ಬೇಸಿಗೆಯಲ್ಲಿ ದೇಹದಲ್ಲಿ ಪಿತ್ತ ದೋಷ ಹೆಚ್ಚಾಗುತ್ತದೆ. ಅದನ್ನು ಶಮನಗೊಳಿಸಲು ತಂಪು, ಸಿಹಿ ಮತ್ತು ಕಹಿ ರುಚಿಯ ಪಾನೀಯಗಳನ್ನು ಆಯುರ್ವೇದ ಸೂಚಿಸುತ್ತದೆ. ಫ್ರಿಜ್‌ನ ತಣ್ಣಗಿನ ನೀರು ಬದಲು ಮಣ್ಣಿನ ಮಡಕೆಯ ನೀರು ಅಥವಾ ಸಾಮಾನ್ಯ ತಾಪಮಾನದ ಪಾನೀಯ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಪಾನೀಯ ವಿಧಾನ
ಮಜ್ಜಿಗೆ : 1 ಲೋಟ ಮಜ್ಜಿಗೆ, ಕರಿಬೇವು, ಶುಂಠಿ, ಜೀರಿಗೆ ಪುಡಿ, ಉಪ್ಪು. ಇದು ಪಿತ್ತ ಶಮನ, ಜೀರ್ಣಕ್ರಿಯೆಗೆ ಮಾತ್ರವಲ್ಲದೇ ಬಾಯಾರಿಕೆಗೂ ಉತ್ತಮ.
ಪಾನಕ : ಬೆಲ್ಲ, ಹುಣಸೆ ರಸ, ಏಲಕ್ಕಿ, ಶುಂಠಿ ಪುಡಿ, ನೀರು. ಇದು ದೇಹ ತಂಪಾಗಿಸುವುದರೊಂದಿಗೆ ಶಕ್ತಿ ನೀಡುವುದು.
ಕೊತ್ತಂಬರಿ ಸೊಪ್ಪಿನ ರಸ : ಕೊತ್ತಂಬರಿ, ಪುದೀನ, ಜೀರಿಗೆ, ಉಪ್ಪು, ನಿಂಬೆ ರಸ ರುಬ್ಬಿ ಸೋಸಿ ಸೇವಿಸಿ. ಇದು ಮೂತ್ರದ ಉರಿ, ದೇಹದ ಶಾಖ ಕಡಿಮೆಗೊಳಿಸುತ್ತದೆ.
ತೆಂಗಿನ ನೀರು : ನೈಸರ್ಗಿಕ ತೆಂಗಿನ ನೀರು ತಕ್ಷಣ ಶಕ್ತಿ, ಎಲೆಕ್ಟ್ರೋಲೈಟ್ ಬ್ಯಾಲೆನ್ಸ್, ಡಿಹೈಡ್ರೇಶನ್ ತಡೆಯುತ್ತದೆ.
ಗುಲ್ಕಂದ್ ಹಾಲು : 1 ಚಮಚ ಗುಲ್ಕಂದ್, 1 ಲೋಟ ತಣ್ಣನೆಯ ಹಾಲು ಅಸಿಡಿಟಿ, ಬಾಯಿಹುಣ್ಣು, ದೇಹದ ಉರಿಗೆ ರಾಮಬಾಣವಾಗುವುದು.
ಪುದೀನಾ ಚಹಾ : ಪುದೀನ ಎಲೆ, ನೀರು ಕುದಿಸಿ ತಣಿಸಿ ಸ್ವಲ್ಪ ಜೇನು ಸೇರಿಸಿ ಸೇವಿಸಿ. ಇದು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ ಮಾತ್ರವಲ್ಲದೇ ತಲೆನೋವು ನಿವಾರಣೆ ಮಾಡುವುದು.
ಬೇಲದ ಹಣ್ಣಿನ ಶರಬತ್ : ಮಾಗಿದ ಬೇಲದ ತಿರುಳು, ನೀರು, ಬೆಲ್ಲ/ಸಕ್ಕರೆ, ಏಲಕ್ಕಿ ಪುಡಿ, ಬೆರೆಸಿ ಸೇವಿಸಿ. ಇದು ಪಿತ್ತ ಶಮನ, ಜೀರ್ಣಕ್ರಿಯೆಗೆ ಉತ್ತಮ, ಬಿಸಿಲಿನ ಬೇಗೆಗೆ ರಾಮಬಾಣ. ಹೊಟ್ಟೆ ಉರಿ ತಕ್ಷಣ ಕಡಿಮೆ ಮಾಡುತ್ತದೆ.
ಆಮ್ ಪನ್ನಾ : ಕಚ್ಚಾ ಮಾವಿನಕಾಯಿ ಬೇಯಿಸಿ ತಿರುಳು ತೆಗೆದು ಪುದೀನ, ಜೀರಿಗೆ, ಕರಿಉಪ್ಪು, ಬೆಲ್ಲ ಹಾಕಿ ಸೇವಿಸಿ. ಇದು ಹೀಟ್ ಸ್ಟ್ರೋಕ್ ತಡೆಯುತ್ತದೆ, ದೇಹಕ್ಕೆ ತಕ್ಷಣ ತಂಪು ಮತ್ತು ಶಕ್ತಿ ನೀಡುತ್ತದೆ.
ಸಬ್ಜಾ ಶರಬತ್ : ಸಬ್ಜಾ ಬೀಜವನ್ನು 15 ನಿಮಿಷ ನೀರಿನಲ್ಲಿ ನೆನೆಸಿ ನಿಂಬೆ ರಸ, ಸಕ್ಕರೆ, ನೀರು ಬೆರೆಸಿ ಸೇವಿಸಿ. ಇದು ದೇಹದ ಉಷ್ಣತೆ ಇಳಿಸುತ್ತದೆ, ಅಸಿಡಿಟಿ ಕಡಿಮೆ ಮಾಡುತ್ತದೆ. ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಸೋಂಪು ಶರಬತ್ : ಸೋಂಪು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೋಸಿ ಕಲ್ಲುಸಕ್ಕರೆ ಸೇರಿಸಿ ಸೇವಿಸಿ. ಇದು ಕಣ್ಣು ಉರಿ, ಮೂತ್ರ ಉರಿ, ದೇಹದ ಶಾಖಕ್ಕೆ ಉತ್ತಮ.
ಅಂಬಲಿ/ರಾಗಿ ಗಂಜಿ : ಒಂದು ಚಮಚ ರಾಗಿಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ತಣಿಸಿ. ಮಜ್ಜಿಗೆ, ಈರುಳ್ಳಿ, ಉಪ್ಪು ಸೇರಿಸಿ ಸೇವಿಸಿ. ಇದು ದೇಹ ತಂಪಾಗಿರಿಸುತ್ತದೆ. ಬಹಳ ಹೊತ್ತು ಶಕ್ತಿ ನೀಡುತ್ತದೆ.
ಕೋಕಮ್ ಶರಬತ್ : ಒಣಗಿದ ಕೋಕಮ್ 2 ಗಂಟೆ ನೆನೆಸಿ ಸಕ್ಕರೆ, ಜೀರಿಗೆ ಪುಡಿ, ಉಪ್ಪು ಸೇರಿಸಿ ಸೇರಿಸಿ. ಪಿತ್ತ, ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ, ಅಜೀರ್ಣಕ್ಕೂ ಉತ್ತಮ ಪಾನೀಯವಿದು.
ಧನಿಯಾ ನೀರು : 1 ಚಮಚ ಧನಿಯಾ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೋಸಿ ಕುಡಿಯಿರಿ. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ.
ಕಲ್ಲಂಗಡಿ ರಸ : ಕಲ್ಲಂಗಡಿ, ಪುದೀನ, ಚಿಟಿಕೆ ಕರಿ ಉಪ್ಪು ಹಾಕಿ ಸೇವಿಸುವುದರಿಂದ ಡಿಹೈಡ್ರೇಶನ್‌ಗೆ ಬೆಸ್ಟ್, ಪಿತ್ತ ಶಮನ ಮಾಡುತ್ತದೆ.
ಏನು ಸೇವಿಸಬಾರದು
ಐಸ್ ವಾಟರ್/ತಂಪು ಪಾನೀಯ ಸೇವಿಸಬಾರದು. ಇದು ಜೀರ್ಣಾಗ್ನಿಯನ್ನು ನಂದಿಸುತ್ತದೆ, ಆಮ ಉತ್ಪತ್ತಿ ಮಾಡುತ್ತದೆ.
ಕೆಫೀನ್, ಮಧ್ಯಪಾನ. ಇದು ದೇಹವನ್ನು ಇನ್ನಷ್ಟು ಡ್ರೈ ಮಾಡುತ್ತವೆ, ಪಿತ್ತ ಹೆಚ್ಚಿಸುತ್ತವೆ.
ಹುಳಿ ಮಜ್ಜಿಗೆ- ತುಂಬಾ ಹುಳಿಯಾದ ಮಜ್ಜಿಗೆ ಸೇವಿಸಿದರೆ ಪಿತ್ತ ಹೆಚ್ಚಾಗಬಹುದು. ತಾಜಾ ಮಜ್ಜಿಗೆ ಸೇವಿಸುವುದು ಉತ್ತಮ.











