ಪರಿಸರ (ಸಂರಕ್ಷಣೆ) ಅಧಿನಿಯಮ 1986

ಪರಿಸರ ಎಂಬುದು ಒಂದೆಡೆ ನೀರು, ಗಾಳಿ, ಭೂಮಿ. ಇನ್ನೊಂದೆಡೆ ಮನುಷ್ಯರು, ಇತರ ಜೀವಿಗಳು, ಸಸ್ಯಗಳು, ಸೂಕ್ಷ್ಮಾಣು ಜೀವಿ ಮತ್ತು ಸ್ವತ್ತು ಇವರೊಳಗೆ ನಿಕಟ ಸಂಬಂಧವನ್ನು ಒಳಗೊಂಡಿರುತ್ತವೆ. 1972 ರ ಜೂನ್ ತಿಂಗಳಲ್ಲಿ ನಡೆದ ಮಾನವ ಪರಿಸರದ ಬಗ್ಗೆ ಸಂಯುಕ್ತ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತ ದೇಶ ಸಮೇತ ಅನೇಕ ರಾಷ್ಟ್ರಗಳು ವಿಶ್ವದಾದ್ಯಂತ ಪರಿಸರ ಸಂರಕ್ಷಣೆ, ಸುಧಾರಣೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿ ಕೈಗೊಂಡ ನಿರ್ಣಯದ ಪರಿಣಾಮವಾಗಿ 23-05- 1986 ರಂದು ಕೇಂದ್ರ ಸರ್ಕಾರವು ಪರಿಸರ (ಸಂರಕ್ಷಣೆ) ಅಧಿನಿಯಮ, 1986 ಎಂಬ ಕಾನೂನನ್ನು ಜ್ಯಾರಿಗೆ ತಂದಿರುತ್ತದೆ.
ಯಾವುದೇ ಕಾರ್ಖಾನೆ, ಉದ್ದಿಮೆ, ಇನ್ನಿತರ ವ್ಯವಹಾರ ಅಥವಾ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಕಾರವಾಗುವುದನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಮೂಲಕ ಪರಿಸರದ ಗುಣಮಟ್ಟವನ್ನು ಸಂರಕ್ಷಿಸುವ ಅಥವಾ ನಿಯಂತ್ರಿಸುವ ಉದ್ದೇಶದಿಂದ ಈ ಮೇಲೆ ತಿಳಿಸಿರುವ ಕಾನೂನನ್ನು ಸರಕಾರವು ಜ್ಯಾರಿಗೊಳಿಸಿರುತ್ತದೆ. ಈ ಕಾನೂನು ಭಾರತದಲ್ಲಿ ಪರಿಸರ ಗುಣಮಟ್ಟವನ್ನು ರಕ್ಷಿಸಲು, ಸುಧಾರಿಸಲು ಮತ್ತು ಮಾಲಿನ್ಯವನ್ನು ತಡೆಯುವ ಹಾಗೂ ಕೈಗಾರಿಕಾ ತ್ಯಾಜ್ಯ ನಿರ್ವಹಣೆ, ಹಾನಿಕಾರಕ ವಸ್ತುಗಳ ನಿಯಂತ್ರಣ ಮತ್ತು ಪರಿಸರ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸುವ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುತ್ತದೆ. ಈ ಕಾನೂನಿನ ಪ್ರಕಾರ ಕೇಂದ್ರ ಸರ್ಕಾರವು ಪರಿಸರ ಸಂರಕ್ಷಣೆಗಾಗಿ ಪರಿಸರ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸುವ, ಕೈಗಾರಿಕಾ ಸ್ಥಳಗಳನ್ನು ನಿಯಂತ್ರಿಸುವ ಮತ್ತು ನಿರ್ಬಂಧಿಸುವ ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಅಗತ್ಯ ಇರುವ ನಿಯಮಗಳನ್ನು ರೂಪಿಸುವ ಹಾಗೂ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಜೈಲು ಶಿಕ್ಷೆ ಅಥವಾ ದಂಡನೆ ಅಥವಾ ಇವೆರಡನ್ನೂ ವಿಧಿಸುವ ಅಧಿಕಾರವನ್ನು ಹೊಂದಿರುತ್ತದೆ. ಈ ಕಾನೂನಿನ ಪ್ರಕಾರ ದೇಶದ ವಿವಿಧ ರಾಜ್ಯಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಧಾರಣೆಗಾಗಿ ಸೂಕ್ತ ಪ್ರಾಧಿಕಾರಗಳನ್ನು ಮತ್ತು ಮಂಡಳಿಗಳನ್ನು ರಚಿಸಲಾಗಿರುತ್ತದೆ. ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ನೇಮಿಸಲ್ಪಟ್ಟ ಅಧಿಕಾರಿಗಳು ಯಾವುದೇ ಕಾರ್ಖಾನೆ ಆವರಣ ಅಥವಾ ಸ್ಥಳಗಳಿಂದ ನೀರು, ವಾಯು, ಮಣ್ಣು ಇತರ ಪದಾರ್ಥಗಳ ಮಾದರಿಗಳನ್ನು ತೆಗೆದುಕೊಳ್ಳುವ ಮತ್ತು ಈ ರೀತಿಯಾಗಿ ತೆಗೆದುಕೊಳ್ಳಲಾದ ಮಾದರಿಯ ವೈಜ್ಞಾನಿಕ ವಿಶ್ಲೇಷಣೆಯನ್ನು ನಡೆಸುವ ಮತ್ತು ಮೇಲ್ಕಾಣಿಸಿದ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ.
ಒಂದು ವೇಳೆ ಯಾವುದೇ ಕಂಪೆನಿಯು ಮೇಲ್ಕಾಣಿಸಿದ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಂಪೆನಿಯ ಜವಾಬ್ದಾರಿಯುತ ವ್ಯಕ್ತಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಮಾತ್ರವಲ್ಲದೇ ಸರಕಾರದ ಯಾವುದೇ ಇಲಾಖೆಯು ಮೇಲ್ಕಾಣಿಸಿದ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಇಲಾಖೆಯ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.







































































error: Content is protected !!
Scroll to Top