ಶಾಲಾ ಪ್ರಾರಂಭೋತ್ಸವ – ಸಂಭ್ರಮ

ಕಾರ್ಕಳ : ಬೇಸಿಗೆಯ ಎರಡು ತಿಂಗಳ ರಜೆ ಬಳಿಕ ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದೆ. ಈ ಮೂಲಕ 2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭಗೊಂಡಿವೆ. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಹಬ್ಬದ ವಾತಾವರಣ, ಸಂಭ್ರಮ, ಸಡಗರದಿಂದ ಸ್ವಾಗತ ಮಾಡಲು ಆದೇಶಿಸಿದ್ದು, ಅದರಂತೆ ಶಾಲೆಯನ್ನ ತಳಿರು-ತೋರಣ, ರಂಗೋಲಿಯಿಂದ ಸಿಂಗಾರ ಮಾಡಿ, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದ್ದಾರೆ.

ಕಾರ್ಕಳ – ಹೆಬ್ರಿ ತಾಲೂಕಿನಲ್ಲೂ ಎಲ್ಲಾ ಶಾಲೆಗಳು ಇಂದು ಹಬ್ಬದ ಮನೆಯಂತೆ ಸಂಭ್ರಮಿಸಿತು. ಇಲಾಖೆಯ ಆದೇಶದಂತೆ ಶಾಲೆಯನ್ನು ವಿಭಿನ್ನವಾಗಿ ಸಿಂಗರಿಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ಬರಮಾಡಿಕೊಂಡರು. ಇಂದು ಶಾಲೆ ಪ್ರಾರಂಭದ ಜೊತೆಗೆ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪೋಷಕರ ಸಭೆ ನಡೆಯಿತು. ಇನ್ನು ಶಾಲೆ ಪ್ರಾರಂಭೋತ್ಸವದ ಹಿನ್ನೆಲೆ ಬಹುತೇಕ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ, ಪೋಷಕ ವೃಂದ, ಹಳೆವಿದ್ಯಾರ್ಥಿ ಸಂಘ, ಊರಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೇ 29, 30ರಂದು ಸ್ವಚ್ಛತಾಕಾರ್ಯ ನಡೆದಿದೆ. ಅಲ್ಲದೆ ಶಾಲೆಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸಹ ಇಲಾಖೆ, ದಾನಿಗಳ ನೆರವಿನಿಂದ ಮಾಡಲಾಗುತ್ತಿದೆ.

ಶಿಕ್ಷಕರ ಸ್ಥಿತಿಗತಿ
ಕೆಲವಡೆ ವಿದ್ಯಾರ್ಥಿಗಳ ಕೊರತೆಯಿದ್ದರೆ, ಇನ್ನು ಹಲವೆಡೆ ಶಿಕ್ಷಕರ ಸಂಖ್ಯೆಯೇ ಕಡಿಮೆಯಿರುವ ಶಾಲೆಗಳಿವೆ. ಕಾರ್ಕಳ ತಾಲೂಕಿನ ಒಟ್ಟು 122 ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 549 ಮಂಜೂರಾದ ಶಿಕ್ಷಕರ ಹುದ್ದೆಗಳಿವೆ. ಇದರಲ್ಲಿ ಕರ್ತವ್ಯದಲ್ಲಿರುವ ಶಿಕ್ಷಕರ ಸಂಖ್ಯೆ 347. ಒಟ್ಟು 202 ಶಿಕ್ಷಕರ ಹುದ್ದೆ ಖಾಲಿಯಿದೆ. ಇದಕ್ಕೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನು 11 ಶಾಲೆಗಳು ಶೂನ್ಯ ಶಿಕ್ಷಕರ ಶಾಲೆಯಾಗಿ ಪರಿಣಮಿಸಿದೆ. ಇನ್ನು ತಾಲೂಕಿನ 27 ಸರಕಾರಿ ಪ್ರೌಢ ಶಾಲೆಯಲ್ಲಿ 273 ಮಂಜೂರಾದ ಶಿಕ್ಷಕರ ಹುದ್ದೆಯಿದೆ. 195 ಶಿಕ್ಷಕರು ಕರ್ತವ್ಯದಲ್ಲಿದ್ದು, 78 ಖಾಲಿ ಹುದ್ದೆಯಿದೆ. ಖಾಲಿ ಹುದ್ದೆಯಲ್ಲಿ ದೈಹಿಕ ಶಿಕ್ಷಕರನ್ನು ಹೊರತುಪಡಿಸಿ 64 ಅತಿಥಿ ಶಿಕ್ಷಕರ ನೇಮಕಾತಿ ನಡೆಯತ್ತಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಎಸ್‌ಡಿಎಂಸಿ ಸದಸ್ಯರು, ಹಳೆವಿದ್ಯಾರ್ಥಿಗಳು, ದಾನಿಗಳ ಆರ್ಥಿಕ ನೆರವಿನೊಂದಿಗೆ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾರೆ.

ಕಾರ್ಕಳ – ಹೆಬ್ರಿ ತಾಲೂಕಿನಾದ್ಯಂತ ಇಲಾಖೆಯ ಆದೇಶದಂತೆ ಸಂಭ್ರಮದಿಂದ ಪ್ರಾರಂಭೋತ್ಸವ ನಡೆಯಿತು. ಇನ್ನು ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈಗಾಗಲೇ ಶಾಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗದಂತೆ ಮುಂಚಿತವಾಗಿಯೇ ಕ್ರಮಗೊಳ್ಳಲಾಗಿದೆ.
-ಗಿರಿಜಮ್ಮ ಎಸ್.‌ ಆರ್.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ

ವರದಿ : ನಳಿನಿ ಎಸ್.‌ ಸುವರ್ಣ















































\















error: Content is protected !!
Scroll to Top