ಕಾರ್ಕಳ : 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಕಾರ್ಕಳ ಜ್ಞಾನಸುಧಾದ ಮಹಾಲಕ್ಷ್ಮೀಯರು ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಎಸ್ಸೆಸೆಲ್ಸಿ ಪರೀಕ್ಷೆ ಸಾಧನೆ ಮೆರೆದಿದ್ದಾರೆ. ಮಹಾಲಕ್ಷ್ಮೀ ಭಾಗವ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಜಗದೀಶ್ ಭಾಗವ ಹಾಗೂ ವನಿತಾ ದಂಪತಿ ಪುತ್ರಿ. ಈಕೆಯ ತಂದೆ 2025ರ ಮೇ ತಿಂಗಳಲ್ಲಿ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದರು.
ಮಹಾಲಕ್ಷ್ಮೀ ಪೈ. ಬಿ. ಕಾರ್ಕಳ ತಾಲೂಕು ಬೈಲೂರು ಗುಡ್ಡೆಯಂಗಡಿ ಮಂಜುನಾಥ ಪೈ ಹಾಗೂ ಮೇಘ ಪೈ ದಂಪತಿ ಪುತ್ರಿ. 2023ರ ಡಿಸೆಂಬರ್ ತಿಂಗಳ ಒಂದು ದಿನ ಮಂಜುನಾಥ ಅವರು ಹಾಲಿನ ಡೈರಿಗೆ ತನ್ನ ಸೈಕಲ್‌ನಲ್ಲಿ ಸಾಗುತ್ತಿದ್ದ ಸಂದರ್ಭ ಬೈಕೊಂದು ಸೈಕಲ್‌ಗೆ ಹೊಡೆದಿತ್ತು. ಪರಿಣಾಮ ಸೈಕಲ್‌ನಿಂದ ಎಸೆಯಲ್ಪಟ್ಟ ಮಂಜುನಾಥ ಅವರಿಗೆ ತೀವ್ರ ಸ್ವರೂಪದ ಗಾಯವಾಗಿ ಬಳಿಕ ಸಾವಿಗೀಡಾಗಿದ್ದರು. ಹಾಗಾಗಿ ತಾಯಿ ಆರೈಕೆಯಲ್ಲೇ ಬೆಳೆದ ಮಹಾಲಕ್ಷ್ಮೀಯರು ತಂದೆ ಇಲ್ಲದ ನೋವಿನಲ್ಲೂ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ತಮ್ಮ ಪರಿಶ್ರಮದೊಂದಿಗೆ ಅತ್ಯುತ್ತಮ ಸಾಧನೆ ತೋರಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಶಿಕ್ಷಕ ವೃಂದದವರು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಹಾಲಕ್ಷ್ಮೀಯರು ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದು, ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಅವರಿಬ್ಬರೂ ಉಚಿತ ಶಿಕ್ಷಣ ಪಡೆಯಲಿದ್ದಾರೆ.






































