ನವದೆಹಲಿ : ಸಂಸತ್ ಅಧಿವೇಶನ ಶುಕ್ರವಾರ ಕೆಲ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದ್ದು ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಮಾತುಗಳ ಮೂಲಕ ಇಡೀ ಸದನವನ್ನು ಕೆಲಕಾಲ ನಗೆಗಡಲಲ್ಲಿ ತೇಲಿಸಿದರು.
ಮಹಿಳಾ ಕೋಟಾ ಕಾನೂನಿಗೆ ತಿದ್ದುಪಡಿ ಸೇರಿದಂತೆ ಮೂರು ಮಸೂದೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನನಗೂ-ಪ್ರಧಾನಿ ಮೋದಿಗೂ ಪತ್ನಿ ಸಮಸ್ಯೆ ಇಲ್ಲ. ಹಾಗಾಗಿ ನಮಗೆ ಆ ಮಾಹಿತಿ ಸಿಗುವುದಿಲ್ಲ. ಆದರೆ, ನಮಗೆ ನಮ್ಮ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ಹೇಳಿದರು. ಪತ್ನಿ ಇಲ್ಲದಿದ್ದರೂ ತಾವು ತಮ್ಮ ಜೀವನದಲ್ಲಿ ಮಹಿಳೆಯರಿಂದ ಸಾಕಷ್ಟು ಕಲಿತಿದ್ದೇವೆ. ಮಹಿಳೆಯರು ರಾಷ್ಟ್ರೀಯ ಕಲ್ಪನೆ ಮತ್ತು ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪ್ರೇರಕ ಶಕ್ತಿಯಾಗಿದ್ದಾರೆ. ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಪ್ರಭಾವಿತರಾಗಿದ್ದೇವೆ. ಕಲಿಸಲ್ಪಟ್ಟಿದ್ದೇವೆ ಮತ್ತು ಅವರಿಂದ ಬಹಳಷ್ಟು ಕಲಿತಿದ್ದೇವೆ. ತಾಯಂದಿರು, ಸಹೋದರಿಯರು, ಹೆಂಡತಿಯರ ರೂಪದಲ್ಲಿ ಅವರು ನಮಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ರಾಹುಲ್ ಹೇಳಿದರು.
20 ವರ್ಷದಲ್ಲಿ ಮಾಡಲಾಗದ್ದನ್ನು ತಂಗಿ 5 ನಿಮಿಷದಲ್ಲಿ ಮಾಡಿ ತೋರಿದಳು
ತಮ್ಮ ಸಹೋದರಿ ಪ್ರಿಯಾಂಕಾ ವಾದ್ರಾ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನಾನು 20 ವರ್ಷದಲ್ಲಿ ಮಾಡಲಾಗದ್ದನ್ನು ತಂಗಿ ಪ್ರಿಯಾಂಕಾ 5 ನಿಮಿಷದಲ್ಲಿ ಮಾಡಿ ತೋರಿದಳು. ಆಕೆ ಅಮಿತ್ ಶಾ ಅವರನ್ನು ನಗುವಂತೆ ಮಾಡಿದಳು ಎಂದರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.

































