ಗುರು ಇಷ್ಟೊಂದು ಲಘುವಾದನೇ

ಒಂದು ಕಾಲದಲ್ಲಿ ಶಿಕ್ಷಕರಿಗೆ ವೇತನ ತುಂಬಾ ಕಡಿಮೆ ಇತ್ತು. ಆದರೆ ಸಾಮಾಜಿಕ ಗೌರವ ಹೆಚ್ಚಿತ್ತು. ಅದರಿಂದ ಆಸಕ್ತಿ ಇರುವ ಮಂದಿ ಮಾತ್ರ ಶಿಕ್ಷಕ ವೃತ್ತಿಗೆ ಬರುತ್ತಿದ್ದರು. ಶಿಕ್ಷಕ ವೃತ್ತಿಯಲ್ಲಿ ಈಗ ಇರುವಷ್ಟು ಒತ್ತಡ ಇರಲಿಲ್ಲ. ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಶಿಕ್ಷಣದ ಗುಣಮಟ್ಟವು ಚೆನ್ನಾಗಿತ್ತು. ಪೋಷಕರಿಗೂ ಮಕ್ಕಳ ವಿದ್ಯಾಭ್ಯಾಸವು ಒಂದು ಪ್ರೆಸ್ಟೀಜ್ ಆಗಿರಲಿಲ್ಲ. ಗುರು ಶಿಷ್ಯರ ಸಂಬಂಧವೂ ಚೆನ್ನಾಗಿತ್ತು.

ಎಂಬತ್ತರ ದಶಕದಲ್ಲಿ ಶಿಕ್ಷಕರ ವೇತನವು ದೊಡ್ಡ ಮಟ್ಟದಲ್ಲಿ ಪರಿಷ್ಕೃತವಾಯಿತು. ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಕರ ವೇತನವನ್ನು ದೊಡ್ಡದಾಗಿ ಪರಿಷ್ಕರಣೆ ಮಾಡಿದರು. ಬಳಿಕ ಹಲವು ಬಾರಿ ವೇತನ ಹೆಚ್ಚಳ ಆಯ್ತು. ಶಿಕ್ಷಕರಿಗೂ ಆಕರ್ಷಕವಾದ ವೇತನವು ದೊರೆಯಲಾರಂಭವಾಯಿತು. ಅದರಿಂದ ಹೆಚ್ಚು ಹೆಚ್ಚು ಯುವಜನತೆ ಶಿಕ್ಷಕ ವೃತ್ತಿಗೆ ಬರುವಂತಾಯಿತು. ಸರಕಾರವೂ ಹೆಚ್ಚು ಹೆಚ್ಚು ಶಿಕ್ಷಕರ ನೇಮಕಾತಿ ಮಾಡಿತು. ಗೋವಿಂದೇಗೌಡ ಅವರು ಶಿಕ್ಷಣ ಸಚಿವರಾಗಿದ್ದ ವೇಳೆ ಅತಿ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿ ದಾಖಲೆಯನ್ನು ಬರೆದರು. ಆಕರ್ಷಕ ಶೈಕ್ಷಣಿಕ ಯೋಜನೆಗಳು ಜಾರಿಗೆ ಬಂದವು. ಬಿ.ಎಡ್ ಮತ್ತು ಡಿ.ಎಡ್ ಕಾಲೇಜುಗಳು ಗಣನೀಯವಾಗಿ ಏರಿಕೆ ಕಂಡಿತು. ಸರಕಾರಿ ಶಾಲೆಗಳು ನಳನಳಿಸಿದವು. ಶಿಕ್ಷಣದ ಗುಣಮಟ್ಟ ಇನ್ನೂ ಎತ್ತರಕ್ಕೆ ಏರಿತು. ಕನ್ನಡ ಶಾಲೆಗಳ ಯಶೋಗಾಥೆಗಳು ಎಲ್ಲ ಕಡೆಗಳಲ್ಲಿ ಕೇಳಿಬಂದವು. ಶಿಕ್ಷಕರಲ್ಲಿ ಒಂದು ಪ್ರೌಡ್ ಫೀಲಿಂಗ್ ಮತ್ತು ಸಾರ್ಥಕತೆಗಳು ಎದ್ದು ಕಂಡವು. ಶಿಕ್ಷಕರು ದಾಖಲೆ ನಿರ್ವಹಣೆಗೆ ಹೆಚ್ಚು ಪ್ರಾಮುಖ್ಯತೆ ಕೊಡದೇ ತರಗತಿಯ ಬೋಧನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟರು. 80-90ರ ಶಿಕ್ಷಕರು ಒಬ್ಬರೂ ಗೊಣಗಿದ್ದು ಇಲ್ಲವೇ ಇಲ್ಲ. ಶಿಕ್ಷಕರ ಬದುಕು ನೆಮ್ಮದಿಯಿಂದ ಕೂಡಿತ್ತು.

ಆದರೆ ಇಂದು ಯಾವುದೇ ಶಿಕ್ಷಕರನ್ನು ಮಾತಾಡಿಸಿ ನೋಡಿ. ಇಂದಿನ 90% ಶಿಕ್ಷಕರು ತಮ್ಮ ಒಂದಲ್ಲ ಒಂದು ಸಮಸ್ಯೆಯ ಬಗ್ಗೆ ಅಥವಾ ಒತ್ತಡದ ಬಗ್ಗೆ ಮಾತಾಡುತ್ತಾರೆ. ಶಿಕ್ಷಕರ ಗೊಣಗಾಟಗಳು ಇಂದು ಹೆಚ್ಚು ಕೇಳಿ ಬರುತ್ತಿವೆ. ವ್ಯವಸ್ಥೆಯ ಬಗ್ಗೆ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ದಾಖಲಿಸಲಾಗಿದೆ.

ಗೊಣಗಾಟ, ಆಕ್ಷೇಪ, ಅಸಹನೆ
ಶಿಕ್ಷಣರಂಗದಲ್ಲಿ ಇಂದು ಅನಾರೋಗ್ಯಕರವಾದ ಸ್ಪರ್ಧೆ ಇದೆ. ಇದರಿಂದ ಶಿಕ್ಷಕರು ಒತ್ತಡದಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಪ್ರೋಟೋಕಾಲ್ ಎಂಬ ಹೆಸರಿನಲ್ಲಿ ಕೆಲವು ಶಾಲೆಗಳಲ್ಲಿ ರಾಜಕಾರಣಿಗಳು ಅನಾವಶ್ಯಕ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಲವು ಕಡೆ ಎಸ್‌ಡಿಎಂಸಿ ಸದಸ್ಯರು ಬಂದು ಶಿಕ್ಷಕರ ಮೇಲೆ ಸವಾರಿ ಮಾಡುತ್ತಿದ್ದಾರೆ.
ಆಂಗ್ಲಮಾಧ್ಯಮ ಶಾಲೆಗಳ ಭರಾಟೆಯಿಂದ (ಅದೊಂದೇ ಕಾರಣ ಅಲ್ಲ ಎಂದು ಅನ್ನಿಸುತ್ತದೆ) ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಕಡಿಮೆ ಆಗುತ್ತಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನು ಇಂದಿನ ಹೆಚ್ಚಿನ ಪೋಷಕರು ಒಂದು ಪ್ರೌಡ್ ಫೀಲಿಂಗ್ ಎಂದು ಭಾವಿಸುತ್ತಿಲ್ಲ !
ಶಿಕ್ಷಕರನ್ನು ಇಲಾಖೆಯು ಶೈಕ್ಷಣಿಕ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ.
ಎಲ್ಲ ಕನ್ನಡ ಶಾಲೆಗಳಲ್ಲಿ 50% ಶಿಕ್ಷಕರ ಕೊರತೆಯಿದೆ. ಏಳು ತರಗತಿ ಇರುವ ಶಾಲೆಗಳಲ್ಲಿ ಒಂದೆರಡು ಅಧ್ಯಾಪಕರು ಇದ್ದರೆ ಎಲ್ಲ ಮಕ್ಕಳಿಗೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೂರಾರು ಏಕೋಪಾಧ್ಯಾಯ ಶಾಲೆಗಳು ಇವೆ. ಈ ಶಿಕ್ಷಕರ ಖಾಲಿ ಹುದ್ದೆಗಳನ್ನು ಸರಕಾರವು ಮೊದಲು ತುಂಬಿಸಬೇಕು ಎನ್ನುವುದು ಅವರೆಲ್ಲರ ಕಾಳಜಿ.
ಶಾಲೆಗಳಲ್ಲಿ (ಅಗತ್ಯಕ್ಕಿಂತ ಹೆಚ್ಚು ) ದಾಖಲೆಗಳ ನಿರ್ವಹಣೆಗೆ ಹೆಚ್ಚು ಸಮಯ ವ್ಯರ್ಥವಾಗುತ್ತಿದೆ. ಶಿಕ್ಷಕರಿಗೆ ಪಾಠ ಮಾಡಲು ಹೆಚ್ಚಿನ ಮುತುವರ್ಜಿ ಇದ್ದಾಗ್ಯೂ ಸಮಯವು ದೊರೆಯುತ್ತಿಲ್ಲ.
ಶಿಕ್ಷಕರ ಮೇಲೆ ಕಿರುಕುಳ ಮತ್ತು ಕುಹಕಗಳು ಹೆಚ್ಚಾಗುತ್ತಿವೆ. ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳ ಹೆಸರಿನಲ್ಲಿ ಶಿಕ್ಷಕರ ಮೇಲೆ ಸುಳ್ಳು ಆರೋಪಗಳ ಸಂಖ್ಯೆಯು ಹೆಚ್ಚಾಗುತ್ತಾ ಇದೆ. ಈ ಕಾನೂನುಗಳ ಬಗ್ಗೆ ಎಲ್ಲ ಶಿಕ್ಷಕರಿಗೆ ಗೌರವ ಇದೆ. ಆದರೆ ಸುಳ್ಳು ಆರೋಪಗಳ ಆಧಾರದಲ್ಲಿ ಬಲಿಪಶು ಆಗೋದು ಅವರೇ.
ಶಿಕ್ಷಣಕ್ಕೆ ಬೆಂಬಲವಾಗಿ ಸರಕಾರವು ಮಕ್ಕಳಿಗೆ ಶೂ, ಪುಸ್ತಕ, ಬ್ಯಾಗು ಎಲ್ಲವನ್ನೂ ಕೊಡುತ್ತಿದೆ. ಅದು ಖಂಡಿತವಾಗಿ ಒಳ್ಳೆಯ ಯೋಜನೆ. ಆದರೆ ಅವುಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ. ದುಡ್ಡು ತಡವಾಗಿ ಬರ್ತಾ ಇದೆ. ಅವುಗಳ ದಾಖಲೆ ನಿರ್ವಹಣೆಯೂ ತುಂಬಾ ಕಷ್ಟವಾದ ಕೆಲಸ. ಶಾಲೆಯಲ್ಲಿ ಬಿಸಿ ಊಟದ ಮತ್ತು ಪೌಷ್ಟಿಕ ಆಹಾರ ಮೊಟ್ಟೆಯ ವಿತರಣೆ ಬಹಳ ಉತ್ತಮ ಯೋಜನೆಯೇ. ಆದರೆ ಅಲ್ಲಿಯೂ ದಾಖಲೆಗಳ ನಿರ್ವಹಣೆ ಶಿಕ್ಷಕರಿಗೆ ಒಂದು ಸವಾಲೇ ಸರಿ. ಹೆಚ್ಚಿನ ಶಾಲೆಗಳಲ್ಲಿ ಗುಮಾಸ್ತರ ಹುದ್ದೆ ಇಲ್ಲ. ಹಾಗಾದಾಗ ಶಿಕ್ಷಕರೇ ಗುಮಾಸ್ತರ ಕೆಲಸ ಮಾಡಬೇಕಾಗುತ್ತದೆ.
ಶಿಕ್ಷಕರ ತೀವ್ರವಾದ ಕೊರತೆ ಇರುವ ಕಾರಣ ಸರಕಾರಿ ಶಾಲೆಗಳಿಗೆ ಸರಕಾರವೇ ಗೌರವ ಶಿಕ್ಷಕರನ್ನು ನೀಡಿದೆ. ಆದರೆ, ಅವರಿಗೆ ಕೊಡುವ ವೇತನವು ಏನೇನೂ ಸಾಲದು. ಅವರನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವೇತನ ಕೊಡದೇ ಬಿಡುಗಡೆ ಮಾಡುವುದು ಕೂಡ ಅನ್ಯಾಯವೇ. ಅನುದಾನಿತ ಶಾಲೆಗಳಿಗೆ ಸರಕಾರವು ಗೌರವ ಶಿಕ್ಷಕರನ್ನು ಕೂಡ ನೀಡುತ್ತಿಲ್ಲ. ನಿವೃತ್ತಿ ಆಗಿ ಹೋದ ಹುದ್ದೆಗಳಿಗೆ ನೇಮಕಾತಿ ಕೂಡ ಮಾಡುತ್ತಿಲ್ಲ.
ಶಿಕ್ಷಕರು ಬಿಡುವಿಲ್ಲದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಇಡೀ ವರ್ಷ ಉಸಿರುಕಟ್ಟುತ್ತಿದ್ದಾರೆ. ರಜೆಗಳ ಅವಧಿಯಲ್ಲಿಯೂ ಅವರಿಗೆ ಜನಗಣತಿ, ಜಾತಿಗಣತಿ, ಬಿಎಲ್ಒ ಮೊದಲಾದ ಒತ್ತಡದ ಕರ್ತವ್ಯಗಳು ಇರುತ್ತವೆ. ಅವುಗಳನ್ನು ಕಾಲಮಿತಿಯಲ್ಲಿ ಮುಗಿಸಬೇಕಾದ ಒತ್ತಡದಲ್ಲಿ ಶಿಕ್ಷಕರು ಹೈರಾಣ ಆಗ್ತಾ ಇದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರದ ಯಾವ ಗಣತಿ ಬಂದರೂ ಸರಕಾರವು ನಂಬುವುದು ಮತ್ತು ಒತ್ತಡ ಹಾಕುವುದು ಶಿಕ್ಷಕರ ಮೇಲೆಯೇ. ಪ್ರೌಢಶಾಲೆ ಮತ್ತು ಪದವಿಪೂರ್ವ ತರಗತಿಗಳಿಗೆ ಪಾಠ ಮಾಡುವ ಶಿಕ್ಷಕರ ಮೇಲೆ ಬೇಡ ಬೇಡವೆಂದರೂ ಫಲಿತಾಂಶ ತರುವ ಒತ್ತಡ ಶಿಕ್ಷಕರನ್ನು ಖಾಲಿ ಮಾಡುತ್ತಿದೆ. ಕನ್ನಡ ಶಾಲೆಗಳಲ್ಲಿ ವರ್ಷ, ವರ್ಷ ಬರುವ ವಿದ್ಯಾರ್ಥಿಗಳ ಗುಣಮಟ್ಟ ಕುಸಿಯುತ್ತಿದೆ ಎನ್ನುವ ಆರೋಪಗಳ ನಡುವೆ ಫಲಿತಾಂಶ ತರಲು ಎಲ್ಲರೂ ಒತ್ತಡ ಹಾಕುತ್ತಾರೆ. ಪೋಷಕರೂ ಅದನ್ನು ನಿರೀಕ್ಷೆ ಮಾಡುತ್ತಾರೆ. ಇದರಿಂದಾಗಿ ಮನಸಿಲ್ಲದಿದ್ದರೂ ಶಿಕ್ಷಕರು ಮಕ್ಕಳನ್ನು ಬದುಕಿಗೆ ಸಿದ್ಧಮಾಡುವುದನ್ನು ಬಿಟ್ಟು ಪರೀಕ್ಷೆಗೆ ಸಿದ್ಧಮಾಡುವ ಕೆಲಸಕ್ಕೆ ಇಳಿಯುತ್ತಿದ್ದಾರೆ.
ಇಲಾಖೆಗಳು ಕೇಳುವ ಮಾಹಿತಿಗಳು ಹೆಚ್ಚಾಗುತ್ತಿವೆ. ಪ್ರತೀ ನಿತ್ಯವೂ ಎಂಬಂತೆ ನಡೆಯುವ ಗೂಗಲ್ ಮೀಟಿಂಗ್‌ಗಳು, ಅವುಗಳಿಗೆ ಮಾಡಬೇಕಾದ ತಯಾರಿ, ಸಿದ್ಧಪಡಿಸಬೇಕಾದ ದಾಖಲೆಗಳು ಇವುಗಳ ನಡುವೆ ಅನೇಕ ಒಳ್ಳೆಯ ಶಿಕ್ಷಕರು ಕಳೆದುಹೋಗುತ್ತಿದ್ದಾರೆ. ಗೂಗಲ್ ಫಾರಂ, ಇನ್ಸ್ಟಂಟ್ ಮಾಹಿತಿಗಳು ಅವರನ್ನು ಖಾಲಿ ಮಾಡುತ್ತಿವೆ.
ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸುವ ಕಾರ್ಯವಾಗುತ್ತಿಲ್ಲ. ಅನೇಕ ಒಳ್ಳೆಯ ಮತ್ತು ಸಂಪನ್ಮೂಲ ಶಿಕ್ಷಕರು ಇಂದಿಗೂ ಪ್ರಶಸ್ತಿ ಮತ್ತು ಮನ್ನಣೆಗಳಿಂದ ವಂಚಿತರಾಗುತ್ತ ಇರುವುದು ಸತ್ಯ. ಒಟ್ಟಿನಲ್ಲಿ ಇಂದು ಸರಕಾರಿ, ಅನುದಾನಿತ, ಅನುದಾನರಹಿತ ಯಾವುದೇ ಸ್ತರದ ಶಿಕ್ಷಕರೂ ಇದೇ ರೀತಿಯ ಒಂದಲ್ಲ ಒಂದು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಕೆಲವರು ಬಾಯಿ ಬಿಟ್ಟು ಹೇಳುತ್ತಾರೆ. ಕೆಲವರು ಸುಮ್ಮನೆ ಇದ್ದು ಬಿಡುತ್ತಾರೆ. ಒಗ್ಗಟ್ಟಲ್ಲಿ ಎಲ್ಲವನ್ನೂ ಎದುರಿಸುವ ಧೈರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಶಿಕ್ಷಕರು ತಮ್ಮ ಗುರುತ್ವವನ್ನು ಕಳೆದುಕೊಂಡು ಒಬ್ಬ ನೌಕರನ ಮಟ್ಟಕ್ಕೆ ಬಂದಿರುವುದು ನಿಜವಾಗಿಯೂ ವಿಷಾದನೀಯ. ಈಗ ಕೆಲಸ ಮಾಡುತ್ತಿರುವ ಶಿಕ್ಷಕರಲ್ಲಿ ಕನಿಷ್ಠ 80%ರಷ್ಟು ಶಿಕ್ಷಕರು ‘ಸಾಕಾಗಿ ಹೋಗಿದೆ ಸರ್’ ಎನ್ನುತ್ತಿದ್ದಾರೆ. ನಮ್ಮ ಮಕ್ಕಳು ಯಾರೂ ನಮ್ಮ ನಂತರ ಈ ಶಿಕ್ಷಕ ವೃತ್ತಿಗೆ ಬರುವುದೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ.





























































































error: Content is protected !!
Scroll to Top