ಲೇವಾದೇವಿ ವ್ಯವಹಾರ ಎಂದರೆ ಸಾಲವನ್ನು ನೀಡುವ ಅಥವಾ ಸಾಲವನ್ನು ಪಡಕೊಳ್ಳುವ ವ್ಯವಹಾರವನ್ನು ಲೇವಾದೇವಿ ವ್ಯವಹಾರ ಎನ್ನಲಾಗುತ್ತದೆ. ಕಾನೂನಿನ ನಿಯಮಾನೂಸಾರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಲೇವಾದೇವಿ ವ್ಯವಹಾರವನ್ನು ನಡೆಸಲು ಸರ್ಕಾರದಿಂದ ಸೂಕ್ತ ಲೈಸನ್ಸ್ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಲೇವಾದೇವಿ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಗೊಳಿಸುವ ಮತ್ತು ಮುಗ್ದ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ಉದ್ದೇಶದಿಂದ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ.
ಈ ಕಾನೂನಿನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಸರಕಾರದಿಂದ ಸೂಕ್ತ ಲೈಸೆನ್ಸ್ ಪಡೆಯದೆ ಲೇವಾದೇವಿ ವ್ಯವಹಾರವನ್ನು ನಡೆಸಿದ ಪಕ್ಷದಲ್ಲಿ ಅಂಥಹ ವ್ಯವಹಾರವನ್ನು ಕಾನೂನು ಬಾಹಿರ ಮತ್ತು ಅಕ್ರಮ ವ್ಯವಹಾರವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಲೇವಾದೇವಿ ವ್ಯವಹಾರವನ್ನು ಪ್ರಾರಂಬಿಸುವ ಮುಂಚಿತವಾಗಿ ಸಂಬಂಧಪಟ್ಟ ವ್ಯಕ್ತಿಯು ತಾನು ನಡೆಸುವ ಲೇವಾದೇವಿ ವ್ಯವಹಾರದ ಪರಿಮಿತಿಗೆ ಅನುಗುಣವಾಗಿ ಸರಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಸರಕಾರವು ನಿಗದಿಪಡಿಸುವ ಷರತ್ತಿಗೆ ಒಳಪಟ್ಟು ಲೈಸನ್ಸ್ ಪಡಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಾಲಗಾರರ ಹಿತಾಸಕ್ತಿಗಳನ್ನು ಕಾಪಾಡಲು, ಸರ್ಕಾರವು ಲೇವಾದೇವಿದಾರರಿಂದ ಸೂಕ್ತ ಭದ್ರತಾ ಠೇವಣಿಯನ್ನು ಪಡೆದು ಲೇವಾದೇವಿ ಲೈಸೆನ್ಸ್‌ನ್ನು ಮಂಜೂರು ಮಾಡುವುದು ಕಡ್ಡಾಯವಾದ ನಿಯಮಗಳ ಪೈಕಿ ಒಂದಾಗಿರುತ್ತದೆ.
ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಲೇವಾದೇವಿದಾರನು ಸಾಲ ನೀಡುವ ಸಂದರ್ಭದಲ್ಲಿ ಸಾಲಗಾರನಿಗೆ ಸರಿಯಾದ ವಿವರವನ್ನು ನೀಡದೆ ಆತನಿಂದ ಸಂಪೂರ್ಣವಾಗಿ ಭರ್ತಿ ಮಾಡಿರದ ಅಥವಾ ತಪ್ಪಾಗಿ ಭರ್ತಿ ಮಾಡಿರುವ ಯಾವುದೇ ಪ್ರಾಮಿಸರಿ ನೋಟ್, ಸ್ವೀಕೃತಿ ಪತ್ರ, ಚೆಕ್, ಅಗ್ರಿಮೆಂಟ್, ಬಂಧಪತ್ರ ಅಥವಾ ಇತರ ಪತ್ರಗಳನ್ನು ಪಡೆಯುವಂತಿಲ್ಲ. ಮೇಲೆ ತಿಳಿಸಿದಂತೆ ಸರಕಾರದಿಂದ ಸೂಕ್ತ ಲೈಸೆನ್ಸ್ ಹೊಂದಿರದೆ ನಡೆಸುವ ಪ್ರತಿಯೊಂದು ಲೇವಾದೇವಿ ವ್ಯವಹಾರವು ಅಕ್ರಮ, ಅನಧಿಕೃತ ಹಾಗೂ ಕಾನೂನು ಬಾಹಿರ ವ್ಯವಹಾರವಾಗಿದ್ದು ಇಂತಹ ವ್ಯವಹಾರದಲ್ಲಿ ನಿರತರಾದ ವ್ಯಕ್ತಿಗಳು ಶಿಕ್ಷಾರ್ಹ ಅಪರಾಧ ನಡೆಸಿದಂತಾಗುತ್ತದೆ. ಸರಕಾರದಿಂದ ಲೇವಾದೇವಿ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ಹೆಸರು, ವಿಳಾಸ, ಕಾರ್ಯನಿರ್ವಹಣೆ ನಡೆಸುವ ನಿರ್ದೇಶಕರ, ಮ್ಯಾನೇಜರ್‌ನ ಮತ್ತು ಇತರ ಪ್ರಧಾನ ಅಧಿಕಾರಿಯ ಹೆಸರು ಮತ್ತು ವಿಳಾಸವನ್ನು ಹಾಗೂ ಲೇವಾದೇವಿ ವ್ಯವಹಾರ ನಡೆಸುವ ಪ್ರದೇಶಗಳ ಮತ್ತು ಪ್ರಧಾನ ಸ್ಥಳದ ವಿವರವನ್ನು ಹಾಗೂ ಲೇವಾದೇವಿ ವ್ಯವಹಾರದಲ್ಲಿ ತೊಡಗಿಸಲು ಉದ್ದೇಶಿಸಿರುವ ಬಂಡವಾಳದ ಒಟ್ಟು ಮೊಬಲಗು ಇತ್ಯಾದಿಗಳ ವಿವರಗಳನ್ನು ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ. ಲೇವಾದೇವಿ ವ್ಯವಹಾರವನ್ನು ನಡೆಸುವ ಸಂದರ್ಭದಲ್ಲಿ ನೀಡುವ ಸಾಲದ ಮೇಲಿನ ಗರಿಷ್ಠ ಬಡ್ಡಿ ದರವನ್ನು ರಾಜ್ಯ ಸರಕಾರವು ಕಾಲಕಾಲಕ್ಕೆ ಅಧಿಸೂಚನೆಯನ್ನು ಹೊರಡಿಸುವ ಮೂಲಕ ನಿಗದಿಪಡಿಸಬೇಕಾಗಿದ್ದು ಒಂದು ವೇಳೆ ಈ ರೀತಿಯಾಗಿ ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ದರದ ಬಡ್ಡಿಯನ್ನು ವಸೂಲು ಮಾಡಿದಲ್ಲಿ ಇಂತಹ ಕ್ರಮವು ಕಾನೂನುಬಾಹಿರವಾಗುತ್ತದೆ. ಸರಕಾರದಿಂದ ಲೇವಾದೇವಿ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬ ಲೇವಾದೇವಿದಾರನು ತನ್ನ ಅಂಗಡಿ ಅಥವಾ ವ್ಯವಹಾರದ ಸ್ಥಳದ ಮುಂದೆ ‘ಲೇವಾದೇವಿದಾರ’ ಎಂಬ ಪದವನ್ನು ತನ್ನ ಹೆಸರಿನೊಂದಿಗೆ ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಸಾಲ ನೀಡಿದ ನಂತರ ಲೇವಾದೇವಿದಾರರು ಸಾಲದ ವಸೂಲಿಗಾಗಿ ಸಾಲಗಾರರಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ಉಪದ್ರವ, ಬೆದರಿಕೆ, ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ಸಾಲ ನೀಡಿದ ಲೇವಾದೇವಿದಾರ ಮತ್ತು ಆತನಿಗೆ ಬೆಂಬಲ ಅಥವಾ ಪ್ರಚೋದನೆ ನೀಡಿದ ವ್ಯಕ್ತಿಗಳು ಕಾನೂನಿನ ಉಲ್ಲಂಘನೆಯ ಮೂಲಕ ಶಿಕ್ಷಾರ್ಹ ಅಪರಾಧ ನಡೆಸಿದಂತಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.














































































