ಸೇರುತ್ತದೆ.
ಅತಿ ಹೆಚ್ಚು ಆಮದಿಗೆ ನಾವಿಂದು ಖರ್ಚು ಮಾಡುತ್ತಿರುವುದು ಖಾದ್ಯ ತೈಲ, ಇಂಧನ ತೈಲ ಮತ್ತು ಚಿನ್ನ. ಭಾರತದ ಜನರ ಬಳಿ 50,000 ಟನ್ ಗೂ ಮಿಕ್ಕಿ ಚಿನ್ನದ ಶೇಖರಣೆ ಇದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ವಾರ್ಷಿಕ 800 ರಿಂದ 1000 ಟನ್ ಗಳಷ್ಟು ಚಿನ್ನವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ದುಡಿಮೆ ಹಣವೆಲ್ಲ ವಿದೇಶಿಗರ ಪಾಲಾಗುತ್ತಿದೆ. ಚಿನ್ನವು ನಮ್ಮ ಮನೆಗಳನ್ನು ಸೇರಿಕೊಂಡು ಚಲಾವಣೆ ಇಲ್ಲದ ನಾಣ್ಯಗಳಂತಾಗುತ್ತಿದೆ. ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಇದು ನಮ್ಮ ಆರ್ಥಿಕತೆಯನ್ನು ಕ್ಷೀಣಗೊಳಿಸುತ್ತಿದೆ.
ಒಬ್ಬ ಸಶಕ್ತ ಚಕ್ರವರ್ತಿಯ ಹಿಂದೆ ಬಲಾಢ್ಯವಾದ ಅವನ ಸೈನಿಕರು ಇರುವಂತೆ ಪ್ರಜಾಪ್ರಭುತ್ವದಲ್ಲಿ ಕೇವಲ ಅಧಿಕಾರಸ್ಥರದಿಂದ ಎಲ್ಲವನ್ನೂ ಸಾಧಿಸಲಾಗದು. ರಾಷ್ಟ್ರಕ್ಕೆ ಯಾವುದು ಕ್ಷೇಮ ಎಂಬುದನ್ನು ಪ್ರತಿಯೊಬ್ಬ ಪ್ರಜೆಯೂ ಜಾತ್ಯತೀತರಾಗಿ, ಪಕ್ಷಾತೀತರಾಗಿ, ಧರ್ಮಾತೀತರಾಗಿ, ಅರಿತುಕೊಂಡು ಇಂತಹ ಸೂಕ್ಷ್ಮ ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಂಡಲ್ಲಿ ಬಡತನ ಕಷ್ಟ ನಮ್ಮನ್ನು ತಟ್ಟದು. ದೇಶವೇ ಆರ್ಥಿಕ ಸಶಕ್ತೀಕರಣಗೊಂಡಲ್ಲಿ ಯಾರೂ ಕೂಡಾ ಸರ್ಕಾರಿ ಸವಲತ್ತಿಗೆ ಅಪೇಕ್ಷೆ ಪಡುವ ಪ್ರಮೇಯವೇ ಉದ್ಭವಿಸದು. ನಿಶ್ಯಕ್ತ ಆರ್ಥಿಕತೆ ಉಂಟಾದರೆ ಅಪೇಕ್ಷೆ ಪಟ್ಟರೂ ಸರ್ಕಾರ ಏನನ್ನು ನೀಡಲಾಗದಂತಹ ಪರಿಸ್ಥಿತಿ ಉಂಟಾಗುವುದು.
ಮಾಡಬೇಕಾದದ್ದು ಏನು ?
- ಬೆಳಗ್ಗೆ ಎದ್ದ ಕೂಡಲೇ ನಾವು ಮೊದಲು ನೋಡುವ ಹಲ್ಲು ಉಜ್ಜುವ ಬ್ರಷ್, ಪೇಸ್ಟ್ ನಿಂದ ಆರಂಭವಾಗಿ ನಿತ್ಯ ಬಳಕೆಯ ಸಾಬೂನು, ಕಾಸ್ಮೆಟಿಕ್ಸ್, ಬ್ರಾಂಡೆಡ್ ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪ್ಯಾಕ್ ಪ್ರೊಡಕ್ಟ್ ಗಳು, ಚಾಕೊಲೇಟ್, ಚಿಪ್ಸ್, ತಂಪು ಪಾನೀಯಗಳ ಮೂಲಕ ಸಾಗಿ ರಾತ್ರಿ ಮಲಗುವ ಹಾಸಿಗೆಯ ಒಳಗೆ ಇರುವ ಸ್ಪಾಂಜ್ನಿಂದ ಹಿಡಿದು ಮೊಬೈಲ್, ಮೊಬೈಲಿನಲ್ಲಿ ನೋಡುವಂತಹ ವಾಟ್ಸಪ್, ಆನ್ಲೈನ್ ಶಾಪಿಂಗ್, ಫೇಸ್ಬುಕ್, ಇನ್ಸ್ಟಾಗ್ರಾಂ, ಅಮೆಜಾನ್, ಗೂಗಲ್, ಗೂಗಲ್ ಪೇ ಇನ್ನೂ ನೂರಾರು ಮೊಬೈಲ್ ಆಪ್ ಗಳ ತನಕ ದಿನದ ಬಹುತೇಕ ಸಮಯಗಳಲ್ಲಿ ನಮ್ಮ ಹಣದ ವಿದೇಶ ಹೊರಹರಿವು ನಿರಂತರವಾಗಿ ಸಾಗುತ್ತಿದೆ. ನಾವು ಇದನ್ನೆಲ್ಲಾ ಅತಿಯಾದ ಬಳಕೆ ಮಾಡಿ ಸರ್ಕಾರ ಏನಾದರೂ ಮಾಡಬೇಕು ಎನ್ನುವುದು ತಪ್ಪು.
- ಆಸೆ ಆಕಾಂಕ್ಷೆಗಳಿಗೆ ಬ್ರೇಕ್ ಹಾಕಿ. ಖರೀದಿಯ ಪ್ರಥಮ ಆದ್ಯತೆಯನ್ನು ಸ್ವದೇಶಿ ಕಂಪನಿಗಳಿಂದ ನಿರ್ಮಿತ ಸ್ವದೇಶಿ ವಸ್ತುಗಳಿಗೆ, ದ್ವಿತೀಯ ಆದ್ಯತೆಯನ್ನು ವಿದೇಶಿ ಕಂಪನಿಗಳಿಂದ ನಮ್ಮ ದೇಶದಲ್ಲಿಯೇ ಉದ್ಯೋಗ ಸೃಷ್ಟಿಸಿ ನಮ್ಮ ದೇಶದಲ್ಲಿ ನಿರ್ಮಿತ ವಸ್ತುಗಳಿಗೆ ಹಾಗೂ ತೃತೀಯ ಆದ್ಯತೆಯನ್ನು ಭಾರತ ಮಿತ್ರ ದೇಶಗಳ ವಸ್ತುಗಳಿಗೆ ಹಾಗೂ ಕೊನೆಯ ಆದ್ಯತೆಯನ್ನು ಇತರ ವಿದೇಶಿ ವಸ್ತುಗಳಿಗೆ ನಾವು ನೀಡಬೇಕು.
- ಈ ಅಂಕಿ ಅಂಶಗಳನ್ನು ಗಮನಿಸಿ. ನಮ್ಮ ವಿದೇಶ ವಿನಿಮಯದ ಬಹುಪಾಲು ಸಂಪತ್ತು ಈ ಕೆಳಗಿನ ಖರೀದಿಗೆ ವ್ಯಯವಾಗುತ್ತಿದೆ.
ಕಚ್ಚಾ ತೈಲಕ್ಕೆ -> 132-161 ಬಿಲಿಯನ್ ಡಾಲರ್ – 11 ಲಕ್ಷ ಕೋಟಿ ರೂ.
ಪೆಟ್ರೋಲ್ ಉತ್ಪನ್ನ ಮತ್ತು ಇಂಧನಕ್ಕಾಗಿ -> 146 ಬಿಲಿಯನ್ ಡಾಲರ್ – ಅಂದರೆ ವರ್ಷಕ್ಕೆ 14 ಲಕ್ಷ ಕೋಟಿ ರೂ.
ಚಿನ್ನ ಆಮದಿಗೆ -> 60 ರಿಂದ 80 ಬಿಲಿಯನ್ ಡಾಲರ್ – 6.2ರಿಂದ- 7ಲಕ್ಷ ಕೋಟಿ ರೂ.
ಅಡುಗೆ ಅನಿಲ ಮತ್ತು ಕೈಗಾರಿಕೆ ಅನಿಲಕ್ಕಾಗಿ – ಸುಮಾರು 20 ಬಿಲಿಯನ್ ಡಾಲರ್- ಅಂದರೆ ಎರಡು ಲಕ್ಷ ಕೋಟಿ ರೂ.
ಈ ಆಮದಿನ ಒಟ್ಟಾರೆ ಮೊತ್ತ 30 ಲಕ್ಷ ಕೋಟಿ ರೂ. ಆಗುತ್ತದೆ. ಇದು ನಮ್ಮ ದೇಶದ ಹಲವಾರು ರಾಜ್ಯಗಳ ಒಟ್ಟು ಬಜೆಟ್ ಗಾತ್ರ (ಆದಾಯ ಗಾತ್ರ ಅಲ್ಲ) ವನ್ನು ಮಿಕ್ಕಿ ಇದೆ. ಯೋಚಿಸಿ, ಇದನ್ನು ನಾವು ಉಳಿಸಿಕೊಂಡರೆ ನಮ್ಮ ದೇಶದಲ್ಲಿ ಶಿಕ್ಷಣ, ಆರೋಗ್ಯ, ಆಹಾರ, ಸಾರಿಗೆ, ಜಲ ಎಷ್ಟು ಉತ್ತಮವಾಗಬಹುದು ? ನಮ್ಮ ದೇಶದ ಇನ್ಫ್ರಾಸ್ಟ್ರಕ್ಚರ್ ಎಷ್ಟು ಸಮೃದ್ಧವಾಗಬಹುದು ?
ನಮ್ಮ ದೇಶದಲ್ಲಿ ದಿನಕ್ಕೆ 50 ಲಕ್ಷ ಬ್ಯಾರೆಲ್ ಗಳಷ್ಟು ಕಚ್ಚಾತೈಲವನ್ನು ನಾವು ಇಂದು ಬಳಸುತ್ತಿದ್ದೇವೆ ! ಇತ್ತೀಚಿನ ಯುದ್ದದ ಸನ್ನಿವೇಶದಲ್ಲಿ 66 ಡಾಲರ್ ಬ್ಯಾರೆಲ್ ಗೆ ಇದ್ದ ಕಚ್ಚಾತೈಲ ಬೆಲೆ 110 ಡಾಲರ್ ತನಕ ಹೋಯಿತು. ಪ್ರತಿ 1 ಡಾಲರ್ ಕಚ್ಚಾ ತೈಲದ ಬೆಲೆ ಏರಿಕೆಯು ನಮ್ಮ ದೇಶಕ್ಕೆ ವಾರ್ಷಿಕ 13,000 ಕೋಟಿ ರೂಪಾಯಿಗಳಷ್ಟು ಹೊರೆಯನ್ನು ಹೆಚ್ಚಿಸುತ್ತದೆ.
- ಪ್ರತಿಯೊಬ್ಬರೂ ವಾಹನ ಇಂಧನ ಬಳಕೆ ಮಿತಗೊಳಿಸಬೇಕು. ವಿದ್ಯುತ್ ಚಾಲಿತ ವಾಹನಗಳನ್ನು ಆದಷ್ಟು ಬಳಸಬೇಕು. ಚಿನ್ನದ ಮೋಹ ಬದಿಗಿಡಬೇಕು. ಅಡುಗೆ ಎಣ್ಣೆಯ ದುಂದು ವ್ಯಯವನ್ನು ತಪ್ಪಿಸಬೇಕು. 5. ನಾವು ಬಳಸುವ ಪ್ರತಿ ವಸ್ತುವು ಎಲ್ಲಿ ತಯಾರಾಗಿದೆ ಹಾಗೂ ಯಾವ ದೇಶದ ಮೂಲದ್ದು ಎಂದು ನಾವು ಅಂತರ್ಜಾಲದಲ್ಲಿ ಸುಲಭವಾಗಿ ನೋಡಿ ತಿಳಿದುಕೊಳ್ಳಬಹುದು. ಆಗ ನಾವು ಕಲಿತ ವಿದ್ಯೆ ನಮ್ಮ ದೇಶದ ನಮ್ಮ ಸಂಸ್ಕೃತಿಯ ರಕ್ಷಣೆಗೂ ಬಳಕೆಯಾಗುವಂತೆ ಆಗುತ್ತದೆ. ಜೊತೆಯಲ್ಲಿ ಸದೃಡ ದೇಶ ಹಾಗೂ ಪರಿಸರವನ್ನು ನಮ್ಮ ಮಕ್ಕಳಿಗೆ ಕೊಡುಗೆ ನೀಡಿದಂತಾಗುತ್ತದೆ.
ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ದೇಶ ನಮ್ಮದು. ಅದರರ್ಥ ಇನ್ನೆರಡು – ಮೂರು ದಶಕಗಳಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ವೃದ್ಧರನ್ನು ಹೊಂದಿರುವ ದೇಶ ನಮ್ಮದಾಗಲಿದೆ. ಈಗಲೇ ಸ್ವದೇಶಿ ಅಭಿಯಾನವನ್ನು ಮನೆ – ಮನಸ್ಸಿನಲ್ಲಿ ಅಳವಡಿಸಿಕೊಂಡು ಕಾರ್ಯಗತರಾಗದಿದ್ದರೆ ನಮ್ಮ ವೃದ್ಧಾಪ್ಯವು ಖಂಡಿತಾ ದುಃಖಕರವಾಗಿರಲಿದೆ.













































































