ರಾಜ್ಯದಲ್ಲಿ ವಿದ್ಯುತ್‌ ದರ ಸಮರ: ಬೆಸ್ಕಾಂ ವ್ಯಾಪ್ತಿಯಲ್ಲಿ ಏರಿಕೆ, ಮೆಸ್ಕಾಂ ವ್ಯಾಪ್ತಿಯಲ್ಲಿ ದರ ಇಳಿಕೆ,ಉತ್ತರ ಕರ್ನಾಟಕದಲ್ಲಿ ಇಳಿಕೆ !

ಬೆಂಗಳೂರು: ರಾಜ್ಯದ ವಿದ್ಯುತ್‌ ಗ್ರಾಹಕರಿಗೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಏಕಕಾಲಕ್ಕೆ ಸಿಹಿ ಮತ್ತು ಕಹಿ ಸುದ್ದಿಯನ್ನು ನೀಡಿದೆ. 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ನಡೆಸಿರುವ ಆಯೋಗವು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ದರ ಏರಿಕೆ ಮಾಡಿದ್ದರೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ದರ ಕಡಿತಗೊಳಿಸಿ ಆದೇಶ ಹೊರಡಿಸಿದೆ.
​ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ಏರಿಕೆಯಾಗಿದ್ದರೆ, ಹುಕ್ಕೇರಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಭಾರಿ ಇಳಿಕೆಯಾಗಿದೆ. ಪರಿಷ್ಕೃತ ದರಗಳು ಮೇ 1 ರಿಂದ ಜಾರಿಗೆ ಬರಲಿವೆ.
ಎಸ್ಕಾಂವಾರು ದರ ವ್ಯತ್ಯಾಸದ ವಿವರ ಹೀಗಿದೆ:
​ಬೆಸ್ಕಾಂ (BESCOM): ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಗ್ರಾಹಕರು ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಿದೆ.
​ಸೆಸ್ಕ್ (CESC): ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 15 ಪೈಸೆ ಏರಿಕೆ ಮಾಡಲಾಗಿದೆ.
​ಮೆಸ್ಕಾಂ (MESCOM): ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತಿ ಯೂನಿಟ್‌ಗೆ 9 ಪೈಸೆ ದರ ಕಡಿತಗೊಳಿಸಲಾಗಿದೆ.
​ಹೆಸ್ಕಾಂ (HESCOM): ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತಿ ಯೂನಿಟ್‌ಗೆ 10 ಪೈಸೆ ಇಳಿಕೆಯಾಗಿದೆ.
​ಜೆಸ್ಕಾಂ (GESCOM): ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರತಿ ಯೂನಿಟ್‌ಗೆ 10 ಪೈಸೆ ದರ ಇಳಿಕೆ ಮಾಡಲಾಗಿದೆ.
​ಹುಕ್ಕೇರಿ ಸಂಘ (HRECS): ಗೋಕಾಕ್‌, ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 1.55 ರೂ. ಭಾರಿ ಇಳಿಕೆ ಕಂಡುಬಂದಿದೆ.
​ಬೆಸ್ಕಾಂಗೆ ತಟ್ಟಿದ ‘ಆದಾಯ ಕೊರತೆ’ ಬಿಸಿ
​ಬೆಸ್ಕಾಂ ವ್ಯಾಪ್ತಿಯಲ್ಲಿ ದರ ಏರಿಕೆಗೆ ಪ್ರಮುಖ ಕಾರಣ ಸಾವಿರಾರು ಕೋಟಿ ರೂಪಾಯಿಗಳ ಆದಾಯದ ಕೊರತೆ. 2024-25ನೇ ಸಾಲಿನಲ್ಲಿ ಬೆಸ್ಕಾಂನ ಆದಾಯದ ಅಗತ್ಯತೆ 34,087.94 ಕೋಟಿ ರೂ.ಗಳೆಂದು ಅಂದಾಜಿಸಲಾಗಿತ್ತು. ಆದರೆ, ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂ. ಮಾತ್ರ. ಇದರಿಂದಾಗಿ ಕಂಪನಿಗೆ ಉಂಟಾಗಿರುವ 2,068.38 ಕೋಟಿ ರೂಪಾಯಿಗಳ ಭಾರಿ ನಷ್ಟವನ್ನು ಸರಿದೂಗಿಸಲು ಈ ದರ ಏರಿಕೆ ಅನಿವಾರ್ಯವಾಗಿದೆ ಎಂದು ಆಯೋಗ ತಿಳಿಸಿದೆ.
ಗ್ರಾಹಕರ ಮೇಲೆ ಪರಿಣಾಮವೇನು?
​ಈ ಆದಾಯದ ಕೊರತೆಯನ್ನು ಒಮ್ಮೆಲೇ ಹೇರುವ ಬದಲು, 2026-27ನೇ ಆರ್ಥಿಕ ವರ್ಷದಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಪರಿಣಾಮವಾಗಿ, ಮುಂದಿನ ವರ್ಷದ ಮೇ ತಿಂಗಳಿನಿಂದ ಗ್ರಾಹಕರು ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಈ ಹೆಚ್ಚುವರಿ ದರ ಅನ್ವಯವಾಗಲಿದೆ. ಸದ್ಯ ಗೃಹ ಬಳಕೆಗೆ ಪ್ರತಿ ಯೂನಿಟ್‌ಗೆ 5.80 ರೂ. ಹಾಗೂ ವಾಣಿಜ್ಯ ಬಳಕೆಗೆ 7.15 ರೂ. ದರವಿದೆ.
​ಸರ್ಕಾರದ ‘ಗೃಹಜ್ಯೋತಿ’ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವವರಿಗೆ ಈ ಏರಿಕೆಯಿಂದ ತೊಂದರೆಯಿಲ್ಲ. ಆದರೆ, ನಿಗದಿತ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸುವವರು ಹಾಗೂ ಉದ್ದಿಮೆದಾರರ ಜೇಬಿಗೆ ಇದು ಕತ್ತರಿ ಹಾಕಲಿದೆ







































































error: Content is protected !!
Scroll to Top