ಗೃಹಬಳಕೆ ಗ್ರಾಹಕರಿಗೆ ಅನಿಲ ವಿತರಣೆಯಲ್ಲಿ ಸಮಸ್ಯೆಯಾಗದಿರಲಿ – ಸಂಸದ ಕೋಟಾ

ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ನಿರ್ದಾಕ್ಷಿಣ್ಯ ಕ್ರಮ – ಜಿಲ್ಲಾಧಿಕಾರಿ ಎಚ್ಚರಿಕೆ

ಉಡುಪಿ : ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಯವರಿಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಮಾ. 31ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನಿಲ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಗಳ ವಿತರಣೆ ಅದರಲ್ಲಿಯೂ ಏಕ ಸಿಲಿಂಡರ್ ಹೊಂದಿರುವವರಿಗೆ ವಿತರಣೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯ ವಾಗುತ್ತಿತ್ತು. ಪಶ್ಚಿಮ ಏಷ್ಯಾ ದೇಶಗಳಲ್ಲಿನ ಯುದ್ಧದಿಂದಾಗಿ ಸಮರ್ಪಕವಾಗಿ ಅನಿಲ ಆಮದು ಆಗದಿರುವ ಕಾರಣ ಸ್ವಲ್ಪ ತೊಂದರೆಯಾಗಿದೆ ಎಂದರು.
ಗೃಹ ಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿತರಿಸಲು ಸರಕಾರ ಬದ್ಧವಿದೆ. ಗೃಹ ಬಳಕೆ ವಿತರಣೆಯಲ್ಲಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಹಾಗೂ ವಿತರಣಾ ಸಂಸ್ಥೆಯವರಿಗೆ ಸಂಸದರು ಸೂಚಿಸಿದರು.

ಪೆಟ್ರೋಲ್‌ ಡಿಸೇಲ್‌ ವಿತರಣೆಯಲ್ಲಿ ಸಮಸ್ಯೆಯಿಲ್ಲ
ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೆ ಅನಧಿಕೃತವಾಗಿ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಈಗಾಗಲೇ ಕೆಲವು ಗ್ರಾಹಕರು ಸಾಕಷ್ಟು ದಿನಗಳಿಂದ ಜನರೇಟರ್ ಗಳಿಗೆ ಹಾಗೂ ಮೀನುಗಾರಿಕಾ ಬೋಟ್ ಗಳಿಗೆ, ನಿರಂತರವಾಗಿ ಕೊಂಡೋಯುವವರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

25 ದಿನಗಳ ಅನಂತರ ಬುಕ್ಕಿಂಗ್‌ಗೆ ಅವಕಾಶ
ಏಕ ಬಳಕೆ ಸಿಲಿಂಡರ್ ಹೊಂದಿರುವ ಗ್ರಾಹಕರು ಸಿಲಿಂಡರ್ ಪಡೆದ 25 ದಿನಗಳ ಅನಂತರ ಹಾಗೂ ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರು ಅನಿಲ ಪೂರೈಕೆ ಮಾಡಿದ 35 ದಿನಗಳ ಅನಂತರ ಬುಕಿಂಗ್ ಮಾಡಲು ಅವಕಾಶವಿದೆ. ಆದಷ್ಟು ಮನೆ ಮನೆಗೆ ಗೃಹ ಬಳಕೆಯ ಸಿಲಿಂಡರ್ ವಿತರಣೆ ಮಾಡುವುದರೊಂದಿಗೆ ಏಜನ್ಸಿ ಗಳ ಮುಂದೆ ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವಿತರಕರಿಗೆ ಡಿಸಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ಯಾಸ್ ಏಜನ್ಸಿ ಹಾಗೂ ಬಂಕುಗಳ ಮಾಲೀಕರು, ವಿತರಕರು ಉಪಸ್ಥಿತರಿದ್ದರು.





























































































error: Content is protected !!
Scroll to Top